More

    ಕಾಯಂ, ಗುತ್ತಿಗೆ ಪೌರಕಾರ್ಮಿಕರಿಂದ ಪ್ರತಿಭಟನೆ

    ಮೈಸೂರು: ಒಳಚರಂಡಿ ಪೌರಕಾರ್ಮಿರ ಸೇವೆಯನ್ನು ಕಾಯಂಗೊಳಿಸುವಂತೆ ಆಗ್ರಹಿಸಿ ಮೈಸೂರು ನಗರ ಪಾಲಿಕೆ ಕಾಯಂ ಮತ್ತು ಗುತ್ತಿಗೆ ಪೌರಕಾರ್ಮಿಕರ ಸಂಘ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

    ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಪೌರಕಾರ್ಮಿಕರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ 15 ದಿನಗಳ ನಂತರ ಒಳಚರಂಡಿ ಕಾರ್ಮಿಕರು, ಗುತ್ತಿಗೆ ಪೌರಕಾರ್ಮಿಕರು, ಕಾಯಂ ಪೌರಕಾರ್ಮಿಕರು ಎಲ್ಲರೂ ಸೇರಿ ಕೆಲಸವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ಜತೆಗೆ ಮಲ, ಮೂತ್ರ ಸುರಿದುಕೊಂಡು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಂಘದ ಅಧ್ಯಕ್ಷ, ಮಾಜಿ ಮೇಯರ್ ನಾರಾಯಣ್ ಎಚ್ಚರಿಸಿದರು.

    ನಗರದಲ್ಲಿ ಸುಮಾರು 231 ಒಳಚರಂಡಿ ಕಾರ್ಮಿಕರು ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿದ್ದಾರೆ. ಒಳಚರಂಡಿ ಒಳಗೆ ಇಳಿದು ಮಲ, ಮೂತ್ರ ಶುಚಿತ್ವ ಮಾಡುವ ಸಂದರ್ಭದಲ್ಲಿ ವಿಷಗಾಳಿ ಸೇವಿಸಿ ಮೃತಪಟ್ಟಿರುವ ನಿದರ್ಶನವಿದೆ. ಅತ್ಯಂತ ನಿಕೃಷ್ಟ ಕೆಲಸದಲ್ಲಿ ತೊಡಗಿರುವ ಇವರನ್ನು ವಾಸಿಯಾಗದಂತಹ ಚರ್ಮರೋಗವೂ ತೀವ್ರವಾಗಿ ಕಾಡುತ್ತಿವೆ. ಆದರೂ ಸರ್ಕಾರ ಮಾತ್ರ ಇವರನ್ನು ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪಾಲಿಕೆಯು ಸ್ವಚ್ಛ ಭಾರತ ಅಭಿಯಾನದಲ್ಲಿ 5 ಬಾರಿ ಪ್ರಶಸ್ತಿ ಬಂದಾಗಲೂ ಒಳಚರಂಡಿ ಕಾರ್ಮಿಕರನ್ನು ನಿರ್ಲಕ್ಷೃ ಮಾಡಲಾಗಿದೆ. ಪ್ರಸ್ತುತ ವರ್ಷಗಳಿಂದ ಗುತ್ತಿಗೆ ಕಾರ್ಮಿಕರಿಗೂ ಹಾಗೂ ಒಳಚರಂಡಿ ಕಾರ್ಮಿಕರಿಗೂ ಒಂದೇ ರೀತಿಯ ಉಪಾಹಾರ ನೀಡುತ್ತಿದೆ. ಆದರೆ, ಉಪಾಹಾರ ಭತ್ಯೆಯನ್ನು ಒಳಚರಂಡಿ ಕಾರ್ಮಿಕರಿಗೆ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿದರು.

    ರಾಜ್ಯ ಸರ್ಕಾರ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ, ನಗರ, ಸ್ಥಳೀಯ ಸಂಸ್ಥೆಗಳಿಂದಲೇ ನೇರವಾಗಿ ವೇತನ ಪಾವತಿ ಹಾಗೂ ಖಾಲಿ ಹುದ್ದೆಗಳಿಗೆ ಹಾಲಿ ಕೆಲಸದಲ್ಲಿರುವ ಗುತ್ತಿಗೆ ಪೌರಕಾರ್ಮಿಕರನ್ನು ನೇರ ನೇಮಕ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ. ಇದರಲ್ಲಿ ಒಳಚರಂಡಿ ಕಾರ್ಮಿಕರನ್ನು ಕೈ ಬಿಟ್ಟು ವಂಚಿಸಲಾಗಿದೆ. ಈ ಬಗ್ಗೆ ಸರ್ಕಾರ, ಪಾಲಿಕೆ ಆಯುಕ್ತರು, ಮೇಯರ್ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

    ಪಾಲಿಕೆ ವ್ಯಾಪ್ತಿಯ ಒಳಚರಂಡಿ ವಿಭಾಗದಲ್ಲಿ ಖಾಲಿ ಇರುವ 231 ಹುದ್ದೆಗಳಿಗೆ ಸದರಿ ಕೆಲಸ ಮಾಡುತ್ತಿರುವ ಒಳಚರಂಡಿ ಪೌರಕಾರ್ಮಿಕರನ್ನು ಕಾಯಂ ಮಾಡಬೇಕು. ಸ್ವಚ್ಛತೆಯ ವೇಳೆ ಪೌರಕಾರ್ಮಿಕರಿಗೆ ನೀಡುತ್ತಿರುವ ಬೆಳಗಿನ ಉಪಾಹಾರದ ವಾರ್ಷಿಕ ಭತ್ಯೆ 25 ಸಾವಿರ ರೂ., ಇತರ ಸೌಲಭ್ಯಗಳನ್ನು ಒಳಚರಂಡಿ ಕಾರ್ಮಿಕರಿಗೂ ನೀಡಬೇಕು ಎಂದು ಒತ್ತಾಯಿಸಿದರು. ಡಿಸಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಕೈಬಿಡಲಾಯಿತು. ಸಂಘಟನೆಯ ಮುಖಂಡರಾದ ಎನ್.ಮಾರ, ಜಿ.ಮಹದೇವ, ಶಿವಣ್ಣ, ಶ್ರೀನಿವಾಸ, ಕುಮಾರಸ್ವಾಮಿ, ಗಣೇಶ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts