More

    ಶ್ರೀಕಂಠೇಶ್ವರಸ್ವಾಮಿ ದೇಗುಲದ ಆಗಮಿಕರು, ಸಿಬ್ಬಂದಿಗೆ ಆರೋಗ್ಯ ತಪಾಸಣೆ

    ನಂಜನಗೂಡು: ಜೂ.8ರಿಂದ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡುವ ಸಾಧ್ಯತೆ ಇರುವುದರಿಂದ ದೇಗುಲದ ಎಲ್ಲ ಆಗಮಿಕರು ಹಾಗೂ ಸಿಬ್ಬಂದಿಗೆ ಶುಕ್ರವಾರ ಆರೋಗ್ಯ ತಪಾಸಣೆ ನಡೆಸಲಾಯಿತು.
    ಗಿರಿಜಾ ಕಲ್ಯಾಣ ಮಂಟಪದ ಆವರಣದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ದೇವಾಲಯದಲ್ಲಿ ಕಾರ್ಯನಿರ್ವಹಿಸುವ ಆಗಮಿಕರು, ನೌಕರರು, ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲರನ್ನೂ ತಪಾಸಣೆಗೆ ಒಳಪಡಿಸಿದರು.
    ಥರ್ಮಲ್ ಸ್ಕ್ರೀನಿಂಗ್ ಮೂಲಕ ದೇಹದ ತಾಪಮಾನ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ ನಡೆಸಲಾಯಿತು. 60 ವರ್ಷ ಮೇಲ್ಪಟ್ಟವರು ಹೊರಗಡೆ ತಿರುಗಾಡದಂತೆ ಸರ್ಕಾರದ ಸುತ್ತೋಲೆ ಇರುವುದರಿಂದ ದೇವಾಲಯದಲ್ಲಿ 60 ವರ್ಷ ಮೇಲ್ಪಟ್ಟ ಆಗಮಿಕರು ಕಾರ್ಯನಿರ್ವಹಿಸುತ್ತಿದ್ದು ಅಂತಹವರಿಗೆ ತಾತ್ಕಾಲಿಕವಾಗಿ ದೇವಾಲಯದಲ್ಲಿ ಕಾರ್ಯನಿರ್ವಹಿಸದಂತೆ ಸೂಚನೆ ನೀಡುವ ಸಾಧ್ಯತೆಯಿದೆ.
    ಸೋಮವಾರದಿಂದ ದೇಗುಲ ತೆರೆಯುವ ನಿರೀಕ್ಷೆ ಇರುವುದರಿಂದ ಭಕ್ತರಿಗೆ ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ದಿಸೆೆಯಲ್ಲಿ ಆಡಳಿತ ಮಂಡಳಿ ಮುಂದಾಗಿದೆ.
    ಹುಣ್ಣಿಮೆ ಪೂಜೆ: ಪ್ರತಿ ಹುಣ್ಣಿಮೆ ವೇಳೆ ಭಕ್ತರ ಜಂಗುಳಿಯಿಂದ ತುಂಬಿರುತ್ತಿದ್ದ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಭಕ್ತರು ದೇಗುಲದ ಹೊರಭಾಗದಲ್ಲಿ ಪೂಜೆ, ಧೂಪದಾರತಿ ಸೇವೆ ಸಲ್ಲಿಸಿದರು. ದೇಗುಲದಲ್ಲಿ ದರ್ಶನಕ್ಕೆ ನಿಷೇಧ ಹೇರಿದ್ದರೂ ಹರಕೆ ಹೊತ್ತ ಭಕ್ತರು ಮಾತ್ರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದದ್ದು ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts