More

    ಕೊಲೆಗೆ ಸುಪಾರಿ ನೀಡಿದ್ದ ಚಿಕ್ಕಪ್ಪ ಸೇರಿ ಐವರ ಬಂಧನ

    ನಿಪ್ಪಾಣಿ: ಕಾಣೆಯಾದ ಯುವಕನ ಕುರಿತು ದೂರು ನೀಡಿದ ಆತನ ಚಿಕ್ಕಪ್ಪನೆ ಕೊಲೆ ಮಾಡಿದ ಪ್ರಕರಣವನ್ನು ಸ್ಥಳೀಯ ಪೊಲೀಸರು ಬೇಧಿಸಿದ್ದಾರೆ. ತಾಲೂಕಿನ ಬೆನಾಡಿ ಗ್ರಾಮದ ವಿಶಾಲ ಅಲಿಯಾಸ್ ಅಪ್ಪಾಸೋ ಮಹೇಶ ಪಾಟೀಲ(25) ಕೊಲೆಯಾದ ಯುವಕ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಚಿಕ್ಕಪ್ಪ ಬೆನಾಡಿ ಗ್ರಾಮದ ಸತೀಶ ದಾದಾಸಾಹೇಬ ಪಾಟೀಲ(45), ಅಮೋಲ ಪ್ರಕಾಶ ವಡ್ಡರ(36), ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲ್ಲೂಕಿನ ಹೊನ್ನಳಿ ಗ್ರಾಮದ ದಿಲೀಪ ಪರಶುರಾಮ ವಡ್ಡರ(38), ಬಾಬಾಸಾಹೇಬ ಪಾಂಡುರಂಗ ಕಾಂಬಳೆ(47) ಮತ್ತು ಕರವೀರ ತಾಲೂಕಿನ ಖಬವಡೆ ಗ್ರಾಮದ ವಿಕಾಸ ವಕೀಲ ಪಾಟೀಲ(25) ಬಂಧಿತ ಆರೋಪಿತರು. ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

    ಘಟನೆ ಹಿನ್ನೆಲೆ: ತಂದೆ-ತಾಯಿ ಇಲ್ಲದ ಕೊಲೆಯಾದ ವಿಶಾಲ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದರು. ಸೆ.27ರಂದು ಬೆಳಗ್ಗೆ 8.30 ಗಂಟೆಗೆ ವಿಶಾಲ ಮನೆಯಿಂದ ತನ್ನ ಕಾರು ಸಹಿತ ಹೋದವನು ಮರಳಿ ಬಂದಿಲ್ಲವೆಂದು ಆತನ ಚಿಕ್ಕಪ್ಪ ಸತೀಶ ಸ್ಥಳೀಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸೆ.30ರಂದು ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಅ.9ರಂದು ವಿಶಾಲನ ವಾಹನ ಮಹಾರಾಷ್ಟ್ರದಲ್ಲಿ ಪತ್ತೆಯಾಗಿತ್ತು. ಕೂಡಲೇ ಪಿಎಸ್‌ಐ ಬಿ.ಎಸ್. ತಳವಾರ ತನಿಖೆ ನಡೆಸಿದ್ದರು. ತನಿಖೆಯಲ್ಲಿ ಸತೀಶ ಆರೋಪಿಯೆಂದು ಸಂಶಯ ಬಂದ ಪರಿಣಾಮ ಪಿಎಸ್‌ಐ ತಳವಾರ ಅ.24ರಂದು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದರು.

    ತನ್ನ ಅಣ್ಣನ ಮಗ ವಿಶಾಲ ಸುಮಾರು ದಿನಗಳಿಂದ ಆಸ್ತಿ ಪಾಲು ಮಾಡಿ ಕೊಡಬೇಕೆಂದು ಜಗಳಕ್ಕೆ ಇಳಿಯುತ್ತಿದ್ದ. ಹಾಗಾಗಿ ನಾಲ್ವರನ್ನು ಸಂಪರ್ಕಿಸಿ ವಿಶಾಲನ ಕೊಲೆ ಮಾಡಲು 6 ಲಕ್ಷಗಳಿಗೆ ಸುಪಾರಿ ಕೊಟ್ಟೆ. ಸೆ.27ರಂದು ಬೆಳಗ್ಗೆ 8.30 ಗಂಟೆಗೆ ವಿಶಾಲನ ಕುತ್ತಿಗೆ ಹಿಚುಕಿ ಕೊಲೆ ಮಾಡಿ ಶವವನ್ನು ಅವನದೇ ಕಾರಿನಲ್ಲಿ ಹೊತ್ತೊಯ್ದು ಕೊಲ್ಲಾಪುರ ಜಿಲ್ಲೆಯ ಗಗನಬಾವಡಾ ತಾಲೂಕಿನ ಅನದೂರ ಗ್ರಾಮದ ಹದ್ದಿನಲ್ಲಿ ಬರುವ ಘಟ್ಟದಲ್ಲಿ ಎಸೆದೆವು. ನಂತರ ಕಾರನ್ನು ಸೊಲ್ಲಾಪುರ ಜಿಲ್ಲೆಯ ಜುನೋನಿ ಗ್ರಾಮದ ಯಮಾಯಿ ಕೆರೆಯ ಹತ್ತಿರ ಬಿಟ್ಟೆವು ಎಂದು ಮುಖ್ಯ ಆರೋಪಿ ಸತೀಶ ಒಪ್ಪಿಕೊಂಡಿದ್ದಾಗಿ ಪಿಎಸ್‌ಐ ತಳವಾರ ಹೇಳಿದರು.

    ಸತೀಶ ನೀಡಿದ ರೂ.6 ಲಕ್ಷ ಹಣದಲ್ಲಿ ನಾಲ್ವರೂ ಮುಂಬಯಿ ಮೊದಲಾಧೆಡೆ ಸಂಚರಿಸಿ ಮಜಾ ಮಾಡಿದ್ದಾರೆ. ಉಳಿದ ಹಣ 2,83,500 ರೂ.ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಮೃತನ ತಲೆಬುರುಡೆ ಪತ್ತೆ ಹಚ್ಚಿ ಆರೋಪಿತರನ್ನು ಬಂಧಿಸಿದ ಪೊಲೀಸರಿಗೆ ವರಿಷ್ಠಾಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ ಎಂದು ಸಿಪಿಐ ಸಂತೋಷ ಸತ್ಯನಾಯಿಕ ಹೇಳಿದರು. ಎಸ್‌ಪಿ ಲಕ್ಷ್ಮಣ ನಿಂಬರಗಿ ಮತ್ತು ಹೆಚ್ಚುವರಿ ಎಸ್‌ಪಿ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಡಿವೈಎಸ್ಪಿ ಮನೋಜಕುಮಾರ ನಾಯಿಕ ನೇತೃತ್ವದಲ್ಲಿ ಸ್ಥಳೀಯ ಸಿಪಿಐ ಸಂತೋಷ ಸತ್ಯನಾಯಿಕ, ಪಿಎಸ್‌ಐ ಬಿ.ಎಸ್. ತಳವಾರ, ಎಎಸ್‌ಐ ಎಸ್.ಎ. ತೋಲಗಿ, ಎಸ್. ಐ. ಕಂಬಾರ, ಮೊಖಾಸಿ ಕಾರ್ಯಾಚರಣೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts