More

    ಶ್ರದ್ಧಾ ಭಕ್ತಿಯಿಂದ ನಾಗರ ಪಂಚಮಿ ಆಚರಣೆ

    ಬೆಂಗಳೂರು: ನಿಜಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನವಾದ ಸೋಮವಾರ ನಗರದಾದ್ಯಂತ ಭಕ್ತರು ನಾಗರ ಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿದರು.

    ಮುಂಜಾನೆಯಿಂದಲೇ ಮನೆ ಸಮೀಪದ ಅಶ್ವತ್ಥಕಟ್ಟೆಯ ನಾಗರಕಲ್ಲು ಹಾಗೂ ಹುತ್ತದ ಬಳಿ ತೆರಳಿ ಅರಿಶಿನ ಕುಂಕುಮ ಹಾಗೂ ಹೂಗಳಿಂದ ಅಲಂಕರಿಸಿ, ತಂಬಿಟ್ಟು, ಹಣ್ಣು-ಕಾಯಿ ಅರ್ಪಿಸಿ ನೈವೇದ್ಯ ಮಾಡಿದ ಭಕ್ತರು ಹಾಲಿನಿಂದ ತನಿ ಎರೆಯುವ ಮೂಲಕ ಪೂಜೆ ನೆರವೇರಿಸಿದರು. ಸಕಲ ಕಷ್ಟ ನಿವಾರಣೆಗಾಗಿ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಸೋಮವಾರ ಶಿವನ ವಾರವೂ ಆಗಿರುವುದರಿಂದ ಶಿವದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು.

    ಶ್ರಾವಣದ ಮೊದಲ ಹಬ್ಬ: ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬವೇ ನಾಗರಪಂಚಮಿ. ಇದು ಹೆಣ್ಣು ಮಕ್ಕಳಿಗೆ ಸಂಭ್ರಮದ ಹಬ್ಬ. ನಾಗರ ಪೂಜೆ ಮಾಡಿದ ಬಳಿಕ ಮನೆ ಮಂದಿಯೆಲ್ಲ ಒಟ್ಟುಗೂಡಿ ಹಬ್ಬದೂಟ ಸವಿದರು. ವಾರದ ದಿನವಾದ್ದರಿಂದ ಹಲವರು ಪೂಜೆ ಮುಗಿಸಿ, ಕಚೇರಿಗಳಿಗೆ ತೆರಳುತ್ತಿದರೆ, ಕೆಲವರು ರಜೆ ಹಾಕಿ ಕುಟುಂಬದವರೊಂದಿಗೆ ಸಂಭ್ರಮಿಸಿದರು.

    3 ದಿನಗಳ ಆಚರಣೆ: ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ಸಂಭ್ರಮ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ ರೊಟ್ಟಿ ಪಂಚಮಿ, ಎರಡನೇ ದಿನ ನಾಗರ ಚೌತಿ, ಮೂರನೇ ದಿನ ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ. ಹಾಗಾಗಿ ನಗರದಲ್ಲಿ ಉತ್ತರ ಕರ್ನಾಟಕದ ಮಂದಿ ನೆಲೆಸಿರುವ ಬಡಾವಣೆಗಳಲ್ಲಿ ನಾಗಪಂಚಮಿ ಅತ್ಯಂತ ವಿಜೃಂಭಣೆಗೊಂಡಿದ್ದು ವಿಶೇಷವಾಗಿತ್ತು.

    ನಾಗ, ಶಿವ ದೇಗುಲಗಳಲ್ಲಿ ವಿಶೇಷ ಪೂಜೆ: ದೊಡ್ಡ ಆಲದ ಮರದ ಬಳಿಯ ಮುಕ್ತನಾಗ ದೇವಾಲಯ, ಸಿಲ್ಕ್ ಬೋರ್ಡ್ ಸಮೀಪದ ಶ್ರೀ ಅಮ್ಮ ನಾಗಮ್ಮ ದೇವಾಲಯ, ವಿಜಯನಗರದಲ್ಲಿನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಸೇರಿ ನಗರದ ಶಿವ ದೇವಾಲಯ ಹಾಗೂ ನಾಗದೇವಾಲಯಗಳಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಅಲಂಕಾರ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts