More

    ದಕ್ಷಿಣಕಾಶಿ ನಂಜನಗೂಡಿನಲ್ಲಿ ಕಮಲ-ಕೈ ನಡುವೆ ನೇರ ಹಣಾಹಣಿ

    ಸದೇಶ್ ಕಾರ್ಮಾಡ್ ಮೈಸೂರು

    ದಕ್ಷಿಣಕಾಶಿ ನಂಜನಗೂಡು ವಿಧಾನಸಭಾ ಕ್ಷೇತ್ರ (ಪರಿಶಿಷ್ಟ ಜಾತಿ ಮೀಸಲು) ಈ ಬಾರಿ ಎರಡು ರಾಷ್ಟ್ರೀಯ ಪಕ್ಷಗಳು ಹಾಗೂ ಎರಡು ವಿಷಯಗಳ ಆಧಾರದ ಮೇಲೆ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆಯಾಗಿದೆ.

    ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಬಿ. ಹರ್ಷವರ್ಧನ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ದರ್ಶನ್ ಕಣಕ್ಕಿಳಿದಿದ್ದಾರೆ. ಕಣದಲ್ಲಿ ಬಿಎಸ್‌ಪಿ ಅಭ್ಯರ್ಥಿ ಶ್ರೀಕಂಠ ಸೇರಿದಂತೆ ಒಟ್ಟು 12 ಅಭ್ಯರ್ಥಿಗಳು ಇದ್ದಾರೆ. ಆದರೆ, ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಕಂಡು ಬಂದಿದೆ. ಬಿಜೆಪಿ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದು, ಕಾಂಗ್ರೆಸ್ ಅನುಕಂ ಪದ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದೆ. ಈ ಬಾರಿ ಮತದಾರರು ಅಭಿವೃದ್ಧಿಗೆ ಮಣೆ ಹಾಕುತ್ತಾರೋ ಅಥವಾ ಅನುಕಂಪದ ಆಧಾರದ ಮೇಲೆ ಮತ ಚಲಾಯಿಸುತ್ತಾರೋ ಎಂಬುದು ಎಲ್ಲರ ಕುತೂಹಲದ ಪ್ರಶ್ನೆಯಾಗಿದೆ. ಕ್ಷೇತ್ರದ ಎಲ್ಲ ಕಡೆಗಳಲ್ಲೂ ಇದೇ ಚರ್ಚೆಯ ವಿಷಯವಾಗಿದೆ.

    ಬದಲಾದ ರಾಜಕೀಯ ಚಿತ್ರಣ

    ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರ ಅಕಾಲಿಕ ನಿಧನದಿಂ ದಾಗಿ ಅವರ ಪುತ್ರ ದರ್ಶನ್ ಧ್ರುವನಾರಾಯಣ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಬಿಜೆಪಿಯಿಂದ ಶಾಸಕ ಬಿ.ಹರ್ಷವರ್ಧನ್ ಎರಡನೇ ಬಾರಿ ಕಣಕ್ಕಿಳಿದಿದ್ದಾರೆ. ಆರ್. ಧ್ರುವನಾರಾಯಣ ಹಾಗೂ ಅವರ ಪತ್ನಿ ವೀಣಾ ಕೆಲವೇ ದಿನಗಳ ಅಂತರದಲ್ಲಿ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ಜೆಡಿಎಸ್ ಈ ಬಾರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಹೀಗಾಗಿ ಈ ಬಾರಿ ಜೆಡಿಎಸ್‌ನ ಸಾಂಪ್ರದಾಯಿಕ ಮತಗಳನ್ನು ಸೆಳೆಯುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಕಾಂಗ್ರೆಸ್ ಅಭ್ಯರ್ಥಿ ದರ್ಶನ್‌ಗೆ ಅನುಕಂಪ, ಕಾಂಗ್ರೆಸ್ ಸರ್ಕಾರದ ಸಾಧನೆ ಹಾಗೂ ಆರ್. ಧ್ರುವನಾರಾಯಣ ಅವರು ಚಾಮರಾಜನಗರ ಸಂಸದರಾಗಿದ್ದ ಸಂದರ್ಭ ನಂಜನಗೂಡು ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಶ್ರೀಕರಕ್ಷೆಯಾಗಿದೆ. ಕ್ಷೇತ್ರದ ಮೇಲೆ ಸಾಕಷ್ಟು ಹಿಡಿತ ಹೊಂದಿರುವ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅವರು ಸೋದರ ಸಂಬಂಧಿಯೂ ಆಗಿರುವ ಧ್ರುವನಾರಾಯಣ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಗೆಲುವಿಗೆ ಟೊಂಕಕಟ್ಟಿ ನಿಂತಿ ದ್ದಾರೆ.

    ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುತ್ತಿದ್ದು, ಉಭಯ ಪಕ್ಷಗಳಿಗೂ ಗೆಲುವು ಸುಲಭ ಸಾಧ್ಯವೇನು ಅಲ್ಲ. ಸುದೀರ್ಘ 4 ದಶಕಗಳಿಂದ ನಂಜನಗೂಡು ಕ್ಷೇತ್ರದ ನಾಡಿಮಿಡಿತ ಬಲ್ಲವರಾದ ಸಂಸದ ವಿ.ಶ್ರೀನಿವಾಸಪ್ರಸಾದ್ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್ ಅವರ ಮಾವ ಆಗಿದ್ದು, ಅಳಿಯನ ಗೆಲುವಿಗೆ ಪಣತೊಟ್ಟು ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಕೆಲವು ದಿನಗಳಿಂದ ಬೀಡುಬಿಟ್ಟಿರುವ ಶ್ರೀನಿವಾಸ ಪ್ರಸಾದ್ ಮತದಾರರನ್ನು ಸೆಳೆಯುವ ಕಸರತ್ತು ನಡೆಸುತ್ತಿದ್ದಾರೆ.

    nanjangud assembly constituency

    ಬಿಜೆಪಿ, ಕಾಂಗ್ರೆಸ್‌ನಿಂದ ಅಬ್ಬರ ಪ್ರಚಾರ

    ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಅಬ್ಬರದ ಪ್ರಚಾರ ನಡೆಸುವ ಮೂಲಕ ಮತದಾರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಕ್ರಮವಾಗಿ ದಲಿತರು, ವೀರಶೈವ ಲಿಂಗಾಯತರು, ಪರಿಶಿಷ್ಟ ಪಂಗಡ, ಉಪ್ಪಾರ, ಕುರುಬ, ಮುಸ್ಲಿಂ, ಒಕ್ಕಲಿಗ ಸಮುದಾಯದ ಪ್ರಾಬಲ್ಯ ಕಂಡು ಬಂದಿದ್ದು, ಜಾತಿ ಆಧಾರದ ಮೇಲೆ ಮತಗಳನ್ನು ಸೆಳೆಯಲು ಆಯಾ ಸಮುದಾಯದ ನಾಯಕರುಗಳನ್ನು ಕರೆಯಿಸಿ ಚುನಾವಣಾ ಪ್ರಚಾರ ನಡೆಸಲಾಗುತ್ತಿದೆ.

    ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಚುನಾವಣಾ ಪ್ರಚಾರ ನಡೆಸಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದರು. ನಂಜನಗೂಡಿನ ಪಕ್ಕದ ಕ್ಷೇತ್ರ ತಿ.ನರಸೀಪುರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪಾಲ್ಗೊಂಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರೋಡ್ ಶೋ ನಡೆಸಿದ್ದಾರೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಟಿ ರಮ್ಯ ಒಂದೆರಡು ದಿನಗಳಲ್ಲಿ ಪ್ರಚಾರ ನಡೆಸುವ ಸಾಧ್ಯತೆ ಇದೆ. ಮೇ 5 ರಂದು ನಟ ಸುದೀಪ್ ಬಿಜೆಪಿ ಅಭ್ಯರ್ಥಿ ಬಿ.ಹರ್ಷವರ್ಧನ್ ಪರ ಪ್ರಚಾರ ನಡೆಸಲಿದ್ದಾರೆ.

    ನಂಜನಗೂಡಿಗೆ ಮೇ 7ಕ್ಕೆ ಮೋದಿ

    ನಂಜನಗೂಡಿನ ಎಲಚಗೆರೆಯಲ್ಲಿ ಮೇ 7 ರಂದು ಬಿಜೆಪಿ ಹಮ್ಮಿಕೊಂಡಿರುವ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದು, ಇದು ನರೇಂದ್ರ ಮೋದಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಡೆಸುವ ಕಡೆಯ ಬಹಿರಂಗ ಚುನಾವಣಾ ಪ್ರಚಾರ ಸಭೆಯಾಗಿದೆ. ಕ್ಷೇತ್ರಕ್ಕೆ ಮೋದಿ ಆಗಮನ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಲಿದ್ದು, ಇದು ಎಷ್ಟು ಮತಗಳಾಗಿ ಪರಿವರ್ತನೆಯಾಗುತ್ತದೆ ಎಂಬುದು ಕಾದು ನೋಡಬೇಕಿದೆ.

    ನಂಜನಗೂಡಿನಲ್ಲಿ ವರುಣದ ಕಂಪನ..!

    ವರುಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮಣಿಸುವ ಸಲು ವಾಗಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ವಿ. ಸೋಮಣ್ಣ ಸ್ಪರ್ಧಿಸುತ್ತಿರುವುದು ವರುಣ ಕ್ಷೇತ್ರದಲ್ಲಾದರೂ ಅವರ ಸ್ಪರ್ಧೆಯ ಕಂಪನ ನಂಜನಗೂಡಿನಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನಂಜನಗೂಡು ಕ್ಷೇತ್ರದಲ್ಲಿ ದಲಿತ ಹಾಗೂ ಲಿಂಗಾಯತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ವಿ. ಸೋಮಣ್ಣ ಸ್ಪರ್ಧೆಯಿಂದ ಜಿಲ್ಲೆಯಲ್ಲಿ ಬಿಜೆಪಿಗೆ ಸಮರ್ಥ ನಾಯಕತ್ವ ದೊರೆತಂತೆ ಆಗಿದೆ.

    ಬದಲಾದ ಕ್ಷೇತ್ರದ ರಾಜಕೀಯ ಚಿತ್ರಣ

    ಕಳೆದ ನಾಲ್ಕು ದಶಕದ ರಾಜಕಾರಣ ಅವಲೋಕಿಸಿದರೆ ಈ ಕ್ಷೇತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ಭದ್ರಕೋಟೆಯಾಗಿತ್ತು. ಇದೀಗ ಕ್ಷೇತ್ರದ ಚಿತ್ರಣ ಬದಲಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಕಂಡು ಬರುತ್ತಿದೆ. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಾಗಿ ಪರಿಶಿಷ್ಟ ಜಾತಿಗೆ ಮೀಸಲು ಆದ ಬಳಿಕ ಕಾಂಗ್ರೆಸ್ ಪಕ್ಷದಿಂದ ವಿ.ಶ್ರೀನಿವಾಸಪ್ರಸಾದ್ 2008, 2013ರಲ್ಲಿ ಗೆಲುವು ಸಾಧಿಸಿದ್ದರು. 2018 ರಲ್ಲಿ ಬಿಜೆಪಿಯಿಂದ ತಮ್ಮ ಅಳಿಯ ಹರ್ಷವರ್ಧನ್ ಅವರನ್ನು ವಿ.ಶ್ರೀನಿವಾಸ ಪ್ರಸಾದ್ ಗೆಲ್ಲಿಸಿಕೊಂಡಿದ್ದರು. 2008, 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕಳಲೆ ಕೇಶವಮೂರ್ತಿ ಸೋತಿದ್ದರೂ ತಮ್ಮದೇ ಆದ ಮತಬ್ಯಾಂಕ್ ಗಟ್ಟಿಮಾಡಿ ಕೊಂಡಿದ್ದರು. 2017ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಕಳಲೆ ಕೇಶವಮೂರ್ತಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ಶ್ರೀನಿವಾಸ ಪ್ರಸಾದ್ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಆದರೆ, 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಹರ್ಷವರ್ಧನ್ ಎದುರು ಕಳಲೆ ಕೇಶವಮೂರ್ತಿ ಸೋಲು ಅನುಭವಿಸಿದ್ದರು.

    ಮತದಾರರ ವಿವರ

    ಒಟ್ಟು ಮತದಾರರು 2,20,393

    ಪುರುಷರು 1,09,887

    ಮಹಿಳೆಯರು 1,10,500

    ಇತರ 6

    2013ರ ಚುನಾವಣಾ ಫಲಿತಾಂಶ

    ಗೆದ್ದವರು ವಿ.ಶ್ರೀನಿವಾಸ ಪ್ರಸಾದ್

    ಪಕ್ಷ ಕಾಂಗ್ರೆಸ್

    ಪಡೆದ ಮತ 50,784

    ಸೋತವರು ಕಳಲೆ ಎನ್. ಕೇಶವಮೂರ್ತಿ

    ಪಕ್ಷ ಜೆಡಿಎಸ್

    ಪಡೆದ ಮತ 41,843

    ಗೆಲುವಿನ ಅಂತರ 8,941

    ಉಪ ಚುನಾವಣೆ ಫಲಿತಾಂಶ (2017)

    ಗೆದ್ದವರು ಕಳಲೆ ಎನ್. ಕೇಶವಮೂರ್ತಿ

    ಪಕ್ಷ ಕಾಂಗ್ರೆಸ್

    ಪಡೆದ ಮತ 86,212

    ಸೋತವರು ವಿ.ಶ್ರೀನಿವಾಸ ಪ್ರಸಾದ್

    ಪಕ್ಷ ಬಿಜೆಪಿ

    ಪಡೆದ ಮತ 64,878

    ಗೆಲುವಿನ ಅಂತರ 21,334

    2018ರ ಚುನಾವಣಾ ಫಲಿತಾಂಶ

    ಗೆದ್ದವರು ಬಿ. ಹರ್ಷವರ್ಧನ್

    ಪಕ್ಷ ಬಿಜೆಪಿ

    ಪಡೆದ ಮತ 78,030

    ಸೋತವರು ಕಳಲೆ ಎನ್. ಕೇಶವಮೂರ್ತಿ

    ಪಕ್ಷ ಕಾಂಗ್ರೆಸ್

    ಪಡೆದ ಮತ 65,551

    ಗೆಲುವಿನ ಅಂತರ 12,479

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts