More

    ತಮಿಳುನಾಡಿನ ಲಾರಿ ಚಾಲಕನನ್ನು ಹತ್ಯೆಗೈದ ಪ್ರಕರಣ: ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

    ಮಂಗಳೂರು: ಲಾರಿ ಚಾಲಕನನ್ನು ಕೊಲೆಗೈದ ಇನ್ನೊಂದು ಲಾರಿಯ ಚಾಲಕನಿಗೆ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್.ಪಲ್ಲವಿ ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

    ತಮಿಳುನಾಡಿನ ಪ್ಯಾಟ್ರಿಕ್ ಸುರೇಶ್ ಕುಮಾರ್(48) ಶಿಕ್ಷೆಗೊಳಗಾದ ಅಪರಾಧಿ. ತಮಿಳುನಾಡಿನ ಸೆಲ್ವಮಣಿ(40) ಕೊಲೆಯಾದವರು. 2018ರ ಮಾ.3ರಂದು ಕೊಲೆ ಪ್ರಕರಣ ನಡೆದಿತ್ತು.

    ಲಾರಿ ಚಾಲಕ ಪ್ಯಾಟ್ರಿಕ್ ಸುರೇಶ್ ಕುಮಾರ್ ಮತ್ತು ಲಾರಿ ಚಾಲಕ, ಮಾಲೀಕ ಸೆಲ್ವಮಣಿ ತಮ್ಮ ಲಾರಿಗಳಲ್ಲಿ ತಮಿಳುನಾಡಿನಿಂದ ಸರಕು ತುಂಬಿಸಿಕೊಂಡು ಮಂಗಳೂರಿಗೆ ಬಂದಿದ್ದರು. ಸರಕು ಖಾಲಿ ಮಾಡಿ ವಾಪಸ್ ಹೋಗುವಾಗ ಬೇರೆ ಸರಕನ್ನು ತಮಿಳುನಾಡಿಗೆ ಕೊಂಡೊಯ್ಯುವ ಸಲುವಾಗಿ ಕಂಕನಾಡಿ ನಗರ ಠಾಣಾ ಪೊಲೀಸ್ ವ್ಯಾಪ್ತಿಯ ಪಡೀಲ್ ಓವರ್‌ಬ್ರಿಡ್ಜ್ ಬಳಿ ಲಾರಿ ಯಾರ್ಡ್‌ನಲ್ಲಿ ಲಾರಿಗಳನ್ನು ನಿಲ್ಲಿಸಿದ್ದರು.

    ಆರೋಪಿ ಸುರೇಶ್ ಕುಮಾರ್‌ನ ಸಂಬಂಧಿ ಹುಡುಗಿಯನ್ನು ಸೆಲ್ವಮಣಿ ವಿವಾಹವಾಗಿದ್ದ. ಈ ವಿಚಾರವಾಗಿ ಮಾ.3ರಂದು ರಾತ್ರಿ ಯಾರ್ಡ್‌ನಲ್ಲಿ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಸುರೇಶ್ ಕುಮಾರ್ ಚೂರಿಯಿಂದ ಸೆಲ್ವಮಣಿಯ ಹೊಟ್ಟೆಗೆ ತಿವಿದು ಗಾಯಗೊಳಿಸಿದ್ದ. ಪರಿಸರದಲ್ಲಿದ್ದ ಇತರ ಲಾರಿಗಳ ಚಾಲಕರು ಸೆಲ್ವಮಣಿ ಅವರನ್ನು ಲಾರಿಯಲ್ಲೇ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಸೆಲ್ವಮಣಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಇನ್‌ಸ್ಪೆಕ್ಟರ್ ರವಿ ನಾಯ್ಕ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

    ನ್ಯಾಯಾಧೀಶರು 25 ಮಂದಿ ಸಾಕ್ಷಿಗಳ ವಿಚಾರಣೆ ನಡೆಸಿ ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ ಸೆ.15ರಂದು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು. ಅಲ್ಲದೆ ಕೊಲೆಯಾದ ಸೆಲ್ವಮಣಿ ಅವರ ಪತ್ನಿಗೆ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿದರು. ಈ ಪ್ರಕರಣದಲ್ಲಿ ವೈಜ್ಞಾನಿಕ ಸಾಕ್ಷೃಗಳು ಮಹತ್ವದ ಪಾತ್ರ ವಹಿಸಿದ್ದವು. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕ ಹರೀಶ್ಚಂದ್ರ ಉದ್ಯಾವರ ವಾದಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts