More

    ಧಾರವಾಡದಲ್ಲಿ ಸಂಗೀತೋತ್ಸವ ಇಂದು

    ಧಾರವಾಡ: ಡಾ. ಪುಟ್ಟರಾಜ ಗವಾಯಿಗಳ ಜನ್ಮದಿನ ನಿಮಿತ್ತ ನೀಡುವ ಪುಟ್ಟರಾಜ ಸಮ್ಮಾನ-2021ಪ್ರಶಸ್ತಿಗೆ ಹಿಂದುಸ್ತಾನಿ ಗಾಯಕ ಪಂ. ಸೋಮನಾಥ ಮರಡೂರ ಭಾಜನರಾಗಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

    ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆ. 3ರಂದು ಸಂಜೆ 6 ಗಂಟೆಗೆ ಆಯೋಜಿಸಿರುವ ಸಂಗೀತೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹುಬ್ಬಳ್ಳಿ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲ್ಖೇಡೆ ಅತಿಥಿಯಾಗಿ ಭಾಗವಹಿಸುವರು.

    ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಧ್ಯಕ್ಷತೆ ವಹಿಸುವರು. ಪ್ರತಿಷ್ಠಾನದ ಅಧ್ಯಕ್ಷ ಮಹಾಬಳೇಶ್ವರ ಹಾಸಿನಾಳ, ಉಪಾಧ್ಯಕ್ಷ ಶಂಕರ ಕುಂಬಿ, ಕೋಶಾಧ್ಯಕ್ಷ ಪಂ.ಡಿ. ಕುಮಾರದಾಸ ಹಾಗೂ ಸದಸ್ಯರು ಉಪಸ್ಥಿತರಿರುವರು. ನಂತರ ಗಿರಿಮಲ್ಲಪ್ಪ ಭಜಂತ್ರಿ ಅವರ ಶಹನಾಯಿ ವಾದನ ನಡೆಯಲಿದ್ದು, ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ ತಬಲಾ ಸಾಥ್ ನೀಡುವರು. ಪಂ. ಸೋಮನಾಥ ಮರಡೂರ ಗಾಯನಕ್ಕೆ ತಬಲಾದಲ್ಲಿ ಶ್ರೀಧರ ಮಾಂಡ್ರೆ ಹಾಗೂ ಸಂವಾದಿನಿಯಲ್ಲಿ ಡಾ. ಸುಧಾಂಶು ಕುಲಕರ್ಣಿ ಸಾಥ್ ಮಾಡಲಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಎಂ. ವೆಂಕಟೇಶಕುಮಾರ ತಿಳಿಸಿದ್ದಾರೆ.

    ಪಂ. ಸೋಮನಾಥ ಮರಡೂರ: ಖಯಾಲ್ ಶೈಲಿಯ ಗಾಯನದಲ್ಲಿ ಹಿಂದುಸ್ತಾನಿ ಗಾಯಕರಾದ ಕಿರಾಣಾ ಘರಾಣೆಯ ಸೋಮನಾಥ ಮರಡೂರ 8ನೇ ವಯಸ್ಸಿನಲ್ಲೇ ಸಂಗೀತಾಭ್ಯಾಸ ಆರಂಭಿಸಿದರು. 17ನೇ ವಯಸ್ಸಿನಲ್ಲೇ ಆಕಾಶವಾಣಿಯ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ಪಡೆದಿದ್ದರು. ನಂತರ ಧಾರವಾಡಕ್ಕೆ ಆಗಮಿಸಿ ಡಾ. ಬಸವರಾಜ ರಾಜಗುರು, ಡಾ. ಮಲ್ಲಿಕಾರ್ಜುನ ಮನಸೂರ ಅವರಿಂದ ಹೆಚ್ಚಿನ ಜ್ಞಾನ ಪಡೆದರು. ಆಕಾಶವಾಣಿ ಹಾಗೂ ದೂರದರ್ಶನದ ಎ ಟಾಪ್ ಗ್ರೇಡ್ ಕಲಾವಿದರಾದ ಇವರು, ತಮ್ಮದೇ ಆದ ವಿಶಿಷ್ಟ ಶೈಲಿಯ ಹಾಡುಗಾರಿಕೆಗೆ ಪ್ರಸಿದ್ಧರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts