More

    ಹತ್ತೇ ನಿಮಿಷದಲ್ಲಿ ಮೈಶುಗರ್ ವಾರ್ಷಿಕ ಸಭೆ ಮುಕ್ತಾಯ: ಆನ್‌ಲೈನ್‌ನಲ್ಲಿ ಆಯೋಜನೆಗೆ ವಿರೋಧ

    ಮಂಡ್ಯ: ತೀವ್ರ ವಿರೋಧದ ನಡುವೆಯೂ ಮೈಶುಗರ್ ಕಾರ್ಖಾನೆಯ 81ನೇ ವಾರ್ಷಿಕ ಆನ್‌ಲೈನ್ ಸಭೆಯನ್ನು ಹತ್ತೇ ನಿಮಿಷದಲ್ಲಿ ಅಧಿಕಾರಿಗಳು ಮುಗಿಸಿದರು. ಇದರ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಷೇರುದಾರರು ಆಕ್ರೋಶ ವ್ಯಕ್ತಪಡಿಸಿದರು.
    ಬೆಂಗಳೂರಿನ ಕಚೇರಿಯಲ್ಲಿ ಮೈಶುಗರ್ ಅಧ್ಯಕ್ಷ ಹಾಗೂ ಐಎಎಸ್ ಅಧಿಕಾರಿ ಪಂಕಜ್‌ಕುಮಾರ್ ಪಾಂಡೆ ನೇತೃತ್ವದಲ್ಲಿ ಗುರುವಾರ ಆನ್‌ಲೈನ್ ಮೂಲಕ ಆಯೋಜಿಸಲಾಗಿತ್ತು. ಅಂತೆಯೇ ನಗರದ ಮೈಶುಗರ್ ಸಮುದಾಯಭವನ ಹಾಗೂ ಪ್ರೌಢಶಾಲೆಯಲ್ಲಿ ವಾರ್ಷಿಕ ಸಭೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಬೆರಳೆಣಿಕೆಯಷ್ಟು ಷೇರುದಾರರು ಹಾಗೂ ರೈತರು ಆಗಮಿಸಿದ್ದರು. ಸಭೆ 11.35ಕ್ಕೆ ಆರಂಭಗೊಂಡಿತು. ಈ ವೇಳೆ ರೈತನಾಯಕಿ ಸುನಂದಾ ಜಯರಾಂ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿದರು.
    ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ತಮ್ಮ ಪಾಡಿಗೆ ತಾವು ಸಭೆ ಆರಂಭಿಸಿ ಲಾಭ-ನಷ್ಟದ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದಿಸಿದರು. ಇಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸಿ ಆನ್‌ಲೈನ್ ಸಭೆ ರದ್ದುಪಡಿಸುವಂತೆ ಆಗ್ರಹಿಸುತ್ತಿದ್ದರೂ, ಕ್ಯಾರೆ ಎನ್ನದ ಅಧಿಕಾರಿಗಳು 10 ನಿಮಿಷದಲ್ಲಿ ಸಭೆ ಮುಗಿಸಿದರು.
    ಅಧಿಕಾರಿಗಳ ವಿರುದ್ಧ ಆಕ್ರೋಶ:
    ಸಮಿತಿ ನೇತೃತ್ವದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಕೆ.ಬೋರಯ್ಯ, ಮಂಜುನಾಥ್, ಮುದ್ದೇಗೌಡ, ಕೀಲಾರ ಕೃಷ್ಣ ಸೇರಿದಂತೆ ಮತ್ತಿತರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಆನ್‌ಲೈನ್ ಸಭೆ ನಡೆಸುವುದಕ್ಕೆ ನಮ್ಮ ವಿರೋಧವಿತ್ತು. ಭೌತಿಕ ಸಭೆ ಕರೆಯುವಂತೆ ಸಕ್ಕರೆ ಸಚಿವರು, ಆಯುಕ್ತರು, ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ಇಲ್ಲದಂತಾಗಿದೆ. ಈ ಸಭೆಯನ್ನು ರದ್ದುಪಡಿಸಿ ಮತ್ತೆ 15 ದಿನದೊಳಗೆ ಇದೇ ಆವರಣದಲ್ಲಿ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.
    ಸುನಂದಾ ಜಯರಾಂ ಮಾತನಾಡಿ, ಕಾರ್ಖಾನೆಯನ್ನು ಮುಳುಗಿಸಲು ಈ ರೀತಿಯ ಹುನ್ನಾರ ಸರಿಯಲ್ಲ. ಆನ್‌ಲೈನ್ ಸಭೆ ರದ್ದುಪಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಅಧಿಕಾರಿಗಳು ಸಭೆ ನಡೆಸುವ ಮೂಲಕ ರೈತರ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಇದರ ಹಿಂದೆ ಕಾರ್ಖಾನೆ ಮುಳುಗಿಸುವ ಹುನ್ನಾರ ಅಡಗಿದೆ. ಈಗಾಗಲೇ ಕಾರ್ಖಾನೆ ಸಮರ್ಪಕವಾಗಿ ನಡೆಯುತ್ತಿಲ್ಲ. ಭೌತಿಕವಾಗಿ ಸಭೆ ನಡೆಸುವ ಮೂಲಕ ಷೇರುದಾರರ ಹಾಗೂ ರೈತರ ಸಮಸ್ಯೆ ಆಲಿಸಿ ಮುಂದಿನ ಕ್ರಮ ವಹಿಸದೆ, ಬೇಕಾಬಿಟ್ಟಿಯಾಗಿ ಇಷ್ಟಬಂದಂತೆ ಸಭೆ ನಡೆಸುವ ಮೂಲಕ ರೈತರ ಜತೆ ಚೆಲ್ಲಾಟವಾಡುತ್ತಿರುವುದು ಖಂಡನೀಯ. ಷೇರುದಾರರು ಹಾಗೂ ರೈತರ ಮಾತನ್ನು ಪರಿಗಣಿಸದೆ ಸಭೆ ಮುಗಿಸಿದ್ದಾರೆ. ಸರ್ಕಾರ ಹಾಗೂ ಅಧಿಕಾರಿಗಳು ಈ ಕೂಡಲೇ ಇದನ್ನು ಕೈಬಿಟ್ಟು ಮತ್ತೆ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts