More

    ಗಮಕ ಕಲೆ ರನ್ನ, ಪಂಪನಿಗಿಂತ ಪುರಾತನ

    ಚಿಕ್ಕಮಗಳೂರು: ಆದಿಕವಿ ಪಂಪ, ರನ್ನ ಅವರ ಚರಿತ್ರೆ ಎಷ್ಟು ಹಳೆಯದೋ ಅದಕ್ಕೂ ಹಿಂದಿನದ್ದು ಗಮಕ ಕಲೆ. ಶಾಸನಗಳಲ್ಲೂ ಇದರ ಉಲ್ಲೇಖವಿದೆ. ಅಲ್ಲದೆ ಲವ-ಕುಶ ಕೂಡ ಈ ಕಲೆ ಮೂಲಕ ರಾಮಯಾಣದ ಕಥಾ ಗಾಯನ ಮಾಡಿದರೆಂಬ ಮಾತಿದೆ ಎಂದು ಸಾಹಿತಿ ಡಾ. ಎಚ್.ಎಸ್.ಸತ್ಯನಾರಾಯಣ ಅಭಿಪ್ರಾಯಪಟ್ಟರು.

    ನಗರದ ಎಸ್​ಟಿಜೆ ಕಾಲೇಜಿನಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಎರಡು ದಿನಗಳ ಗಮಕ ತರಬೇತಿ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

    ಈ ಕಲೆ ಸದೃಢವಾದದ್ದು ಕುಮಾರವ್ಯಾಸರಿಂದ. ಪಂಪ ಕಲಿಯುವವರ ಕಲ್ಪವೃಕ್ಷ. ಯಾರು ಪಾಂಡಿತ್ಯ ಪಡೆದಿದ್ದಾರೋ, ಯಾರು ವ್ಯಾಕರಣ ಶಾಸ್ತ್ರ, ಪುರಾಣದ ವಿದ್ವತ್ ಪಡೆದಿರುತ್ತಾರೋ ಅವರಿಗೆ ಪಂಪ ಕವಿ ಸುಲಭವಾಗಿ ಅರ್ಥವಾಗುತ್ತಾರೆ. ಆದರೆ ಕುಮಾರವ್ಯಾಸ ಕಲಿಯದವರ ಕಾಮಧೇನು ಎಂದು ರಾಷ್ಟ್ರಕವಿ ಕುವೆಂಪು ಹೇಳಿದ ಮಾತು ದೊಡ್ಡದು ಎಂದರು.

    ಪಂಪ, ರನ್ನ, ನಾಗಚಂದ್ರ, ಕುಮಾರವ್ಯಾಸ, ಲಕ್ಷ್ಮೀಶರನ್ನು ಓದುತ್ತಿರುತ್ತೇವೆ. ಇಂದಿನ ಕಾಲಮಾನಕ್ಕೆ ಹಳೆಗನ್ನಡ ಸಾಹಿತ್ಯವನ್ನು ಬಹಳ ಸುಲಭವಾಗಿ ದಾಟಿಸುವ ಕಲೆ ಎಂದರೆ ಗಮಕ. ಹಳ್ಳಿಗಳಲ್ಲಿ ಹಿರಿಯರು ಯುಗಾದಿ ಹಬ್ಬದಲ್ಲಿ ಕುಮಾರವ್ಯಾಸ, ಲಕ್ಷ್ಮೀಶ ಭಾರತವನ್ನು ವಾಚನ ಮಾಡಿಸುತ್ತಾರೆ ಎಂದು ಹೇಳಿದರು.

    ಯಾವ ಸಂಗೀತದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದಿದ್ದರೂ ಹಾಡುವ ಧೈರ್ಯವೊಂದಿದ್ದರೆ ಗಮಕವನ್ನು ಅದ್ಭುತವಾಗಿ ಹಾಡಿ ತೋರಿಸಬಹುದು. ಅದಕ್ಕೆ ಯಾವ ವಿದ್ವತ್ತೂ ಅಗತ್ಯವಿಲ್ಲ. ಅಷ್ಟು ಸುಲಭ ಹಾಗೂ ಸುಲಲಿತ ಕಲೆಯ ತೇರನ್ನು ಪೂರ್ವಿಕರು ಎಳೆದು ತಂದಿದ್ದಾರೆ. ಮುಂದೆಳೆಯುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕು ಎಂದು ತಿಳಿಸಿದರು.

    ಸಂಗೀತ-ನೃತ್ಯ ಅಕಾಡೆಮಿ ಸಂಚಾಲಕಿ ರೇಖಾ ಪ್ರೇಮ್ುಮಾರ್ ಮಾತನಾಡಿ, ನಮ್ಮ ಹಿಂದಿನವರು ರಚಿಸಿರುವ ಗ್ರಂಥ, ಕಾವ್ಯ, ಕಲೆ, ಸಂಸ್ಕೃತಿ ನಮ್ಮನ್ನು ದಾರಿದೀಪವಾಗಿ ಮುನ್ನಡೆಸುತ್ತವೆ. ಇದೇ ಕೆಲಸವನ್ನು ಅಕಾಡೆಮಿಯೂ ಮಾಡುತ್ತಿದೆ. ಹಿಂದುಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ಗಮಕ, ಹರಿಕಥೆ ಸೇರಿ ಹಲವು ಪ್ರಕಾರಗಳಿವೆ. ಇದರಲ್ಲಿ ಗಮಕ ಆಯ್ಕೆ ಮಾಡಿಕೊಂಡು ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕಲಿಸುವ ಸಣ್ಣ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

    ಎಸ್​ಟಿಜೆ ಕಾಲೇಜಿನ ಪ್ರಾಚಾರ್ಯು ಜೆ.ಕೆ.ಭಾರತಿ ಮಾತನಾಡಿ, ಹವ್ಯಾಸ ಬದಲಾಯಿಸಿದರೆ ಹಣೆಬರಹ ಬದಲಾದೀತು. ದೃಷ್ಟಿ ಬದಲಿಸಿದರೆ ದೃಶ್ಯ ಬದಲಾದೀತು. ದೋಣಿ ಬದಲಿಸಬೇಡಿ, ದಿಕ್ಕು ಬದಲಿಸಿ ದಡ ತಲುಪೀತು ಎಂಬಂತೆ ಬರೀ ನಾಲ್ಕು ಗೋಡೆಗಳ ನಡುವೆ ಕೇಳುವ ಪಾಠ ವಿದ್ಯಾರ್ಥಿ ಜೀವನದಲ್ಲಿ ಸಿಗುತ್ತದೆ. ಆದರೆ ಇಂತಹ ಅಪರೂಪದ ಕಲೆ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ಪ್ರಾಚಾರ್ಯ ಚೇತನ್, ಸಂಸ್ಕೃತ ಉಪನ್ಯಾಸಕ ಶಿವಮೊಗ್ಗದ ಅಚ್ಯುತ ಅವಧಾನಿ, ಗಮಕಿಗಳಾದ ಶಶಿಕಲಾ ಶಿವಶಂಕರ್, ಶಿಕ್ಷಕಿ ವಾಸಂತಿ ಪದ್ಮನಾಭ್, ಪದ್ಮಾ, ಸುಮಾ ಪ್ರಸಾದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts