More

    19ರಂದು ‘ಪೇಜಾವರ ಶ್ರೀ ಭಾವ ಪುಷ್ಪಾಂಜಲಿ’ಕಾರ್ಯಕ್ರಮ


     ಮೈಸೂರು: ಕೃಷ್ಣೈಕ್ಯರಾದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ನಗರದ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ಜ.19ರಂದು ಸಂಜೆ 4ಕ್ಕೆ ‘ಪೇಜಾವರ ಶ್ರೀ ಭಾವ ಪುಷ್ಪಾಂಜಲಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

    ಶ್ರೀಗಳಿಗೆ ಉಡುಪಿಯ ಮಠ ಹೊರತುಪಡಿಸಿದರೆ ಮೈಸೂರು ಅಚ್ಚುಮೆಚ್ಚಿನ ತಾಣವಾಗಿತ್ತು. ಅವರು ಕೊನೆಯ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದು ಮೈಸೂರಿನಲ್ಲಿ. ಅಲ್ಲದ ನಗರದ ದಲಿತ ಕೇರಿಗಳಲ್ಲಿ ಪಾದಯಾತ್ರೆ ಮಾಡುವ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಪ್ರಯತ್ನ ಮಾಡಿದ್ದರು. ಸಮಾಜಕ್ಕಾಗಿ ಸಾಕಷ್ಟು ಬಾರಿ ಉಪವಾಸ ವ್ರತಗಳನ್ನು ಕೈಗೊಂಡಿದ್ದರು. ಹೀಗಾಗಿ ಅವರನ್ನು ಸ್ಮರಿಸುವ ಸಲುವಾಗಿ ನಗರದ ಹಲವು ಸಂಘಟನೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥಾನಂದ ಸ್ವಾಮೀಜಿ, ಅವಧೂತ ದತ್ತ ಪೀಠದ ಶ್ರೀ ದತ್ತ ವಿಜಯಾನಂದತೀರ್ಥ ಸ್ವಾಮೀಜಿ, ಚಿತ್ರದುರ್ಗದ ಶರಣ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜೀ ಭಾಗವಹಿಸಲಿದ್ದಾರೆ. ಈ ಸಂದರ್ಭ ರಘುಲೀಲಾ ಸಂಗೀತ ಶಾಲೆಯಿಂದ ಭಕ್ತಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ನಗರ ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾಜೀವ್, ವಿಜಯ ವಿಠಲ ವಿದ್ಯಾಸಂಸ್ಥೆ ಕಾರ್ಯದರ್ಶಿ ವಾಸುದೇವ ಭಟ್, ಜಿಎಸ್‌ಎಸ್‌ಫೌಂಡೇಷನ್ ಸಂಸ್ಥಾಪಕ ಶ್ರೀಹರಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಅತೃಪ್ತರನ್ನು ಸಮಾಧಾನಿಸುವ ಶಕ್ತಿ ಬಿಜೆಪಿಗೆ ಇದೆ: ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಯಾವುದೇ ಕಗ್ಗಂಟೂ ಇಲ್ಲ. ಎಲ್ಲ ಅತೃಪ್ತರನ್ನು ಸಮಾಧಾನಪಡಿಸುವ ಶಕ್ತಿ ಪಕ್ಷಕ್ಕೆ ಇದೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

    ಸಚಿವ ಸ್ಥಾನ ಯಾರಿಗೆ ನೀಡಬೇಕೆಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಸಂಪುಟ ವಿಸ್ತರಣೆ ಸಂದರ್ಭ ಸಹಜವಾಗಿಯೇ ಆಕಾಂಕ್ಷಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಹೀಗಾಗಿ ಎಲ್ಲರನ್ನೂ ಸಮಾಧಾನಪಡಿಸುವ ಕಾರ್ಯವನ್ನು ಪಕ್ಷ ಮಾಡಲಿದೆ. ಒಂದು ವೇಳೆ ಪಕ್ಷಕ್ಕೆ ವಿರುದ್ಧವಾಗಿ ಯಾರೇ ನಡೆದು ಕೊಂಡರೂ ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿಯೂ ಪಕ್ಷಕ್ಕೆ ಇದೆ ಎಂದು ಹೇಳಿದರು.

    ಮಾಜಿ ಶಾಸಕ ಎಚ್.ವಿಶ್ವನಾಥ್ ನಮ್ಮ ತಂದೆಯ ಸ್ಥಾನದಲ್ಲಿದ್ದಾರೆ. ಅವರು ಎಲ್ಲ ಪಕ್ಷದ ಆಡಳಿತ ವ್ಯವಸ್ಥೆಯನ್ನು ತಿಳಿದುಕೊಂಡಿದ್ದಾ ರೆ. ಅವರು ಯಾವ ಅರ್ಥದಲ್ಲಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮನವೊಲಿಸುವ ವಿಶ್ವಾಸ ಇದೆ. ಬಿಜೆಪಿಯಂತಹ ಹಾಲಿನ ವಾತಾವರಣದಲ್ಲಿ ವಿಶ್ವನಾಥ್ ಸಕ್ಕರೆಯಂತೆ ಕರಗಿ ನಮ್ಮ ಜತೆ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಿಜೆಪಿ ತತ್ವ ಮತ್ತು ಸಿದ್ಧಾಂತಗಳನ್ನು ಹೊಂದಿರುವ ಪಕ್ಷ. ಸರ್ಕಾರಕ್ಕಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಅನ್ನುವ ಪಕ್ಷ ನಮ್ಮದು. ನಾವು ಪಕ್ಷದ ಬಗ್ಗೆ ಮಾತ್ರ ಚಿಂತೆ ಮಾಡುತ್ತೇವೆ. ಹಿರಿಯರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನಮ್ಮ ಪಕ್ಷದ ಅಡಿಪಾಯ ತುಂಬಾ ದೊಡ್ಡದಾಗಿದೆ. ಅಡಿಪಾಯ ದೊಡ್ಡದಾಗಿರುವ ಕಾರಣ ಶಿಥಿಲವಾಗುವುದಿಲ್ಲ ಎಂದರು.

    ನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನ ಪಡೆಯಲು ನಾವು ಹಿಂಬಾಗಿಲಿನ ರಾಜಕೀಯ ಮಾಡುತ್ತಿಲ್ಲ. ಯಾವುದೇ ರೀತಿಯ ಆಪರೇಷನ್ ಕಮಲ ಸಹ ನಡೆಯುವುದಿಲ್ಲ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿಸಲು ನಿರ್ಧರಿಸಿವೆ. ಹೀಗಾಗಿ ನಾವು ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ಸಿದ್ಧರಾಗಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts