More

    ಮುಸ್ಲಿಂ ಕುಟುಂಬಕ್ಕೆ ಕಾನೂನುಬಾಹಿರ ದತ್ತು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರ್ಯಾಚರಣೆ

    ಉಡುಪಿ: ಚಿಕ್ಕಮಗಳೂರು ಜಿಲ್ಲಾ ಮಕ್ಕಳಾ ರಕ್ಷಣಾ ಘಟಕದಿಂದ ಬಂದ ದೂರಿನಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರ್ಯಾಚರಣೆ ನಡೆಸಿ, ಕಾನೂನುಬಾಹಿರ ದತ್ತು ಪ್ರಕ್ರಿಯೆ ನಡೆಸಿರುವವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

    ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಮಾರ್ಚ್ 2020ರಲ್ಲಿ ಹುಟ್ಟಿದ ಹೆಣ್ಣು ಮಗುವನ್ನು ತಂದೆ ಸುರೇಶ ಮತ್ತು ಸುಕನ್ಯಾ ಅವರು ಹಂಗಾರಕಟ್ಟೆಯ ಫಯಾಜ್ ಮತ್ತು ಶಾಹಿಸ್ತಾ ದಂಪತಿಗೆ ಉಡುಪಿಯ ಹುಸೈನ್ ಎಂಬಾತನ ಮೂಲಕ ಕಾನೂನು ಬಾಹಿರವಾಗಿ ದತ್ತು ನೀಡಿದ್ದರು. ನಂತರ ಕೊಪ್ಪ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಡಾ.ಬಾಲಕೃಷ್ಣ ಅವರಿಂದ ಮಗುವಿನ ನಕಲಿ ಜನನ ಪ್ರಮಾಣ ಪತ್ರ ಪಡೆದಿದ್ದು, ಈ ಬಗ್ಗೆ 6 ಮಂದಿ ವಿರುದ್ಧ ಬಾಲನ್ಯಾಯ ಕಾಯ್ದೆಯಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. 1 ವರ್ಷ 2 ತಿಂಗಳಿನ ಹೆಣ್ಣು ಮಗುವಿಗೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಫುರ್ಟಾಡೋ ನಿರ್ದೇಶನದಂತೆ ಸಂತೆಕಟ್ಟೆ ಕೃಷ್ಣಾನುಗ್ರಹ ದತ್ತುಸಂಸ್ಥೆಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.
    ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ್, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ, ಕೋಟ ಠಾಣೆಯ ಉಪ ನಿರೀಕ್ಷಕ ಸಂತೋಷ್ ಬಿ.ಪಿ. ಹಾಗೂ ಸಹಾಯಕ ಉಪ ನಿರೀಕ್ಷಕಿ ಮುಕ್ತಾ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದ್ದಾರೆ.

    ಕೋವಿಡ್‌ನಿಂದ ತಂದೆ-ತಾಯಿ ಇಬ್ಬರು ಮೃತರಾಗಿದ್ದು, ಮಕ್ಕಳು ಅನಾಥವಾಗಿದ್ದಾರೆ. ದತ್ತು ಪಡೆಯಿರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿದ್ದು, ಇದನ್ನು ನಂಬಿ ಮೋಸ ಹೋಗಬಾರದು. ಕಾನೂನುಬದ್ಧ ದತ್ತು ಮಗು ಬೇಕಾದರೆ ಮಣಿಪಾಲ ರಜತಾದ್ರಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಬಹುದು.
    ಪ್ರಭಾಕರ ಆಚಾರ್ ಕಾನೂನು ಪರಿವೀಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts