More

    ಮೈಸೂರಿನಲ್ಲಿ ಕುಟುಂಬ ರಾಜಕಾರಣದ ಸೋಂಕು


    ಜಿಲ್ಲೆಯಲ್ಲಿ ಅಪ್ಪ-ಮಕ್ಕಳ ರಾಜಕೀಯ ಹೆಚ್ಚಳ
    ಸಿದ್ದರಾಮಯ್ಯರನ್ನು ಅನುಸರಿಸಿದ ಜಿ.ಟಿ.ದೇವೇಗೌಡ-ಮಹದೇವಪ್ಪ

    ಅವಿನಾಶ್ ಜೈನಹಳ್ಳಿ ಮೈಸೂರು
    ಇತರ ಜಿಲ್ಲೆಗಳಿಗೆ ಹೋಲಿಸಿದರೆ, ಕುಟುಂಬ ರಾಜಕಾರಣದಿಂದ ದೂರ ಉಳಿದಿದ್ದ ಮೈಸೂರಿಗೂ ಈಗ ಆ ಸೋಂಕು ಢಾಳಾಗಿ ತಗುಲುತ್ತಿದೆ!


    2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಕೆಲವು ಪ್ರಭಾವಿ ರಾಜಕೀಯ ನಾಯಕರು ಮತ್ತು ಅವರ ಮಕ್ಕಳು ಪ್ರತ್ಯೇಕ ಕ್ಷೇತ್ರಗಳಲ್ಲಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಸದಾಕಾಲ ಕುಟುಂಬ ರಾಜಕಾರಣವನ್ನು ಟೀಕಿಸುತ್ತಲೇ ಬಂದಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಈಗಾಗಲೇ ಜಿಲ್ಲೆಯಲ್ಲಿ ಅಪ್ಪ-ಮಕ್ಕಳ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ.


    2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಾವು ಸ್ಪರ್ಧಿಸುವ ಜತೆಗೆ, ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ವರುಣ ಕ್ಷೇತ್ರ ಬಿಟ್ಟುಕೊಡುವ ಮೂಲಕ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣದ ಮುನ್ನುಡಿ ಬರೆದಿದ್ದರು. ಈಗ ಶಾಸಕ ಜಿ.ಟಿ.ದೇವೇಗೌಡ ಮತ್ತು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕೂಡ ಸಿದ್ದರಾಮಯ್ಯ ಅವರ ದಾರಿಯಲ್ಲೇ ಸಾಗುತ್ತಿದ್ದು, ಜಿಲ್ಲೆಯಲ್ಲಿ ಅಪ್ಪ-ಮಕ್ಕಳ ರಾಜಕಾರಣ ಮುಂದುವರಿಸಲು ಅಣಿಯಾಗಿದ್ದಾರೆ.


    ಅಂದಹಾಗೆ, ಈ ಇಬ್ಬರು ತಮ್ಮ ಜತೆಗೆ ಮಕ್ಕಳನ್ನೂ ಜಿಲ್ಲೆಯ ಒಂದೊಂದು ಕ್ಷೇತ್ರದ ಅಭ್ಯರ್ಥಿಯಾಗಿಸಲು ಅಣಿಯಾಗಿದ್ದಾರೆ. ಇದಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಮತ್ತವರ ಮಕ್ಕಳು ಪ್ರತ್ಯೇಕ ಕ್ಷೇತ್ರಗಳಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.

    2018ರಲ್ಲೇ ಸಿದ್ಧತೆ ನಡೆಸಿದ್ದ ಜಿಟಿಡಿ!
    ಪುತ್ರ ಜಿ.ಡಿ.ಹರೀಶ್‌ಗೌಡ ಅವರಿಗೆ ರಾಜಕೀಯ ಭವಿಷ್ಯ ರೂಪಿಸಲು ಜಿ.ಟಿ.ದೇವೇಗೌಡ 2018ರ ಚುನಾವಣೆಯಲ್ಲೇ ಮುಂದಾಗಿದ್ದರು. ಅದಕ್ಕಾಗಿ ಹುಣಸೂರು ಕ್ಷೇತ್ರದಲ್ಲಿ ಸಿದ್ಧತೆ ನಡೆಸಿದ್ದರು. ಆದರೆ, ಜೆಡಿಎಸ್‌ನಲ್ಲಿ ಅಂದು ನಡೆದ ರಾಜಕೀಯ ಬದಲಾವಣೆಯಿಂದಾಗಿ ಮಗನ ರಾಜಕೀಯ ಪ್ರವೇಶವನ್ನು ದೂರವಿಟ್ಟಿದ್ದರು.
    ಈಗ ಶತಾಯಗತಾಯ 2023ರ ಚುನಾವಣೆಯಲ್ಲಾದರೂ ತಮ್ಮ ಮಗನನ್ನು ಶಾಸಕನನ್ನಾಗಿ ಮಾಡಲು ಮುಂದಾಗಿರುವ ಜಿ.ಟಿ.ದೇವೇಗೌಡ, ಜೆಡಿಎಸ್‌ನೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷ ಇಬ್ಬರಿಗೂ ಟಿಕೆಟ್ ಘೋಷಿಸಿದರೆ ಆ ಪಕ್ಷ ಸೇರುವ ಬಗ್ಗೆ ತಿಳಿಸಿದ್ದಾರೆ.
    ಈಗಾಗಲೇ ಕಾಂಗ್ರೆಸ್ ನಾಯಕರ ಜತೆ ಮಾತುಕತೆ ನಡೆಸಿರುವ ಅವರು, ತನಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಟಿಕೆಟ್ ನೀಡುವ ಜತೆಗೆ ಪುತ್ರನಿಗೆ ಹುಣಸೂರು, ಕೆ.ಆರ್.ನಗರ ಅಥವಾ ಚಾಮರಾಜ ಈ ಪೈಕಿ ಯಾವುದಾದರೂ ಒಂದು ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಟಿಕೆಟ್ ಸಿಗದಿದ್ದರೆ ಪುತ್ರನನ್ನು ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಕಣಕ್ಕಿಳಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಹರೀಶ್‌ಗೌಡ ಕೂಡ ಈ ಮೂರು ಕ್ಷೇತ್ರಗಳಲ್ಲಿ ಬಿರುಸಿನ ಓಡಾಟ, ಕಾರ್ಯಕರ್ತರ ಸಭೆ ನಡೆಸುತ್ತಾ, ಸಂಘಟನೆಯಲ್ಲಿ ನಿರತರಾಗಿದ್ದಾರೆ.

    ತ್ಯಾಗಕ್ಕೆ ಸಿದ್ಧರಾದ ಮಹದೇವಪ್ಪ
    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾದರಿಯಲ್ಲೇ ಎಚ್.ಸಿ.ಮಹದೇವಪ್ಪ ಕೂಡ 2018ರ ವಿಧಾನಸಭಾ ಚುನಾವಣೆಯಲ್ಲೇ ತಮ್ಮ ಪುತ್ರ ಸುನೀಲ್ ಬೋಸ್ ಅವರನ್ನು ರಾಜಕೀಯಕ್ಕೆ ತರಲು ವಿವಿಧ ಪ್ರಯತ್ನ ನಡೆಸಿದ್ದರು. ತಮ್ಮ ಪುತ್ರ ಯಾವುದೇ ತೊಂದರೆ ಇಲ್ಲದೆ ಗೆಲುವು ಪಡೆದು ಉಜ್ವಲ ರಾಜಕೀಯ ಭವಿಷ್ಯ ಪಡೆಯಬೇಕು ಎಂಬ ಉದ್ದೇಶದಿಂದ ಕ್ಷೇತ್ರ ತ್ಯಾಗಕ್ಕೂ ಮುಂದಾಗಿದ್ದರು. ತಿ.ನರಸೀಪುರ ಕ್ಷೇತ್ರವನ್ನು ಸುನೀಲ್ ಬೋಸ್‌ಗೆ ಬಿಟ್ಟುಕೊಟ್ಟು ನಂಜನಗೂಡು ಕ್ಷೇತ್ರದ ಕಡೆ ಪ್ರಯಾಣಿಸಲು ಮುಂದಾಗಿದ್ದರು. ಆದರೆ, ಅಂದಿನ ಕೆಲ ರಾಜಕೀಯ ಬದಲಾವಣೆಗಳಿಂದ ಅದು ಸಾಧ್ಯವಾಗಲಿಲ್ಲ. ಕಡೆಗೆ ತಾವೇ ತಿ.ನರಸೀಪುರದಿಂದ ಸ್ಪರ್ಧಿಸಿದ್ದರು.
    ಈಗ ಮತ್ತೆ 2023ರ ಚುನಾವಣೆಯಲ್ಲಿ ಮಹದೇವಪ್ಪ ತಿ.ನರಸೀಪುರ ಕ್ಷೇತ್ರವನ್ನು ತಮ್ಮ ಮಗನಿಗೆ ಬಿಟ್ಟುಕೊಟ್ಟು ತಾವು ನಂಜನಗೂಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಸಂಬಂಧ ಈಗಾಗಲೇ ಒಳಗೊಳಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಅಂತೆಯೆ, ತಿ.ನರಸೀಪುರ ಕ್ಷೇತ್ರದಲ್ಲಿ 13 ವರ್ಷಗಳಿಂದಲೂ ಸುನೀಲ್ ಬೋಸ್ ಕಾರ್ಯಕರ್ತರ ಜತೆ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯಕರ್ತರ ಜತೆ ಬೆರೆತು, ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಇನ್ನು ಮಹದೇವಪ್ಪ ಕೂಡ ನಂಜನಗೂಡು ಕ್ಷೇತ್ರದ ವ್ಯಾಪ್ತಿಯ ಬೆಂಬಲಿಗರನ್ನು ಕರೆದು ಈಗಾಗಲೇ ಅನೇಕ ಸಭೆಗಳನ್ನು ನಡೆಸಿದ್ದಾರೆ.

    ವರುಣದಿಂದಲ್ಲೇ ಯತೀಂದ್ರ ಸ್ಪರ್ಧೆ
    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ 2023ಕ್ಕೂ ವರುಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಜಿಲ್ಲೆಯ ಪ್ರಭಾವಿ ನಾಯಕ ತನ್ವೀರ್ ಸೇಠ್ ತಮ್ಮ ತಂದೆ ಅಜೀಜ್ ಸೇಠ್ ನಿಧನರಾದ ಮೇಲಷ್ಟೇ ಶಾಸಕರಾದರು. ಅನಿಲ್ ಚಿಕ್ಕಮಾದು ಕೂಡ ತಮ್ಮ ತಂದೆ ನಿಧನದ ನಂತರವೇ ಎಚ್.ಡಿ.ಕೋಟೆಯಿಂದ ಶಾಸಕರಾಗಿದ್ದಾರೆ.
    ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್ ಅವರ ಸಹೋದರ ಸಂದೇಶ್ ಸ್ವಾಮಿ 2018ರಲ್ಲಿ ನರಸಿಂಹರಾಜ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2023ರ ಚುನಾವಣೆಗೂ ಎನ್‌ಆರ್ ಕ್ಷೇತ್ರಕ್ಕೆ ಬಿಜೆಪಿಯಿಂದ ಆಕಾಂಕ್ಷಿಯಾಗಿದ್ದಾರೆ.
    ಜಿಲ್ಲೆಯಲ್ಲಿ ಈವರೆಗೆ ಹಾಲಿ ಶಾಸಕ ಅಥವಾ ಲೋಕಸಭಾ ಸದಸ್ಯರ ಕುಟುಂಬದ ಇತರ ಸದಸ್ಯರು ಪಾಲಿಕೆ ಅಥವಾ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆಯೇ ಹೊರತು ಒಂದೇ ಕುಟುಂಬದ ಇಬ್ಬರು ಎಂಎಲ್‌ಎ ಅಥವಾ ಎಂಪಿ ಚುನಾವಣೆಗೆ ಒಟ್ಟಿಗೇ ಸ್ಪರ್ಧೆ ನಡೆಸಿಲ್ಲ.

    ಮಾವ ಎಂಪಿ, ಅಳಿಯ ಎಂಎಲ್‌ಎ!
    ಜಿಲ್ಲೆಯ ಮತ್ತೊಬ್ಬ ಪ್ರಭಾವಿ ನಾಯಕ, ಸಂಸದ ವಿ.ಶ್ರೀನಿವಾಸಪ್ರಸಾದ್ ಕುಟುಂಬಕ್ಕೂ ಈ ಸೋಂಕು ತಗುಲಿದೆ. ವಿ.ಶ್ರೀನಿವಾಸಪ್ರಸಾದ್ ಚಾಮರಾಜನಗರ ಕ್ಷೇತ್ರದ ಸಂಸದರಾಗಿದ್ದರೆ, ಅವರ ಅಳಿಯ ಹರ್ಷವರ್ಧನ್ ನಂಜನಗೂಡು ಶಾಸಕ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸಲು ಹರ್ಷವರ್ಧನ್ ತಯಾರಿ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts