More

    ಮೈಸೂರು ದಸರಾ: ಸರಳ ಸುಂದರ ಸಾಂಪ್ರದಾಯಿಕ ಸಡಗರ..

    ಮೈಸೂರು: ಕರೊನಾ ಭೀತಿಯಿಂದ ಸರಳ ಹಾಗೂ ಸಂಪ್ರದಾಯಕ್ಕೆ ಸೀಮಿತಗೊಂಡಿರುವ ನಾಡಹಬ್ಬ ದಸರಾಕ್ಕೆ ಶನಿವಾರ (ಅ.17) ಸೀಮಿತ ಅತಿಥಿಗಳ ಸಮ್ಮುಖ ವಿಧ್ಯುಕ್ತ ಚಾಲನೆ ದೊರೆಯಲಿದೆ. ಅಧಿದೇವತೆ ಶ್ರೀ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಬೆಳಗ್ಗೆ 7.45ರಿಂದ 8.15ರೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕನ್ನಡ-ಸಂಸ್ಕೃತಿ ಸಚಿವ ಸಿ.ಟಿ.ರವಿ ಇನ್ನಿತರರು ಭಾಗವಹಿಸಲಿದ್ದಾರೆ. ಇದೇ ವೇಳೆ ಆರು ಕರೊನಾ ಸೇನಾನಿಗಳನ್ನೂ ಸನ್ಮಾನಿಸಲಾಗುತ್ತದೆ. ಸಂಜೆ 6ಕ್ಕೆ ಅರಮನೆ ಮುಂಭಾಗದ ವೇದಿಕೆಯಲ್ಲಿ ಸಿಎಂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಬೆಂಗಳೂರಿನ ಪಂಡಿತ್ ವಿನಾಯಕ ತೊರವಿ ಅವರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

    ರಾಜವಂಶಸ್ಥರ ಶರನ್ನವರಾತ್ರಿ: ಅರಮನೆಯಲ್ಲಿ ಚಿನ್ನದ ಸಿಂಹಾಸನಕ್ಕೆ ಪೂಜೆ ಸಲ್ಲಿಸುವ ಮೂಲಕ ರಾಜವಂಶಸ್ಥರು ಶರನ್ನವರಾತ್ರಿ ಆಚರಣೆಗೆ ಚಾಲನೆ ನೀಡಲಿದ್ದಾರೆ. ಮುಂಜಾನೆಯೇ ಧಾರ್ವಿುಕ ವಿಧಿವಿಧಾನ ನಡೆಯಲಿದ್ದು, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ನೆರವೇರಿಸಲಿದ್ದಾರೆ. ಚಿನ್ನದ ಸಿಂಹಾಸನಕ್ಕೆ ಬೆಳಗ್ಗೆ 6.15ರಿಂದ 6.30 ರವರೆಗೆ ಸಿಂಹದ ಮುಖವಾಡ ಸೇರಿಸುವ ಕಾರ್ಯ ಆರಂಭವಾಗಲಿದೆ. 7.15ರಿಂದ 8.10ರವರೆಗೆ ಅರಮನೆಯ ಚಾಮುಂಡಿತೊಟ್ಟಿಯಲ್ಲಿ ಯದುವೀರ ಕಂಕಣ ಧಾರಣೆ ಮಾಡಲಿದ್ದಾರೆ. ಬಳಿಕ ಬೆಳಗ್ಗೆ ಅರಮನೆ ಆವರಣದಲ್ಲಿ ಪಟ್ಟದ ಆನೆ, ಹಸು, ಕುದುರೆಗಳಿಗೆ ಪೂಜೆ ನಡೆಯಲಿದೆ. ಧಾರ್ವಿುಕ ಕೈಂಕರ್ಯದ ನಂತರ ಖಾಸಗಿ ದರ್ಬಾರ್ ನಡೆಯಲಿದೆ. ದಸರಾ ಉದ್ಘಾಟನೆ, ಜಂಬೂಸವಾರಿ ಸೇರಿ ಅರಮನೆ ಅಂಗಳದಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮ ಆನ್​ಲೈನ್​ನಲ್ಲಿ ಪ್ರಸಾರವಾಗಲಿವೆ.

    ವಿದ್ಯುತ್ ದೀಪಗಳಿಂದ ಸಿಂಗಾರ: ಕರೊನಾದಿಂದ ನಾಡಹಬ್ಬ ಕಳೆಗುಂದಿದ್ದರೂ ದೀಪಾಲಂಕಾರ ಎಲ್ಲರ ಗಮನ ಸೆಳೆಯುತ್ತಿದೆ. ನಗರದ ಪ್ರಮುಖ ರಸ್ತೆ, ವೃತ್ತಗಳು ಬಣ್ಣಬಣ್ಣದ ದೀಪಗಳಿಂದ ಅಲಂಕೃತಗೊಂಡಿವೆ.

    ಶೃಂಗೇರಿಯಲ್ಲಿ ಶರನ್ನವರಾತ್ರಿ

    ಶೃಂಗೇರಿ: ಅಧಿಕ ಅಶ್ವಯುಜ ಕೃಷ್ಣ ಅಮಾವಾಸ್ಯೆ ಅಂಗವಾಗಿ ಶುಕ್ರವಾರ ಶೃಂಗೇರಿ ಶ್ರೀ ಶಾರದೆಗೆ ಫಲ ಪಂಚಾಮೃತಾಭಿಷೇಕ, ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ, 108 ಬಾರಿ ಶ್ರೀಸೂಕ್ತ ಪಠಣದಿಂದ ಅಭಿಷೇಕ ನೆರವೇರಿತು. ಅ. 17ರಂದು ಹಂಸವಾಹನ, 8ರಂದು ಶಾರದಾ ಪ್ರತಿಷ್ಠೆ ಮತ್ತು ಹಂಸವಾಹನ, 19ಕ್ಕೆ ವೃಷಭ ವಾಹನ, 20ಕ್ಕೆ ಮಯೂರ ವಾಹನ, 21ಕ್ಕೆ ವೀಣಾಶಾರದೆ, 22ಕ್ಕೆ ಗರುಡ ವಾಹನ, 23ಕ್ಕೆ ಮೋಹಿನಿ, 24ಕ್ಕೆ ರಾಜರಾಜೇಶ್ವರಿ, 25ಕ್ಕೆ ಸಿಂಹವಾಹನ, 26 ಮತ್ತು 27ಕ್ಕೆ ಗಜಲಕ್ಷ್ಮೀ ಅಲಂಕಾರದಲ್ಲಿ ಶಾರದೆ ದರ್ಶನ ನೀಡಲಿದ್ದಾಳೆ.

    ಹೊರನಾಡಿನಲ್ಲಿ ವಿಶೇಷ ಪೂಜೆ

    ಹೊರನಾಡು: ಶ್ರೀ ಅನ್ನಪೂರ್ಣೆಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ 10ನೇ ದಿನವಾದ ವಿಜಯದಶಮಿಯನ್ನು ತೆಂಗಿನಕಾಯಿಗೆ ಕೋವಿಯಿಂದ ಗುರಿ ಇಟ್ಟು ಹೊಡೆಯುವುದರ ಮೂಲಕ ವಿಜಯೋತ್ಸವ ಆಚರಿಸಲಾಗುತ್ತದೆ. 9 ದಿನ ಅನ್ನಪೂರ್ಣೆಶ್ವರಿಯನ್ನು ದೇವಿಯ 9 ರೂಪಗಳಿಂದ ಅಲಂಕಾರ ಮಾಡಿ ಪೂಜಿಸಲಾಗುತ್ತದೆ.

    ಭಕ್ತರು ತಂತಮ್ಮ ಮನೆಗಳಲ್ಲಿಯೇ ಶರನ್ನವರಾತ್ರಿ ಆಚರಣೆ ಮಾಡಿ ಶ್ರೀಪೀಠದ ದೇವರು, ಲಿಂಗೈಕ್ಯ ಜಗದ್ಗುರುಗಳು, ಪ್ರಸ್ತುತ ಜಗದ್ಗುರುಗಳ ಕೃಪೆಗೆ ಪಾತ್ರರಾಗಬೇಕು.

    | ಶ್ರೀವೀರಸೋಮೇಶ್ವರ ಜಗದ್ಗುರುಗಳು ರಂಭಾಪುರಿ ಪೀಠ

    ನವರಾತ್ರಿ ಉತ್ಸವ ಮೂಲಕ ಕರೊನಾ ಅಸುರನನ್ನು ದೂರ ಇಡಬೇಕಾದರೆ ಸರ್ಕಾರ ಸೂಚಿಸಿದ ಮಾರ್ಗಸೂಚಿ ಸೂತ್ರಗಳಾದ ಮಾಸ್ಕ್ ಧಾರಣೆ, ದೈಹಿಕ ಅಂತರ ಇತ್ಯಾದಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲರೂ ಮನೆಗಳಲ್ಲಿಯೇ ಸರಳವಾಗಿ ನವರಾತ್ರಿ ಪೂಜೆ ಮತ್ತು ಆಚರಣೆ ನೆರವೇರಿಸಬೇಕು.

    | ಡಾ.ಡಿ.ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಧರ್ಮಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts