More

    ಉಳ್ಳಾಲ ನಗರಸಭೆ ಉಳಿಸಿಕೊಂಡ ಕಾಂಗ್ರೆಸ್

    ಉಳ್ಳಾಲ: ನಗರಸಭೆ ಚುನಾವಣೆಯಲ್ಲಿ ಚಿತ್ರಕಲಾ ಕೆ. ಅಧ್ಯಕ್ಷೆ, ಯು.ಪಿ.ಅಯೂಬ್ ಮಂಚಿಲ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡಿದೆ. ಸೋಮವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಜೆಡಿಎಸ್‌ನ ಓರ್ವ ಸದಸ್ಯ ಮತ್ತು ಓರ್ವ ಪಕ್ಷೇತರ ಸದಸ್ಯ ಭಿನ್ನ ನಡೆ ಅನುಸರಿಸಿದ್ದು ವಿಶೇಷವಾಗಿತ್ತು.

    ಉಪಾಧ್ಯಕ್ಷೆಯಾಗಿ ಅನುಭವ ಹೊಂದಿದ್ದ ಚಿತ್ರಕಲಾಗೆ ಈ ಬಾರಿ ಅಧ್ಯಕ್ಷ ಪದವಿ ಅದೃಷ್ಟ ಖುಲಾಯಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಶಾಸಕರ ಕೃಪಕಟಾಕ್ಷೆಯಿಂದ ಪ್ರಥಮ ಬಾರಿ ನಗರಸಭೆ ಪ್ರವೇಶಿಸಿದ್ದ ಅಯೂಬ್ ಪಾಲಿಗೆ ಅದೃಷ್ಟ ಒಲಿಯಿತು.

    ಉಳ್ಳಾಲ ನಗರಸಭೆಗೆ ಪ್ರಥಮ ಬಾರಿ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 13 ಸ್ಥಾನ ಪಡೆದಿದ್ದರೆ ಬಿಜೆಪಿ ಮತ್ತು ಎಸ್‌ಡಿಪಿಐ ತಲಾ ಆರು, ಜೆಡಿಎಸ್ ನಾಲ್ಕು ಹಾಗೂ ಪಕ್ಷೇತರರು ಎರಡು ಸ್ಥಾನಗಳನ್ನು ಹೊಂದಿದ್ದರು. ಯಾವುದೇ ಪಕ್ಷಕ್ಕೂ ಬಹುಮತ ಲಭಿಸದ ಕಾರಣ ಮೈತ್ರಿ ಅನಿವಾರ್ಯವಾಗಿತ್ತು. ಇದರಿಂದ ಅಧಿಕಾರ ಯಾರಿಗೆ ಲಭಿಸಲಿದೆ ಎಂಬ ಕುತೂಹಲ ಉಂಟಾಗಿತ್ತು.

    ಕೊನೇ ಹಂತದ ಮೈತ್ರಿ: ಕೊನೇ ಹಂತದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿತು. ಇದರಿಂದ ಅಧಿಕಾರಕ್ಕೇರುವ ಕಾಂಗ್ರೆಸ್ ಹಾದಿ ಸುಗಮವಾಯಿತು. ಆಯ್ಕೆ ಪ್ರಕ್ರಿಯೆ ಸಂದರ್ಭ ಕಾಂಗ್ರೆಸ್, ಬಿಜೆಪಿ ಮತ್ತು ಎಸ್‌ಡಿಎಪಿಐ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್, ಜೆಡಿಎಸ್ ಮತ್ತು ಎಸ್‌ಡಿಪಿಐ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ ಜೆಡಿಎಸ್ ಸದಸ್ಯ ದಿನಕರ ಉಳ್ಳಾಲ ಅಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭ ತಟಸ್ಥರಾಗುವ ಮೂಲಕ ಮೈತ್ರಿಗೆ ವಿರುದ್ಧವಾಗಿ ನಿಂತರು.

    ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಚಿತ್ರಕಲಾ ಕೆ. ಅವರಿಗೆ ಪಕ್ಷೇತರ ಅಭ್ಯರ್ಥಿ ಅಬ್ದುಲ್ ಅಜೀಜ್ ಬೆಂಬಲ ನೀಡಿದ್ದು, ಶಾಸಕ ಖಾದರ್ ಮತದೊಂದಿಗೆ 15 ಮತ ಪಡೆದರು. ಬಿಜೆಪಿಯ ರೇಶ್ಮಾ ಜಗದೀಶ್ ಜೆಡಿಎಸ್‌ನ ಮೂರು ಹಾಗೂ ಜೆಡಿಎಸ್ ಬೆಂಬಲಿತ ಪಕ್ಷೇತರ ಸದಸ್ಯ ಮುಷ್ತಾಕ್ ಪಟ್ಲ ಬೆಂಬಲದಿಂದ 10 ಮತ ಪಡೆದರು. ಎಸ್‌ಡಿಪಿಐ ಅಭ್ಯರ್ಥಿ ಝರೀನಾ ಬಾನು ಪರ ಸ್ವಪಕ್ಷದ ಆರು ಮತಗಳು ಚಲಾವಣೆಯಾದವು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಯು.ಪಿ.ಅಯೂಬ್ ಮಂಚಿಲ ಅವರಿಗೆ ಶಾಸಕ ಯು.ಟಿ.ಖಾದರ್ ಸಹಿತ 14 ಮತಗಳು ಲಭಿಸಿದ್ದು, ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ಪಕ್ಷೇತರ ಸದಸ್ಯ ಅಬ್ದುಲ್ ಅಜೀಜ್ ತಟಸ್ಥರಾದರು. ಜೆಡಿಎಸ್‌ನಿಂದ ಸ್ಪರ್ಧಿಸಿದ ಯು.ಎಂ.ಜಬ್ಬಾರ್ ಬಿಜೆಪಿ ಹಾಗೂ ಪಕ್ಷೇತರ ಸದಸ್ಯ ಮುಷ್ತಾಕ್ ಪಟ್ಲ ಬೆಂಬಲದೊಂದಿಗೆ 11 ಹಾಗೂ ಎಸ್‌ಡಿಪಿಐ ಅಭ್ಯರ್ಥಿ ರಮೀಜ್ ಆರು ಮತ ಪಡೆದರು.

    ನಗರಸಭೆಗೆ ಚುನಾವಣೆ ನಡೆದು ಎರಡು ವರ್ಷವಾಗಿದ್ದು ಅಧಿಕಾರ ಹಸ್ತಾಂತರ ಆಗದ ಕಾರಣ ಈವರೆಗೆ ತನ್ನ ಮೇಲೆಯೇ ಜವಾಬ್ದಾರಿ ಇತ್ತು. ಅಧ್ಯಕ್ಷ, ಉಪಾಧ್ಯಕ್ಷರು ಒಂದು ಪಕ್ಷಕ್ಕೆ ಸೇರಿದರೂ ಆಡಳಿತ ನಡೆಸುವ ಸಂದರ್ಭ ಉಳ್ಳಾಲ ನಗರದ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಪಕ್ಷಾತೀತವಾಗಿ ಸಹೋದರರಂತೆ ಅಧಿಕಾರ ನಡೆಸಬೇಕು.
    ಯು.ಟಿ.ಖಾದರ್, ಮಂಗಳೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts