More

    ಹರ್ಕಾ ಪರ್ಕಾ ಕೆಲಸಗಳನ್ನು ಮುಗಿಸಲೆಂದೇ ಒಂದು ರಜೆ ಹಾಕಿ…

    ತಕ್ಷಣ ಇರಿಟೇಟ್ ಆಗುತ್ತೆ.

    ಹರ್ಕಾ ಪರ್ಕಾ ಕೆಲಸಗಳನ್ನು ಮುಗಿಸಲೆಂದೇ ಒಂದು ರಜೆ ಹಾಕಿ...ಆ ಇರಿಟೇಷನ್ ತುಂಬ ಹೊತ್ತೇನೂ ಇರುವುದಿಲ್ಲ. ಆದರೆ ಇದ್ದಷ್ಟು ಹೊತ್ತಿನಲ್ಲೇ ನಮ್ಮ ಅವತ್ತಿನ ಎನರ್ಜಿ ಲೆವೆಲ್​ನ ಅಷ್ಟರ ಮಟ್ಟಿಗೆ ತಿಂದುಬಿಡುತ್ತದೆ. ಸಣ್ಣ ಉದಾಹರಣೆ ಕೊಡ್ತೀನಿ ನೋಡಿ. ನಿಮ್ಮ ಮನೆಯ ಅಲ್ಮೆರಾ ಬಾಗಿಲು ಅಥವಾ ವಾರ್ಡ್​ರೋಬ್​ನ ಬಾಗಿಲು ತೆರೆದಿದೆ. ಆಗಷ್ಟೆ ಸ್ನಾನ ಮುಗಿಸಿ ಬಂದವರು, ಎಲ್ಲಿಗೋ ಹೊರಡುವ ಅವಸರದಲ್ಲಿದ್ದೀರಿ. ಹೆಚ್ಚು ಯೋಚನೆ ಮಾಡದೆ ಕಪ್ಪು ಪ್ಯಾಂಟ್ ಹಾಕಿಕೊಳ್ಳುತ್ತೀರಿ. ಅದಕ್ಕೆ ಮ್ಯಾಚ್ ಆಗುವ, ನಿಮಗೆ ತುಂಬ ಇಷ್ಟವಾದ ಷರ್ಟು ಕೈಗೆತ್ತಿಕೊಳ್ಳುತ್ತೀರಿ. ಅದರ ಎರಡು ಗುಂಡಿ ಕಿತ್ತುಹೋಗಿವೆ. ಅಲ್ಲಿಂದ ಶುರುವಾಗುತ್ತದೆ ಇರಿಟೇಷನ್ನು. ಗುಂಡಿ ಹೊಲಿಯುತ್ತ ಕೂಡುವಷ್ಟು ಸಮಯವಿರುವುದಿಲ್ಲ. ಇನ್ನೊಂದು ಷರ್ಟು ಇದೆಯಾದರೂ, ಅದು ಮೊದಲಿನದರಷ್ಟು ಕರೆಕ್ಟಾಗಿ ಮ್ಯಾಚ್ ಆಗುವುದಿಲ್ಲ. ಅನಿವಾರ್ಯವಾಗಿ ಅದನ್ನೇ ಹಾಕಿಕೊಂಡು ಹೊರಡುತ್ತೀರಿ. ಇರಿಟೇಷನ್ನು ನಿಮ್ಮ

    ಜೊತೆಯಲ್ಲೇ ಹೊರಡುತ್ತದೆ. ಹೊಸಬರ್ಯಾರನ್ನೋ ಭೇಟಿಯಾದ ತಕ್ಷಣ ನಾನು ಸರಿಯಾದ ಷರಟು ಹಾಕಿಕೊಂಡುಬಂದಿಲ್ಲ ಅನ್ನಿಸುತ್ತಿರುತ್ತದೆ.

    ಸ್ವಲ್ಪ ಹೊತ್ತಿನ ನಂತರ ಅದೆಲ್ಲ ಮರೆತೂ ಹೋಗಬಹುದು. ಆದರೆ ಇರಿಟೇಷನ್ ಎಂಬುದು ತಾನಿದ್ದಷ್ಟು ಹೊತ್ತೂ ನಿಮ್ಮ ಎನರ್ಜಿ ಲೆವೆಲ್​ನ ಸಣ್ಣಗೆ ತಿನ್ನುತ್ತಲೇ ಇರುತ್ತದೆ. ಜೀವನದಲ್ಲಿ ಇಂಥ ಸಾವಿರಾರು, ಚಿಕ್ಕ ಚಿಕ್ಕ ಅಪಸವ್ಯಗಳಿರುತ್ತವೆ. ಅವುಗಳನ್ನು ಅಲ್ಲಲ್ಲೇ, ಅವತ್ತಿನದವತ್ತೇ ಮುಗಿಸಿಕೊಳ್ಳಬೇಕು. ಅರ್ಧಕ್ಕೆ ಬಿಟ್ಟ ಕೆಲಸವಿರುತ್ತದೆ. ಅದನ್ನು ಮುಗಿಸಬೇಕು. ಕೆಲಸಕ್ಕೇ ಬಾರದ ವಸ್ತುವೊಂದಿರುತ್ತದೆ. ಅದನ್ನು ಎಸೆಯಬೇಕು. ಇನ್ನೊಂದ್ಯಾವುದೋ ಕೆಲಸ ಯಾರು ಬೇಕಾದರೂ ಮಾಡಬಹುದಾದಂತಹುದು. ಅದನ್ನು ಇನ್ನೊಬ್ಬರಿಗೆ ಡೆಲಿಗೇಟ್ ಮಾಡಬೇಕು. ವಹಿಸಿ ಕೊಡಬೇಕು. ನಾವು ಅದನ್ನೆಲ್ಲ ಮಾಡುವುದೇ ಇಲ್ಲ. ಯಾಕೋ ಸುಮ್ಮನೆ ಕಾಲ ತಳ್ಳುತ್ತಿರುತ್ತೇವೆ. ಸೋಮಾರಿತನ ಅಂತಲೂ ಅಲ್ಲ. ‘ಮಾಡಿದರಾಯ್ತು ಬಿಡು’ ಎಂಬ ಉಡಾಫೆ.

    ಉಳಿದವರಿಗೆ ಹೇಳುವುದು ಹಾಗಿರಲಿ- ನನ್ನವೇ ಅರ್ಧ ಬರೆದ ಸ್ಕ್ರಿಪ್ಟ್​ಗಳನ್ನೆಲ್ಲ ಹುಡುಕಿ ಒಂದೆಡೆಗಿಟ್ಟು ಫೈಲ್ ಮಾಡಬೇಕು ಅಂತ ಅಂದುಕೊಂಡು ಎರಡು ವರ್ಷಗಳಾದವು. ನನ್ನೊಂದಿಗೆ ಕೆಲಸ ಮಾಡುವ ಹುಡುಗಿಯೊಬ್ಬಳಿಗೆ ಹೇಳಿದರೆ ಅರ್ಧದಿನದಲ್ಲಿ ಮಾಡಿಡುತ್ತಾಳೆ. ಆದರೆ ಉಹುಂ, ನಾನೇ ಮಾಡಬೇಕು ಅಂದುಕೊಳ್ಳುತ್ತೇನೆ. ವರ್ಷಗಳು ಉರುಳಿದರೂ ಮಾಡಿರುವುದಿಲ್ಲ. ಉರುಳಿದ ವರ್ಷಗಳಲ್ಲಿ ಅರ್ಧ ಬರೆದ ಸ್ಕ್ರಿಪ್ಟುಗಳು ಇನ್ನಷ್ಟು ಸೇರಿಕೊಳ್ಳುತ್ತವೆ. ಕೆಲಸ ಪೂರ್ತಿಯಾಗುವುದೇ ಇಲ್ಲ.

    ನೀವೂ ನನ್ನಂಥವರೇ ಆಗಿದ್ದರೆ ನಿಮಗೊಂದಷ್ಟು ಉದ್ರಿ ಸಲಹೆಗಳಿವೆ. ಟ್ರೈ ಮಾಡಿ ನೋಡಿ.

    ಇಂಥ ಅರೆಬರೆಯಾದ ಕೆಲಸಗಳನ್ನ ಮುಗಿಸಲಿಕ್ಕೆಂದೇ ಒಂದು ವಾರಾಂತ್ಯವನ್ನು ಮೀಸಲಿಡಿ. ನೀವು ವಾರದಲ್ಲಿ ಐದು ದಿನ ಕೆಲಸ ಮಾಡುವವರಾದರೆ ಮತ್ತೂ ಒಳ್ಳೆಯದು. ಕೊನೆಯ ಎರಡು ದಿನಗಳನ್ನು ಈ ಹರ್ಕಾ ಪರ್ಕಾ ಕೆಲಸಗಳನ್ನು ಮುಗಿಸಲೆಂದೇ ತೆಗೆದಿಡಿ. ಇಲ್ಲವೇ ರಜೆ ಹಾಕಿ. ಅಂಥ ಕೆಲಸಗಳದೊಂದು ಪಟ್ಟಿಯನ್ನೇ ಮಾಡಿಕೊಳ್ಳಬಹುದು. ಕೆಲವು ಪ್ರಾಮಿಸ್​ಗಳಿರುತ್ತವೆ. ನಾವು ಉಳಿಸಿಕೊಂಡಿರುವುದಿಲ್ಲ. ಯಾರಿಗೆ ಪ್ರಾಮಿಸ್ ಮಾಡಿದ್ದೇವೋ, ಅವರಿಗೆ ಅದು ನೆನಪಿರುತ್ತದೆ. ನಾವು ಠಟ್ಟ್ಟ ಕೂಡ ಹೇಳಿರುವುದಿಲ್ಲ. ಕಡೇಪಕ್ಷ ಅದನ್ನು ಈಡೇರಿಸುವ ಬಗ್ಗೆ rಛ್ಞಿಛಿಜಟಠಿಜಿಚಠಿಛಿ ಕೂಡ ಮಾಡಿರುವುದಿಲ್ಲ. ನಮಗೊಂದಿಷ್ಟು ಹಣ ಬರಬೇಕಾಗಿರುತ್ತದೆ ಅಥವಾ ನಾವು ಯಾರಿಗೋ ಕೊಡಬೇಕಾಗಿರುತ್ತದೆ. ಅಮೌಂಟು ಚಿಕ್ಕದೇ ಇರಬಹುದು. ಆದರೆ ಕೊಡುವ ಮತ್ತು ಇಸಿದುಕೊಳ್ಳುವ ವ್ಯವಹಾರದಲ್ಲಿ ಶಿಸ್ತಿಲ್ಲದಿದ್ದರೆ ನಾವು ಬದುಕಿನಲ್ಲಿ ಮುಂದಾಗುವುದಿಲ್ಲ. ನಮ್ಮ ವಾರ್ಡ್​ರೋಬಿಗೇ ವಾಪಸು ಬನ್ನಿ. ತುಂಬಿ ತುಳುಕುತ್ತಿರುತ್ತದೆ. ಆದರೆ ಅದರಲ್ಲಿನ ತುಂಬ ಬಟ್ಟೆಗಳನ್ನು ನಾವು ಹಾಕಿಕೊಳ್ಳುತ್ತಲೇ ಇರುವುದಿಲ್ಲ. ಮನೆಯ ಗ್ಯಾರೇಜಿನಲ್ಲಿ ಎಂಥವೋ ಕೆಲಸಕ್ಕೆ ಬಾರದ ಸಾಮಾನುಗಳನ್ನ ಒಟ್ಟಿರುತ್ತೇವೆ. ಅವನ್ನು ಉಪಯೋಗಿಸುವುದೂ ಇಲ್ಲ, ಎತ್ತಿಬಿಸಾಡುವುದೂ ಇಲ್ಲ. ನಮ್ಮ ಟ್ಯಾಕ್ಸ್ ರೆಕಾರ್ಡಗಳ ಫೈಲು ಅಚ್ಚುಕಟ್ಟಾಗಿಟ್ಟುಕೊಂಡಿರುವುದಿಲ್ಲ. ಬ್ಯಾಂಕಿಗೆ ಹಾಕಿದ ಅವರಿವರ ಚೆಕ್​ಗಳು ರಿಯಲೈಸ್ ಆಗಿವೆಯೇ ಎಂಬುದನ್ನು ನೋಡಿಕೊಂಡಿರುವುದಿಲ್ಲ. ಡ್ರಾವರ್​ನ ತುಂಬ ಕೆಲಸಕ್ಕೆ ಬಾರದ ಚೀಟಿಗಳು, ಬಿಲ್ಲುಗಳು, ಪತ್ರಗಳು, ವಿಸಿಟಿಂಗ್ ಕಾರ್ಡಗಳು, ಯಾರವೋ ಫೊಟೋಗಳು ತುಂಬಿ ತುಳುಕುತ್ತಿರುತ್ತವೆ. ಒಂದೂ ನಮಗೆ ಬೇಕಾಗಿರುವುದಿಲ್ಲ. ಅಗತ್ಯವಾಗಿ ಬೇಕಾದ ಟೂಲ್ ಬಾಕ್ಸಿನಿಂದ ತುಂಬ ಅಗತ್ಯವಾಗಿ ಬೇಕಾದ ಸುತ್ತಿಗೆ ನಾಪತ್ತೆಯಾಗಿರುತ್ತದೆ. ಕಾರಿನ ಹಿಂದಿನ ಸೀಟಿನಲ್ಲಿ ಕೆಲಸಕ್ಕೆ ಬಾರದ ವಸ್ತುಗಳನ್ನು

    ಒಟ್ಟಿಕೊಂಡಿರುತ್ತೇವೆ. ಡಿಕ್ಕಿಯಂತೂ ತೆರೆದು ನೋಡಿ ಯಾವ ರಾಯನ ಕಾಲವಾಗಿದೆಯೋ! ಇಷ್ಟು ಹೊತ್ತಿಗೆ ಕಾರನ್ನು ಸರ್ವೀಸಿಗೆ ಬಿಡಬೇಕಾಗಿತ್ತು. ಅದರ ಕಡೆಗೆ ಗಮನವೇ ಇರುವುದಿಲ್ಲ. ಮನೆಯ ಅಡಕಲ ಕೋಣೆ ಕೂಡ ಎರಡು ವರ್ಷದಿಂದ, ಬೇಡವಾದ ವಸ್ತುಗಳಿಂದ ತುಂಬಿ ತುಳುಕುತ್ತಿದೆ.

    ಕಂಪ್ಯೂಟರಿನಲ್ಲಿ ಮುಖ್ಯವಾದ ಮಾಹಿತಿಯಿದೆ. ಆದರೆ ನಾವು ಬ್ಯಾಕಪ್ ತೆಗೆದಿಟ್ಟುಕೊಂಡಿರುವುದಿಲ್ಲ. ನಿತ್ಯ ಕುಳಿತು ಕೆಲಸ ಮಾಡುವ ಡೆಸ್ಕು ರಣರಂಗವಾಗಿದೆ. ಮನೆಯವರವೇ ಫೊಟೋಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಆಲ್ಬಮ್ೆ ಹಾಕಿಡುವುದಿಲ್ಲ. ಮನಸು ಮಾಡಿದರೆ ನಾವೇ ಕೂತು ರಿಪೇರಿ ಮಾಡುವಂಥ ಒಂದಷ್ಟು ರಾಶಿ ವಸ್ತುಗಳು ಮನೆಯಲ್ಲಿವೆ. ವಸ್ತುಗಳಂತೆಯೇ, ಆಗೊಮ್ಮೆಈಗೊಮ್ಮೆ ರಿಪೇರಿಯಾಗಬೇಕಾದಂತಹ ಸಂಬಂಧಗಳಿರುತ್ತವೆ. ನಾವು ಮನಸು ಮಾಡಿರುವುದಿಲ್ಲ. ಕೆಲವರೊಂದಿಗೆ ನಾವು ಒಂದಷ್ಟು ಸಮಯ ಕಳೆಯೋದು ಬಾಕಿಯಿರುತ್ತದೆ. ಅಂಥ ಬಾಕಿಗಳನ್ನು ಗೊತ್ತಿದ್ದೂ ಉಳಿಸಿಕೊಂಡಿರುತ್ತೇವೆ.

    ಹಾಗಂತ ನಾವು ಸೋಮಾರಿಗಳಾ ಎಂದು ಕೇಳಿಕೊಂಡರೆ, ಅದೂ ಅಲ್ಲ. ದಿನವಿಡೀ ದುಡಿಯುತ್ತಲೇ ಇರುತ್ತೇವೆ. ಯಾಕೋ ಬದುಕಿನಲ್ಲಿ ನಿರೀಕ್ಷಿಸಿದ ಮಟ್ಟದ ಯಶಸ್ಸು ಕಾಣುತ್ತಿಲ್ಲ ಅನ್ನಿಸುತ್ತಿರುತ್ತದೆ. ಇಷ್ಟು ಹೊತ್ತೂ ನಾನು ಬರೆದ ಚಿಕ್ಕ ಪುಟ್ಟ ವಿಷಯಗಳಿಗೂ ಬದುಕಿನ ಒಟ್ಟಾರೆ ಯಶಸ್ಸಿಗೂ ಏನು ಸಂಬಂಧವಿದೆ ಅಂದುಕೊಳ್ಳಬೇಡಿ. ಸಂಬಂಧ ಖಂಡಿತವಾಗ್ಯೂ ಇದೆ. ಎಂಥ ಚಿಕ್ಕಪುಟ್ಟ ವಿಷಯಗಳು ಕೂಡ ನಮ್ಮ ಶ್ರದ್ಧೆ ಬೇಡುತ್ತವೆ. ನಮ್ಮ ವೈಯಕ್ತಿಕ ಅಟೆನ್ಷನ್ ಮತ್ತು ಸಮಯ ಬೇಡುತ್ತದೆ. ತುಂಬ ಸಂತೋಷವಾಗಿರುವ, ನೆಮ್ಮದಿಯಾಗಿರುವ ಗೃಹಿಣಿಯನ್ನೇ ಗಮನಿಸಿ. ಪಾರ್ಟಿಗಳಿಗೆ ಬಂದಾಗ ಎಷ್ಟು ಅಚ್ಚುಕಟ್ಟಾಗಿರುತ್ತಾಳೋ, ಆಕೆ ಮನೆಯಲ್ಲೂ ಹಾಗೇ ಇರುತ್ತಾಳೆ. ಮನೆಯನ್ನೂ ಹಾಗೆ ಇಟ್ಟುಕೊಂಡಿರುತ್ತಾಳೆ. ಒಂದು ವಾರಾಂತ್ಯವನ್ನು ಕೇವಲ unfinished ಹರ್ಕಾ ಪರ್ಕಾ ಕೆಲಸಗಳನ್ನು ಪೂರ್ತಿ ಮಾಡಲಿಕ್ಕೆಂದೇ ಇಟ್ಟು ನೋಡಿ. ಯಶಸ್ಸಿನೆಡೆಗೆ ಮತ್ತೊಂದು ಹೆಜ್ಜೆ ಇಡುತ್ತಿದ್ದೇನೆ ಅಂತ ನಿಮಗೇ ಅನ್ನಿಸತೊಡಗುತ್ತದೆ. ಯಶಸ್ಸು ಎಂಬುದು ರಾತ್ರೋರಾತ್ರಿ ಬಂದು ಕದ ತಟ್ಟುವಂತಹುದಲ್ಲ. ಸ್ವಲ್ಪ ಸ್ವಲ್ಪವಾಗಿ ಮುಂದಕ್ಕೆ ಸರಿಯುವುದು, ವಿಸ್ತಾರಗೊಳ್ಳುವುದು, ಎತ್ತರಕ್ಕೆ ಏರುವುದು ಮತ್ತು ಕಡೆತನಕ ಎನರ್ಜಿ ಲೆವೆಲ್​ಗಳನ್ನು ಕಾದಿಟ್ಟುಕೊಳ್ಳುವುದು.

    (ಲೇಖಕರು ಹಿರಿಯ ಪತ್ರಕರ್ತರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts