More

    ಇಂದಿನಿಂದ ಶ್ರೀಕಂಠೇಶ್ವರಸ್ವಾಮಿ ದರ್ಶನಕ್ಕೆ ಮುಕ್ತ

    ನಂಜನಗೂಡು: ತಿಂಗಳಿಂದ ಭಕ್ತರ ದರ್ಶನಕ್ಕೆ ನಿರ್ಬಂಧ ಹೇರಲಾಗಿದ್ದ ಶ್ರೀಕಂಠೇಶ್ವರಸ್ವಾಮಿ ದರ್ಶನಕ್ಕೆ ಸೋಮವಾರದಿಂದ ಹಲವು ಷರತ್ತುಗಳ ನಡುವೆ ಅವಕಾಶ ಕಲ್ಪಿಸಲಾಗಿದ್ದು ಕರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪೂರಕ ತಯಾರಿ ನಡೆದಿದೆ.
    ಎರಡು ತಿಂಗಳ ಹಿಂದೆ ಕರೊನಾ ಮಹಾಮಾರಿ ನಂಜನಗೂಡಿನಲ್ಲಿ ವ್ಯಾಪಿಸಿ 59 ಜನರಲ್ಲಿ ಸೋಂಕು ಕಾಣಿಸಿಕೊಂಡಾಗ ಎಲ್ಲರೂ ವಿಷಕಂಠನ ಮೊರೆ ಹೋಗಿದ್ದರು. ಅದೃಷ್ಟವಶಾತ್ ಯಾವುದೇ ತೊಂದರೆ ಉಂಟಾಗದಂತೆ ನಂಜನಗೂಡು ಸಹಜ ಸ್ಥಿತಿಗೆ ಮರಳಿರುವ ಬೆನ್ನೆಲ್ಲೇ ಶ್ರೀಕಂಠೇಶ್ವರಸ್ವಾಮಿ ದೇವಾಲಯ ದರ್ಶನಕ್ಕೆ ಮುಕ್ತವಾಗುತ್ತಿರುವುದು ಸಹಜವಾಗಿಯೇ ಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ.
    ಬೆಳಗ್ಗೆ 7 ರಿಂದ ಸಂಜೆ 5.30ವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ವಾರಾಂತ್ಯದಲ್ಲಿ ಮೈಸೂರಿಗೆ ಹೊರ ಜಿಲ್ಲೆ, ರಾಜ್ಯದಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕವಾಗಿ ಶನಿವಾರ, ಭಾನುವಾರ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ನಿರ್ಬಂಧ ವಿಧಿಸಿ ಈಗಾಗಲೇ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶಿಸಿದ್ದಾರೆ. ಹೀಗಾಗಿ ವಾರದಲ್ಲಿ ಐದು ದಿನ ಮಾತ್ರ ದೇವಾಲಯದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.
    ಇನ್ನು ದೇವಾಲಯ ತೆರೆಯಲು ಆದೇಶ ಹೊರಬೀಳುತ್ತಿದ್ದಂತೆ ದೇವಾಲಯದ ಆವರಣವನ್ನು ಪ್ರವೇಶಿಸುವ ಮಹಾದ್ವಾರ, ಸರತಿ ಸಾಲು, ಗರ್ಭಗುಡಿ ಪ್ರಾಂಗಣ, ನಿರ್ಗಮಿಸುವ ದ್ವಾರ ಸೇರಿದಂತೆ ಭಕ್ತರು ನಡೆದಾಡುವ ಕಡೆಯೆಲ್ಲಾ ವೃತ್ತಗಳನ್ನು ಗುರುತಿಸಲಾಗಿದೆ. ಒಳಪ್ರವೇಶಿಸುವ ಮುನ್ನ ಭಕ್ತರಿಗೆ ಸ್ಯಾನಿಟೈಸರ್ ನೀಡಲಾಗುವುದು. ವೃತ್ತಗಳಲ್ಲೇ ನಿಂತು ಭಕ್ತರು ದೇವರ ದರ್ಶನ ಪಡೆದು ಹೊರ ಬರಬೇಕೆಂಬ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.
    ಅಲ್ಲದೆ, ದೇವಾಲಯದಲ್ಲಿ ಕಾರ್ಯನಿರ್ವಹಿಸುವ ಆಗಮಿಕರು, ಅರ್ಚಕರು, ನೌಕರರು, ಭದ್ರತಾ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಿ ದೇಹದ ಉಷ್ಣಾಂಶ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಪ್ರಾಥಮಿಕ ತಪಾಸಣೆ ನಡೆಸಿ ವಿವರವನ್ನು ಈಗಾಗಲೇ ಕಲೆ ಹಾಕಿದೆ.
    ಲಾಕ್‌ಡೌನ್‌ನಲ್ಲಿ ದರ್ಶನ ವಿಚಾರಣೆ: ಲಾಕ್‌ಡೌನ್ ನಡುವೆಯೂ ಹುಣ್ಣಿಮೆ ದಿನವಾದ ಶುಕ್ರವಾರ ಕೆಲವು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡುವುದು ಬೆಳಕಿಗೆ ಬಂದಿದ್ದು ತಪ್ಪಿತಸ್ಥರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಶ್ರೀಕಂಠೇಶ್ವರಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆರ್.ಇಂಧನ್ ಬಾಬು, ಸದಸ್ಯ ಎನ್.ಟಿ.ಗಿರೀಶ್ ತಿಳಿಸಿದ್ದಾರೆ.
    ಭಕ್ತರನ್ನು ದೇವಾಲಯದ ಒಳಗೆ ಬಿಟ್ಟಿರುವ ಸಿಬ್ಬಂದಿ ಯಾರು ಎಂಬುದನ್ನು ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಪರಿಶೀಲನೆ ನಡೆಸಲಾಗುವುದು. ಭದ್ರತಾ ವೈಫಲ್ಯದಿಂದ ಆಗಿರುವ ಶಂಕೆಯಿದೆ. ದೇವಾಲಯದ ಆಗಮಿಕರು ಕೇವಲ ಧಾರ್ಮಿಕ ಪೂಜಾ ಕಾರ್ಯದಲ್ಲಿ ಮಾತ್ರ ಭಾಗಿಯಾಗಿದ್ದು ಇದರಲ್ಲಿ ಆಗಮಿಕರ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts