More

    ದ.ಕ. ಜಿಲ್ಲೆಯಲ್ಲಿ 987 ಪವಿತ್ರ ವನ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಲಸ್ವರೂಪದಲ್ಲಿ 987 ಪವಿತ್ರ ನಾಗ ವನಗಳು ಇರುವುದನ್ನು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ತಜ್ಞರ ತಂಡವು ಗುರುತಿಸಿದ್ದು, ಇಲ್ಲಿನ ಸಸ್ಯಸಂಕುಲದ ಅಧ್ಯಯನ ನಡೆಸಿ ಕರ್ನಾಟಕ ಜೀವ ವೈವಿಧ್ಯ ಮಂಡಳಿಗೆ ವರದಿ ಸಲ್ಲಿಸಿದೆ.
    ಪಶ್ಚಿಮ ಘಟ್ಟಗಳಲ್ಲಿ ನೈಸರ್ಗಿಕ ಕಾಡುಗಳ ಹೊರತಾಗಿ ದೇವರ ಪೂಜೆಗಾಗಿ ಚಿಕ್ಕ ಬನಗಳನ್ನು ವಿವಿಧ ಸಮುದಾಯದವರು ಸಂರಕ್ಷಿಸಿಕೊಂಡು ಬಂದಿದ್ದಾರೆ. ಇಂತಹ ಅರಣ್ಯ ಪ್ರದೇಶಗಳನ್ನು ಗ್ರಾಮೀಣ ಸಮುದಾಯದವರು ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳಿಗಾಗಿ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಪವಿತ್ರ ವನ ಮತ್ತು ಅವುಗಳ ಸಸ್ಯ ಸಂಪತ್ತಿನ ಅಧ್ಯಯನ ನಡೆಸಲಾಗಿದೆ.

    ಸರ್ಕಾರಿ ಜಮೀನಿನಲ್ಲಿ 333, ಖಾಸಗಿ ಜಮೀನಿನಲ್ಲಿ 654 ಬನಗಳಿದ್ದು, 5 ಸೆಂಟ್ಸ್‌ನಿಂದ 5 ಎಕರೆವರೆಗೆ ವಿಸ್ತೀರ್ಣ ಹೊಂದಿವೆ. ಇವುಗಳಲ್ಲಿ 24 ಬನಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಪೂರ್ಣ ಸಸ್ಯಗಳಿಂದ ಆವೃತವಾಗಿರುವ ಬನಗಳಲ್ಲಿ 290 ಪ್ರಭೇದದ ಸಸ್ಯಗಳಿದ್ದು, 119 ಮರ, 67 ಕುರುಚಲು ಸಸ್ಯ, 46 ಬಳ್ಳಿಗಳು, 51 ಪೊದೆಗಿಡಗಳು, 3 ಆರ್ಕಿಡ್, 4 ಜರಿಗಿಡಗಳನ್ನು ಗುರುತಿಸಲಾಗಿದೆ. ಆರು ಅಳಿವಿನಂಚಿನಲ್ಲಿರುವ ಸಸ್ಯಗಳಾದ ಕ್ಯಾಲೊ ಫಿಲ್ಲಂ ಏಪೆಟಾಲಂ, ಗಾರ್ಸಿನಿಯಾ ಇಂಡಿಕಾ, ಹಿಡ್ನೊಕಾರ್ಪಸ್ ಪೆಂಟಾಂಡ್ರಸ್, ಮಿರಿಷ್ಟಿಕಾ ಮಲಬಾರಿಕಾ, ಒಕ್ರಿನೊಕ್ಲಿಯಾ ಮಿಸ್ಸಿಯೊನಿಸ್ ಮತ್ತು ಸರಾಕ ಅಸೋಕ ಹಾಗೂ ತೀವ್ರ ಅಳಿವಿನಂಚಿನಲ್ಲಿರುವ ಸೈಜಿಜಿಯಂ ಟ್ರಾವೆಂಕುರಿಯಂ ಮತ್ತು ವೆಟೆರಿಯಾ ಇಂಡಿಕಾ ಪ್ರಭೇದಗಳಿರುವುದನ್ನು ದಾಖಲಿಸಲಾಗಿದೆ.

    ಪಶ್ಚಿಮಘಟ್ಟ ಅಧ್ಯಯನ ವರದಿ: ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮವು ಪಶ್ಚಿಮ ಘಟ್ಟಗಳ ಕರ್ನಾಟಕದ ಭಾಗದ ಬಗ್ಗೆ ವಿಶೇಷ ಅಧ್ಯಯನ ನಡೆಸಿ, ಅಂತಿಮ ತಾಂತ್ರಿಕ ವರದಿಯನ್ನು ಕರ್ನಾಟಕ ಜೀವ ವೈವಿಧ್ಯ ಮಂಡಳಿಗೆ ಸಲ್ಲಿಸಿದೆ. ರಾಜ್ಯದಲ್ಲಿ ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ದ.ಕ, ಕೊಡಗು ಜಿಲ್ಲೆಗಳಲ್ಲಿ ಹಾಗೂ ಮೈಸೂರು ಜಿಲ್ಲೆಯನ್ನೂ ಸೇರಿದಂತೆ 46 ಅರಣ್ಯ ಪ್ರದೇಶಗಳಲ್ಲಿ ಅಧ್ಯಯನ ನಡೆಸಲಾಗಿದೆ. 210 ಕ್ಷೇತ್ರ ಕಾರ್ಯಗಳನ್ನು ನಡೆಸಿ 194 ಕುಟುಂಬಕ್ಕೆ ಸೇರಿದ 1936 ಸಸ್ಯ ಪ್ರಭೇದಗಳನ್ನು ದಾಖಲಿಸಲಾಗಿದೆ. ಮಧುಕಾ ಇನ್‌ಸಿಗ್ನಿಸ್, ಸೈಜಿಜಿಯಂ ಕೆನರೆನ್ಸ್ ಮತ್ತು ಹೋಪಿಯಾ ಕೆನರೆನ್ಸಿಸ್ ಎನ್ನುವ ಮೂರು ಪುನರ್ ಸಂಶೋಧಿಸಿದ ಸಸ್ಯ ಪ್ರಭೇದಗಳನ್ನು ಗುರುತಿಸಲಾಗಿದೆ.

    ಪಿಲಿಕುಳದಲ್ಲಿ ಬೊಟಾನಿಕಲ್ ಮ್ಯೂಸಿಯಂ, ಹರ್ಬೇರಿಯಂ: ಯೋಜನೆಯ ಭಾಗವಾಗಿ ಪಿಲಿಕುಳದಲ್ಲಿ ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ ಸ್ಥಾಪಿಸಲಾಗಿದೆ. ಸಸ್ಯಶಾಸ್ತ್ರೀಯ ಅಧ್ಯಯನಕ್ಕಾಗಿ ಯೋಜನೆಯ ಅವಧಿಯಲ್ಲಿ 1936 ಪ್ರಭೇದಕ್ಕೆ ಸೇರಿದ 12,805 ಮಾದರಿಗಳನ್ನು ಗುರುತಿಸಿ ಸಂಗ್ರಹಿಸಲಾಗಿದೆ. ಮರಮಟ್ಟು, ಸಸ್ಯಗಳ ಬೀಜ, ನಾರಿನ ಉತ್ಪನ್ನ, ಸಾಂಬಾರ ಪದಾರ್ಥ, ಬಿದಿರು ಮತ್ತು ಬೆತ್ತದ ಉತ್ಪನ್ನ, ಔಷಧಿಯ ಕಚ್ಚಾ ಸಾಮಾಗ್ರಿ ಇತ್ಯಾದಿಗಳನ್ನು ಬೊಟಾನಿಕಲ್ ಮ್ಯೂಸಿಯಂನಲ್ಲಿ ಇರಿಸಲಾಗಿದೆ ಎಂದು ಪ್ರಧಾನ ಸಂಶೋಧಕರಾದ ಡಾ.ಎಚ್.ಸೂರ್ಯಪ್ರಕಾಶ್ ಶೆಣೈ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts