More

    ಒತ್ತಡದಿಂದ ಹೊರಬರಲು ಕ್ರೀಡೆ ಸಹಕಾರಿ

    ಮೈಸೂರು: ಕೆಲಸದ ಒತ್ತಡದಿಂದ ಹೊರಬರಲು ಕ್ರೀಡೆ ಸಹಕಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟರು.

    ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2019-20ನೇ ಸಾಲಿನ ಎರಡು ದಿನಗಳ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಇಂತಹ ಕ್ರೀಡಾಕೂಟಗಳು ವರ್ಷಕ್ಕೆ ಮಾತ್ರ ಸೀಮಿತಗೊಳ್ಳದೆ ತಿಂಗಳಿಗೆ ಒಂದು ಬಾರಿ ನಡೆಯುವಂತಾಗಬೇಕು ಎಂದು ಆಶಿಸಿದರು.

    ನಮ್ಮ ಜಿಲ್ಲೆಯ ಸರ್ಕಾರಿ ನೌಕರರ ದಕ್ಷತೆಯನ್ನು ದಸರಾ ಮಹೋತ್ಸವದಲ್ಲಿ ನೋಡಿದ್ದೇನೆ. ಎಲ್ಲರೂ ಇನ್ನು ಹೆಚ್ಚು ಕೆಲಸ ಮಾಡಬೇಕು. ಬಹುತೇಕ ನೌಕರರು ಹಳ್ಳಿಗಾಡಿನಿಂದ ಬಂದಿದ್ದಾರೆ. ಹೀಗಾಗಿ, ಹಳ್ಳಿ ಜನರಿಗೆ ಗೌರವ ತೋರುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

    ಸೋಮವಾರದೊಳಗೆ ಹಣ ಹಾಕಬೇಕು!: ಮಕ್ಕಳಿಗೆ ಅನ್ಯಾಯವಾದರೆ ನಾನು ಸಹಿಸುವುದಿಲ್ಲ. ಈ ಬಾರಿ ದಸರಾ ಮಹೋತ್ಸವವನ್ನು ಇಡೀ ರಾಷ್ಟ್ರದ ಜನ ಶ್ಲಾಘಿಸಿದರು. ಎಲ್ಲ ಕಡೆಯೂ ಮೈಸೂರು ಬಗ್ಗೆ ಹೆಮ್ಮೆ ವ್ಯಕ್ತವಾಯಿತು. ಆದರೆ, ದಸರಾ ಕ್ರೀಡಾಕೂಟ ಮುಗಿದು 3 ತಿಂಗಳಾದರೂ ವಿಜೇತ ಕ್ರೀಡಾಪಟುಗಳ ಖಾತೆಗೆ ಹಣ ಹಾಕಿಲ್ಲ ಅಂದರೆ ಏನರ್ಥ?. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಜತೆ ಸಭೆ ನಡೆಸಿ, ಕ್ರೀಡಾ ಇಲಾಖೆಯ ಲೋಪಗಳನ್ನು ಸರಿಪಡಿಸಬೇಕು. ಜತೆಗೆ ಸೋಮವಾರ ಸಂಜೆ ಒಳಗೆ ಎಲ್ಲ ಕ್ರೀಡಾಪಟುಗಳ ಖಾತೆಗೆ ಹಣ ಹಾಕುವಂತೆ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆಯಲ್ಲಿದ್ದ ಅಪರ ಕಾರ್ಯದರ್ಶಿ ಜಿ.ಕಲ್ಪನಾ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಸೂಚನೆ ನೀಡಿದರು.

    ಶಾಸಕರಾದ ಎಲ್.ನಾಗೇಂದ್ರ, ಆರ್.ಧರ್ಮಸೇನ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಮೈಸೂರು-ಕೊಡಗು ಸಂಸದ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ, ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಎಚ್.ಕೆ.ರಾಮು, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ಇತರರಿದ್ದರು.

    ಅಧಿಕಾರಿಗೆ ತರಾಟೆ: ದಸರಾ ಕ್ರೀಡಾಕೂಟದ ವಿಜೇತರ ಖಾತೆಗೆ ಇನ್ನೂ ಹಣ ಹಾಕದ ಸಂಬಂಧ ವೇದಿಕೆ ಮೇಲೆಯೇ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ಅವರನ್ನು ಸಚಿವ ವಿ.ಸೋಮಣ್ಣ ತರಾಟೆಗೆ ತೆಗೆದುಕೊಂಡರು.

    ‘ಇವನು ಎಲ್ಲವನ್ನೂ ತಿಂದು ತೇಗಿದ್ದಾನೆ. ಅಕೌಂಟ್ ಬುಕ್ ತಗೋ ಬಾ ಈಗಲೇ. ಮಕ್ಕಳಿಗೆ ಕೊಡೊ ಹಣನಾದ್ರು ಕೊಡಬೇಕಲ್ವಾ? ಇಷ್ಟು ದಿನ ಏನ್ ಮಾಡ್ತಿದ್ದೀಯಾ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸಚಿವರು, ಸುರೇಶ್ ಅವರನ್ನು ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಆದರೆ, ವೇದಿಕೆ ಕಾರ್ಯಕ್ರಮದ ಬಳಿಕ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರೇಶ್ ಅವರನ್ನು ಅಮಾನತು ಮಾಡಿಲ್ಲ. ಆದರೆ, ಕ್ರೀಡಾಪಟುಗಳ ಅಕೌಂಟ್‌ಗೆ ಹಣ ಹಾಕುವಂತೆ ಎಚ್ಚರಿಕೆ ನೀಡಿದ್ದೇನೆ. ಈ ಸಂಬಂಧ ಕೆಲ ದಾಖಲೆಗಳನ್ನು ಕೇಳಿದ್ದೇನೆ. ಅವರು ನೀಡದಿದ್ದರೆ ಅಮಾನತು ಮಾಡಲಾಗುತ್ತದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts