More

    ನಗರದಲ್ಲಿ ಬಾಡಿ ಬಿಲ್ಡರ್ ಕೊಲೆ-ಇಬ್ಬರ ಬಂಧನ

    ಚಿಕ್ಕಮಗಳೂರು: ಬಾಡಿ ಬಿಲ್ಡರ್ ಆಗಿ ಬೆಳೆಯುವ ಕನಸು ಇರಿಸಿಕೊಂಡಿದ್ದ ನಗರದ ಯುವಕನೋರ್ವನನ್ನು ಅಯ್ಯಪ್ಪ ನಗರದಲ್ಲಿ ಗುಂಪೊಂದು ಅಮಾನುಷವಾಗಿ ಬುಧವಾರ ರಾತ್ರಿ ಥಳಿಸಿದ್ದು, ಗುರುವಾರ ಆತ ಸಾವಿಗೀಡಾಗಿದ್ದಾನೆ. ಘಟನೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 

    ನಗರದ ಅರವತ್ತಡಿ ರಸ್ತೆಯ ರುದ್ರೇಗೌಡ ಹಾಗೂ ಸುಂದರಮ್ಮ ದಂಪತಿ ಪುತ್ರ ಮನೋಜ್(20) ಹತ್ಯೆಗೀಡಾದ ಯುವಕ. ಆತನನ್ನು ಬುಧವಾರ ರಾತ್ರಿ 8 ಗಂಟೆ ಸಮಯದಲ್ಲಿ ಕೆಲವು ಯುವಕರು ಮನೆಯಿಂದ ಕರೆದೊಯ್ದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ. ಆತನನ್ನು ಹಾಸನದ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುವಾಗ ಗುರುವಾರ ಮೃತಪಟ್ಟಿದ್ದ. ಬಳಿಕ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ತಂದಿರಿಸಲಾಗಿತ್ತು. ಐಟಿಐ ಡಿಪ್ಲೊಮಾ ಪಡೆದು ಬೆಂಗಳೂರಿನಲ್ಲಿ ನೆಲೆಸಿದ್ದ ಮನೋಜ್ ಒಂದೂವರೆ ತಿಂಗಳ ಹಿಂದೆಯಷ್ಟೇ ಚಿಕ್ಕಮಗಳೂರಿಗೆ ಮರಳಿದ್ದ. ಬಾಡಿ ಬಿಲ್ಡರ್ ಆಗಿ ಮಿಸ್ಟರ್ ಚಿಕ್ಕಮಗಳೂರು ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

    ಹಿಂದು ಸಂಘಟನೆಗಳ ಆಕ್ರೋಶ:
    ಯುವಕ ಮೃತಪಟ್ಟಿರುವುದಾಗಿ ಶುಕ್ರವಾರ ಬೆಳಗ್ಗೆ ಸುದ್ದಿ ಹರಡುತ್ತಿದ್ದಂತೆ ಹಿಂದು ಸಂಘಟನೆಯ ಕಾರ್ಯಕರ್ತರು ಆಸ್ಪತ್ರೆ ಬಳಿ ಜಮಾಯಿಸಿದರು. ಹತ್ಯೆ ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಆರಂಭಿಸಿದರು. ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಯುವಕನನ್ನು ಅನ್ಯ ಕೋಮಿನ ಯುವಕರು ಹತ್ಯೆ ನಡೆಸಿದ್ದಾರೆಂದು ಖಂಡಿಸಿ ಸಂಘ ಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರು ನಗರದ ಎಂಜಿ ರಸ್ತೆ ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು. ನಗರದ ಆಜಾದ್ ಪಾರ್ಕ್ ವೃತ್ತದಿಂದ ಹನುಮಂತಪ್ಪ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಮಾರ್ಗದುದ್ದಕ್ಕೂ ಅಂಗಡಿಗಳನ್ನು ಬಂದ್ ಮಾಡುವಂತೆ ಮನವೊಲಿಸಿದರು. ಈ ಸಂದರ್ಭ ರಸ್ತೆ ಮಧ್ಯೆ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

    ಉದ್ವಿಗ್ನ ಪರಿಸ್ಥಿತಿ:
    ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದರಿಂದ ಎಸ್ಪಿ ಎಂ.ಎಚ್.ಅಕ್ಷಯ್ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಎಂ.ಜಿ.ರಸ್ತೆ, ಐ.ಜಿ.ರಸ್ತೆ, ಮಲ್ಲಂದೂರು ರಸ್ತೆ ಸೇರಿದಂತೆ ಆಯಕಟ್ಟಿನ ಕಡೆಗಳಲ್ಲಿ ಬಿಗಿ ಪೊಲೀಸ್ ರಕ್ಷಣಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರಾದ ಯೋಗೀಶ್ ರಾಜ್ ಅರಸ್, ಸಂತೋಷ್ ಕೋಟ್ಯಾನ್, ಜೈರಾಂ, ಪ್ರೇಂ ಕುಮಾರ್, ಎಚ್.ಡಿ.ತಮ್ಮಯ್ಯ, ವರಸಿದ್ದಿ ವೇಣುಗೋಪಾಲ್, ಮಧುಕುಮಾರ್ ರಾಜ್ ಅರಸ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

    ಎರಡು ದಿನ ಗಡುವು:
    ಹನುಮಂತಪ್ಪ ವೃತ್ತದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರನ್ನುದ್ದೇಶಿಸಿ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ ಮಾತನಾಡಿ, ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಎಸ್ಪಿ ಎಂ.ಎಚ್.ಅಕ್ಷಯ್ ಎರಡು ದಿನಗಳ ಕಾಲಾವಕಾಶ ಕೋರಿದ್ದಾರೆ. ಅಷ್ಟರೊಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಮುಂದಿನ ಹೋರಾಟ ರೂಪಿಸಲಾಗುವುದು ಎಂದರು.

    ಪೊಲೀಸ್ ಅಧಿಕಾರಿ ಅಮಾನತಿಗೆ ಒತ್ತಾಯ
    ಹಿಂದುಗಳ ತಾಳ್ಮೆ ಪರೀಕ್ಷೆ ಮಾಡುವ ಕೆಲಸ ಬೇಡ. ನಮ್ಮ ಸಮಾಧಾನವನ್ನೇ ದೌರ್ಬಲ್ಯ ಎಂದು ಭಾವಿಸುವುದು ಬೇಡ. ಅದು ನಾವು ಸಮಾಜಕ್ಕೆ ಕೊಡುವ ಗೌರವ. ಎರಡು ದಿನದಲ್ಲಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಪ್ರತಿಭಟನೆ ಬೇರೆಯದೇ ಸ್ವರೂಪ ತಾಳಲಿದೆ. ಪೊಲೀಸರು ಅದಕ್ಕೆ ಅವಕಾಶ ನೀಡಬಾರದು. ಪ್ರಕರಣದಲ್ಲಿ ಶಾಮೀಲಾಗಿರುವ ಪೊಲೀಸ್ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಆರ್.ದೇವರಾಜ್ ಶೆಟ್ಟಿ ಆಗ್ರಹಿಸಿದರು.

    20 ಲಕ್ಷ ರೂ. ಪರಿಹಾರ ನೀಡಲು ಆಗ್ರಹ
    ಮೃತ ಮನೋಜ್ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಒದಗಿಸಬೇಕು. ಈ ಹತ್ಯೆ ಪೂರ್ವಯೋಜಿತವಾಗಿದ್ದು, ಇದರ ಹಿಂದೆ ಪಿಎಫ್‍ಐ ಮತ್ತು ಎಸ್‍ಡಿಪಿಐ ಕುಮ್ಮಕ್ಕಿದೆ. 18 ವರ್ಷದೊಳಗಿನ ಆರೋಪಿಗಳಿಂದಲೇ ಈ ಹತ್ಯೆಯಾಗಿದೆ ಎಂದರೆ ಈ ಯುವಕರಿಗೆ ಕೊಲೆ ಮಾಡುವ ಪ್ರೇರಣೆ ನೀಡಿದವರು ಯಾರು? ಪ್ರಕರಣದ ಹಿಂದೆ ಯಾರದೋ ಹಿನ್ನೆಲೆ ಇದೆ. ಸೂಕ್ತ ತನಿಖೆ ಮೂಲಕ ಪೊಲೀಸರು ಸರಿಯಾದ ತನಿಖೆ ನಡೆಸಿ ಮನೋಜ್ ಸಾವಿಗೆ ನ್ಯಾಯ ದೊರಕಿಸಬೇಕು ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಒತ್ತಾಯಿಸಿದರು. ನಗರದಲ್ಲಿ ಅವ್ಯಾಹತವಾಗಿ ಗಾಂಜಾ ದಂಧೆ ನಡೆಯುತ್ತಿದ್ದು, ಕೊಲೆ ಪ್ರಕರಣದಲ್ಲೂ ಅದರ ಹಿನ್ನೆಲೆ ಇದೆ. ಗಾಂಜಾ ದಂಧೆಯಲ್ಲಿ ಒಂದು ಕೋಮಿನ ಪಾತ್ರವಿದ್ದು, ಯುವಕರು ಮಾದಕ ವಸ್ತುಗಳಿಗೆ ಬಲಿಯಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಬಜರಂಗದಳ ಮುಖಂಡ ರಂಗನಾಥ್ ದೂರಿದರು.

    ಗಲ್ಲಿಗೇರಿಸಬೇಕು:
    ಪ್ರತಿಭಟನೆಯ ವೇಳೆ ಕಣ್ಣೀರಿಡುತ್ತ ಮಾತನಾಡಿದ ಮನೋಜ್ ತಾಯಿ ಸುಂದರಮ್ಮ, ಬುಧವಾರ ರಾತ್ರಿ 8 ಗಂಟೆ ಸಮಯದಲ್ಲಿ ಅನ್ಯಕೋಮಿನ ಯುವಕರಿಬ್ಬರು ಮನೋಜ್‍ನನ್ನು ಕರೆದೊಯ್ದಿದ್ದರು. ಬಳಿಕ ಅವರೇ ದೂರವಾಣಿ ಕರೆ ಮಾಡಿ ನಿಮ್ಮ ಮಗನಿಗೆ ತೀವ್ರವಾಗಿ ಗಾಯವಾಗಿದೆ ಎಂದು ತಿಳಿಸಿದ್ದರು. ನನ್ನ ಏಕೈಕ ಪುತ್ರನನ್ನು ಕೊಲೆ ಮಾಡಿದವರನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.

    ವೃತ್ತ ನಿರೀಕ್ಷಕ ಸಲೀಂ ವಿರುದ್ಧ ಆರೋಪ:
    ವೃತ್ತ ನಿರೀಕ್ಷಕ ಸಲೀಂ ಅಹಮದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಅವರು ಒಂದು ಕೋಮಿನ ಪರ ಕೆಲಸ ಮಾಡುತ್ತಿದ್ದಾರೆ. ಹಿಂದು ಸಂಘಟನೆಗಳ ಕಾರ್ಯಕರ್ತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಘೋಷಣೆ ಕೂಗಿ ಅವರನ್ನು ಅಮಾನತುಗೊಳಿಸಿ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
    ನಗರದ ಎಂಜಿ ರಸ್ತೆಯ ಟೈಲರ್ ಒಬ್ಬರ ವಿರುದ್ಧ ಇತ್ತೀಚೆಗೆ ಪೋಕ್ಸೋ ಕಾಯ್ದೆಯಡಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಟೈಲರ್ ಮೇಲೆ ಅನ್ಯಕೋಮಿನವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದಲ್ಲೂ ಇನ್ಸ್‍ಪೆಕ್ಟರ್ ಸಲೀಂ ಅಹಮದ್ ಹಿಂದುಗಳ ಮೇಲೆ ದ್ವೇಷದ ಕ್ರಮ ಕೈಗೊಂಡಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರಿದರು.

    ಸ್ನೇಹಿತರ ಪರ ಹೋಗಿ ಸಾವು?:
    ಅಫ್ನಾನ್ ಎಂಬಾತನ ಸಹೋದರಿ ಜತೆಗೆ ಫರೀದ್ ಎಂಬಾತ ಆಗಿಂದಾಗ್ಗೆ ಮಾತನಾಡುವುದು, ಸಂಪರ್ಕಿಸುವುದನ್ನು ರೂಢಿಸಿಕೊಂಡಿದ್ದ. ಈ ಕಾರಣಕ್ಕೆ ಫರೀದ್ ಹಾಗೂ ಆತನ ಜತೆಗಿದ್ದ ತೌಫೀಕ್ ಮತ್ತು ತೌಸೀಫ್ ಎಂಬುವವರನ್ನು ಎಚ್ಚರಿಸಲು ಮುಂದಾಗಿದ್ದ ಅಫ್ನಾನ್ ತನ್ನ ಜತೆಗೆ ಮನೋಜ್, ರಜಾಕ್, ನಿಹಾಲ್ ಮತ್ತು ಹನೀಫ್ ಎಂಬುವವರನ್ನು ಬುಧವಾರ ರಾತ್ರಿ ಕರೆದೊಯ್ದಿದ್ದ. ಈ ಸಂದರ್ಭ ಎರಡು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಸಂಘರ್ಷ ನಡೆದಿದ್ದು, ಮನೋಜ್ ತಲೆಗೆ ಪೆಟ್ಟು ಬಿದ್ದಿದೆ. ಅಷ್ಟಕ್ಕೂ ಅಫ್ನಾನ್, ರಜಾಕ್, ಮನೋಜ್ ಇವರೆಲ್ಲ ಸ್ನೇಹಿತರಾಗಿದ್ದವರೆ. ಪ್ರಕರಣದ ತನಿಖೆ ಆರಂಭವಾಗಿದ್ದು, ಮಾರಣಾಂತಿಕವಾದ ಪೆಟ್ಟಾಗಲು ಕಾರಣ, ಕೃತ್ಯಕ್ಕೆ ಯಾವ ಆಯುಧ ಬಳಸಲಾಗಿದೆ ಎಂಬ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ ಎಂದು ಎಸ್ಪಿ ಎಂ.ಎಚ್.ಅಕ್ಷಯ್ ಮಾಹಿತಿ ನೀಡಿದರು.

    ಬೇರೆ ಬಣ್ಣ ಕೊಡುವುದು ಬೇಡ:
    ಮನೋಜ್ ಸಾವಿನ ಹಿಂದೆ ಸಂಚಿದೆಯೆ? ತಕ್ಷಣದ ಘಟನೆಯಿಂದ ನಡೆದಿದೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ಈ ಪ್ರಕರಣಕ್ಕೆ ಬೇರೆ ರೀತಿ ಬಣ್ಣ ಕೊಡುವುದು ಬೇಡ. ಒಂದು ಅಪರಾಧ ನಡೆದಿದ್ದು, ಆ ಬಗ್ಗೆ ಪರಿಪೂರ್ಣ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗುವುದು. ನೈಜ ಆರೋಪಿಗಳು ಯಾರೇ ಆಗಿದ್ದರೂ, ಎಷ್ಟೇ ಜನರಿದ್ದರೂ ಅವರೆಲ್ಲರನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts