More

    ನಮ್ಮ ಮೆಟ್ರೋ ವಿಸ್ತರಿತ ಮಾರ್ಗಕ್ಕೆ ಪ್ರಧಾನಿ ಚಾಲನೆ; ಕೇಂದ್ರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ

    ಬೆಂಗಳೂರು:
    ನಮ್ಮ ಮೆಟ್ರೋ ವಿಸ್ತರಿತ ಕೆ.ಆರ್.ಪುರ-ಬೈಯ್ಯಪ್ಪನಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಶುಕ್ರವಾರ ಚಾಲನೆ ನೀಡಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅವರಿಗೆ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರು ಹಾಗೂ ಇನ್ನಿತರ ಸಚಿವರುಗಳು ಬೆಂಗಳೂರು ಅಭಿವೃದ್ಧಿಗೆ ಸಹಕರಿಸುತ್ತಿರುವುದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.
    ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಪ್ರಯತ್ನದಿಂದ ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿ ನಡುವಿನ 2.10 ಕಿ.ಮೀ.ಗಳ ಉದ್ದ ಮತ್ತು ಕೆಂಗೇರಿಯಿಂದ ಚಲ್ಲಘಟ್ಟವರೆಗಿನ 2.05 ಕಿ.ಮೀ.ಗಳ ಉದ್ದದ ಮಾರ್ಗವನ್ನು ತೆರೆಯುವುದರೊಂದಿಗೆ, ನಗರವು ಪೂರ್ವದಿಂದ ಪಶ್ಚಿಮಕ್ಕೆ ತಡೆರಹಿತ ಸಂಪರ್ಕ ಹೊಂದಿದೆ ಮತ್ತು ಮೆಟ್ರೋ ಜಾಲವನ್ನು 74 ಕಿ.ಮೀ.ಗಳಿಗೆ ವಿಸ್ತರಿಸಿದೆ. ಪ್ರತಿದಿನ 7 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂದು ಸಿಎಂ ಹೇಳಿದರು.
    14,133 ಕೋಟಿ ವೆಚ್ಚದ ಯೋಜನೆ (ರಾಜ್ಯದ ಪಾಲು 5630 ಕೋಟಿ)ಹಂತ-1ರ 42.3 ಕಿ.ಮೀ.ಗಳ ಉದ್ದದ ಮಾರ್ಗವನ್ನು ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟಿಸಿದ್ದನ್ನು ನೆನಪಿಸಿದರು.
    ಯೋಜನೆ ಹಂತ-2ರಲ್ಲಿ 75.06 ಕಿ.ಮೀ. ಮಾರ್ಗ ಹೊಂದಿದ್ದು, ಯೋಜನೆಗೆ 30,695 ಕೋಟಿ ರೂ ವೆಚ್ಚವಾಗಲಿದೆ. ಈಗಾಗಲೇ ಕಾಮಗಾರಿಗಳು ನಡೆಯುತ್ತಿದ್ದು, 32 ಕಿ.ಮೀ.ಗಳ ಉದ್ದದ ಮಾರ್ಗವನ್ನು ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗಿದೆ ಎಂದರು.
    ನಾಗಸಂದ್ರದಿಂದ ಮಾದವಾರ ತನಕ ಉತ್ತರ ವಿಸ್ತರಣೆ 3.14 ಕಿ.ಮೀ. ಮತ್ತು ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ 19.15 ಕಿ.ಮೀ. ಉದ್ದದ ಹೊಸ ಮಾರ್ಗಗಳು ಮುಕ್ತಾಯದ ಹಂತದಲ್ಲಿವೆ ಎಂದರು.
    ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 21.26 ಕಿ.ಮೀ. ಹೊಸ ಮಾರ್ಗವನ್ನು ಮಾರ್ಚ್ 2025ರೊಳಗೆ ಪೂರ್ಣಗೊಳಿಸುವುದರಿಂದ ಕಾರ್ಯಾಚರಣೆಯ ಜಾಲವು 117 ಕಿ.ಮೀ.ಗಳಿಗೆ ವಿಸ್ತಾರಗೊಳ್ಳುತ್ತದೆ.12 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ ಎಂದರು.
    ಹಂತ-2 ಯೋಜನೆಗಾಗಿ, ರಾಜ್ಯ ಸರ್ಕಾರವು ರೂ. 11583.08 ಕೋಟಿ ರೂ ಬಿಡುಗಡೆ ಮಾಡಿದೆ.
    ಓಆರ್‌ಆರ್-ಏರ್‌ಪೋರ್ಟ್ ಮೆಟ್ರೋ 58 ಕಿ.ಮೀ. ಉದ್ದದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹೆಬ್ಬಾಳ ಜಂಕ್ಷನ್ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಂತ 2ಎ ಮತ್ತು 2ಬಿ ಯೋಜನೆಯನ್ನು ಅಂದಾಜು ರೂ. 14788.1 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 2026ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ರಾಜ್ಯ ಸರ್ಕಾರವು ಇದುವರೆಗೆ 4775.36 ಕೋಟಿ ಬಿಡುಗಡೆ ಮಾಡಿದೆ. ಯೋಜನೆಯು ಪೂರ್ಣಗೊಂಡ ನಂತರ, ಮೆಟ್ರೋ ಜಾಲವು 176 ಕಿ.ಮೀ.ಗಳು ಆಗಲಿದ್ದು, ಪ್ರತಿದಿನ 20 ಲಕ್ಷ ಪ್ರಯಾಣಿಕರು ಸಂಚರಿಸಲಿದ್ದಾರೆ ಎಂದು ಸಿಎಂ ವಿವರಿಸಿದರು.
    3ನೇ ಹಂತದಲ್ಲಿ 45 ಕಿ.ಮೀ.ಗಳ ಉದ್ದದ ಮಾರ್ಗವನ್ನು ಅಂದಾಜು 15,611 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲು ಡಿಪಿಆರ್‌ನ್ನು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದ್ದು, ಅನುಮೋದನೆ ನೀಡುವಂತೆ ಪ್ರಧಾನಮಂತ್ರಿಗಳನ್ನು ಕೋರಿದರು.
    ಸರ್ಜಾಪುರದಿಂದ ಹೆಬ್ಬಾಳದವರೆಗಿನ 37 ಕಿ.ಮೀ.ಗಳ ಉದ್ದದ ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ಎಗೆ ಡಿಪಿಆರ್ ತಯಾರಿಸಲಾಗುತ್ತಿದೆ. 2031ರ ವೇಳೆಗೆ 317 ಕಿ.ಮೀ.ಗಳ ಮೆಟ್ರೋ ಮಾರ್ಗಗಳನ್ನು ನಿರ್ಮಿಸಲು ಸಿಎಂಪಿ ಪ್ಲಾನ್‌ನಲ್ಲಿ ಅನುಮೋದಿಸಿದೆ. ಈಗಾಗಲೇ 257 ಕಿ.ಮೀ.ಗಳ ಮಾರ್ಗವು ಕಾರ್ಯಾಚರಣೆ, ನಿರ್ಮಾಣ ಮತ್ತು ಯೋಜನೆ ಹಂತದಲ್ಲಿದೆ. ಇನ್ನುಳಿದ 60 ಕಿ.ಮೀ.ಗಳ ಮೆಟ್ರೊ ಮಾರ್ಗಗಳ ಕಾರ್ಯಸಾಧ್ಯತೆಯ ಸಮೀಕ್ಷೆಯನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದರು.
    ಸಾಧಾರಣ ಬಡ್ಡಿದರಗಳೊಂದಿಗೆ ದೀರ್ಘಾವಧಿ ಸಾಲವನ್ನು ಒದಗಿಸುವ ಮೂಲಕ ಬೆಂಗಳೂರು ಮೆಟ್ರೋ ರೈಲು ಯೋಜನೆಗೆ ಬೆಂಬಲ ನೀಡಿದ ಎಲ್ಲಾ ವಿದೇಶೀ ಹಣಕಾಸು ಸಂಸ್ಥೆಗಳಿಗೆ, ಯೋಜನೆಯಲ್ಲಿ ಕೆಲಸ ಮಾಡಿದ ಎಲ್ಲಾ ಗುತ್ತಿಗೆದಾರರಿಗೆ ಹಾಗೂ ಈ ಯೋಜನೆಗಳಲ್ಲಿ ತೊಡಗಿರುವ 14 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೂ ಕೃತಜ್ಞತೆ ಸಲ್ಲಿಸಿದರು.
    ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts