More

    ವಸತಿ ಯೋಜನೆ ಶೀಘ್ರ ಪೂರ್ಣ, ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸಂಸದ ನಳಿನ್ ಸೂಚನೆ

    ಮಂಗಳೂರು: ಮಹಾನಗರ ಪಾಲಿಕೆ ಸೇರಿದಂತೆ, ಜಿಲ್ಲೆಯ ಎಲ್ಲ ನಗರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಕೇಂದ್ರ ಪುರಸ್ಕೃತ ಎಲ್ಲ ವಸತಿ ಯೋಜನೆಗಳನ್ನು ಹೆಚ್ಚಿನ ಮುತುವರ್ಜಿವಹಿಸಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಸಂಸದ, ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ.

    ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಜಿಲ್ಲೆಯಲ್ಲಿ ನಿವೇಶನ ರಹಿತರ ಅರ್ಜಿ ಸಲ್ಲಿಕೆ ಮಾಹಿತಿಯನ್ನು ಡಿಸಿ ಡಾ.ರಾಜೇಂದ್ರ ಕೆ.ವಿ ಕಲೆಹಾಕಿದರು. ಆದರ್ಶ ಗ್ರಾಮ ಬಳ್ಪದಲ್ಲಿ ನಡೆದ ಕಾಮಗಾರಿಗಳ ಪ್ರಗತಿಯನ್ನು ನಳಿನ್ ಪರಿಶೀಲಿಸಿದರು. ಗ್ರಾಪಂ ಕಾರ್ಯದರ್ಶಿ ಸಭೆಗೆ ಮಾಹಿತಿ ನೀಡಿ, ಒಟ್ಟು 74 ಕಾಮಗಾರಿಗಳ ಪೈಕಿ 11 ಕೋಟಿ ರೂ.ವೆಚ್ಚದಲ್ಲಿ 45 ಪೂರ್ಣಗೊಂಡಿದೆ. ರಸ್ತೆ, ಬಸ್ ನಿಲ್ದಾಣ ಸೇರಿ ಒಟ್ಟು 25 ಕೋಟಿಯ ಕಾಮಗಾರಿಗಳು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು.

    ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಿಇಒ ಡಾ.ಸೆಲ್ವಮಣಿ ಆರ್., ಶಾಸಕ ಉಮಾನಾಥ ಕೋಟ್ಯಾನ್, ಸುಳ್ಯ ತಾಪಂ ಅಧ್ಯಕ್ಷ ಚನಿಯ ಕಲ್ತಡ್ಕ, ಮಂಗಳೂರು ತಾಪಂ ಅಧ್ಯಕ್ಷ ಮಹಮ್ಮದ್ ಮೋನು ಭಾಗವಹಿಸಿದ್ದರು.

    ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ಕಡ್ಡಾಯ: ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಘನತ್ಯಾಜ್ಯ ಮತ್ತು ದ್ರವ ತ್ಯಾಜ್ಯಗಳ ವಿಲೇವಾರಿ ಸರಿಯಾಗಿ ನಡೆಯಬೇಕಿದೆ. ಆದ್ದರಿಂದ ಹೊಸ ಅಪಾರ್ಟ್‌ಮೆಂಟ್, ಕಾಂಪ್ಲೆಕ್‌ಗಳಲ್ಲಿ ಎಸ್‌ಟಿಪಿ ಕಡ್ಡಾಯವಾಗಿ ಅಳವಡಿಸುವುದಾದರೆ ಮಾತ್ರ ನಿರ್ಮಾಣಕ್ಕೆ ಅನುಮತಿ ನೀಡಬೇಕು. ಜಾಗ ಇದ್ದು ಅಳವಡಿಸದವರಿಗೆ ನೋಟಿಸ್ ನೀಡಬೇಕು ಡಿಸಿ ಅಧಿಕಾರಿಗಳಿಗೆ ಸೂಚಿಸಿದರು.

    ಹೆದ್ದಾರಿ ಕಾಮಗಾರಿ ತ್ವರಿತಕ್ಕೆ ಸೂಚನೆ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಬಂಧಿಸಿದ ಮಂಜೂರಾಗಿರುವ ಎಲ್ಲ ಯೋಜನೆಗಳ ಕಾಮಗಾರಿಗಳಿಗೆ ವೇಗ ನೀಡಲು ಸಂಸದ ನಳಿನ್ ಕುಮಾರ್ ಕಟೀಲು ಸೂಚಿಸಿದ್ದಾರೆ. ಕಾರ್ಕಳ-ಮೂಡುಬಿದಿರೆ-ಮಂಗಳೂರು ರಸ್ತೆ, ಬಿ.ಸಿ.ರೋಡು- ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳನ್ನು ತೀವ್ರಗೊಳಿಸಬೇಕು. ಅದೇ ರೀತಿ ಕೋವಿಡ್‌ನಿಂದಾಗಿ ನಿಂತಿರುವ ಇತರೆ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ತಕ್ಷಣವೇ ಕೈಗೆತ್ತಿಕೊಳ್ಳಬೇಕು. ಉಳ್ಳಾಲ ನೇತ್ರಾವತಿ ಸೇತುವೆ ಜಪ್ಪಿನ ಮೊಗರಿನಿಂದ ಕಣ್ಣೂರು ಮಸೀದಿಯವರೆಗೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಸಮಸ್ಯೆ ಇರುವುದರಿಂದ ಆ ಯೋಜನೆಯನ್ನು ಕೈ ಬಿಡಲು ನಿರ್ಧರಿಸಲಾಗಿದೆ ಎಂದರು.

    ಪಚ್ಚನಾಡಿ ತ್ಯಾಜ್ಯ ಕುಸಿತ ತನಿಖೆಗೆ ಸಮಿತಿ: ಪಚ್ಚನಾಡಿಯಲ್ಲಿ ಕಳೆದ ವರ್ಷ ಸಂಭವಿಸಿದ ತ್ಯಾಜ್ಯ ಕುಸಿತಕ್ಕೆ ಸಂಬಂಧಿಸಿದ ತನಿಖೆಗೆ ಈ ಹಿಂದಿನ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಇಲ್ಲಿಯವರೆಗೆ ತನಗೆ ವರದಿ ನೀಡಿಲ್ಲ ಎಂದು ಸಭೆಯಲ್ಲಿ ಸಂಸದ ನಳಿನ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಉತ್ತರಿಸಿದ ಜಿಲ್ಲಾಧಿಕಾರಿ, ಜಂಟಿ ನಿರ್ದೇಶಕ ದರ್ಜೆಯ ಅಧಿಕಾರಿಯೊಬ್ಬರ ನೇತೃತ್ವದ 4 ಮಂದಿಯ ತನಿಖಾ ಸಮಿತಿ ರಚಿಸಿ, ವಾರದಲ್ಲಿ ವರದಿ ನೀಡಲು ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾಧಿಕಾರಿ ಗಾಯತ್ರಿ ನಾಯಕ್ ಅವರಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts