More

    ಪರಿಹಾರ ನೀಡಲು ಮುಂಡರಗಿ ರೈತರು ಪಟ್ಟು

    ಮುಂಡರಗಿ: ಖಾಸಗಿ ಕಂಪನಿ ಪೂರೈಸಿದ ಕಳಪೆ ಸೂರ್ಯಕಾಂತಿ ಬೀಜಗಳನ್ನು ರೈತರು ಖರೀದಿಸಿ ಬಿತ್ತನೆ ಮಾಡಿದ ಬೆಳೆ ಹಾಳಾಗಿದ್ದು, ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸೋಮವಾರ ತಾಲೂಕಿನ ವಿವಿಧ ಗ್ರಾಮಗಳ ರೈತರು ಹಾಗೂ ಕರವೇ ಕಾರ್ಯಕರ್ತರು ಪಟ್ಟಣ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
    ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಎತ್ತಿನ ಬಂಡಿ ಹಾಗೂ ಕಾಲ್ನಡಿಗೆಯಿಂದ ಪ್ರತಿಭಟನಾ ಮೆರವಣಿಗೆ ಹೊರಟು, ಜಾಗೃತ ವೃತ್ತ, ಗಾಂಧಿ ವೃತ್ತ, ಬಸ್ ನಿಲ್ದಾಣ, ಹೆಸರೂರು ಸರ್ಕಲ್ ಮಾರ್ಗವಾಗಿ ಕೊಪ್ಪಳ ಸರ್ಕಲ್‌ಗೆ ಆಗಮಿಸಿ ಅಲ್ಲಿ ಕೆಲ ಸಮಯ ಹೆದ್ದಾರಿ ತಡೆ ನಡೆಸಿ, ನಂತರ ತಹಸೀಲ್ದಾರ್ ಕಚೇರಿಗೆ ತೆರಳಿದರು. ಎತ್ತುಗಳನ್ನು ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕಟ್ಟಿ ಹಾಕಿದರು. ಕಚೇರಿ ಮುಂದಿರುವ ಹೆದ್ದಾರಿ ಬಂದ್ ಮಾಡಿ ಅಲ್ಲಿಯೇ ಕುಳಿತು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
    ಬೆಳಗ್ಗೆ ವ್ಯಾಪಾರ, ವಹಿವಾಟು ಎಂದಿನಂತಿತ್ತು. ಮೆರವಣಿಗೆ ವೇಳೆ ರೈತರು ಅಂಗಡಿಗಳನ್ನು ಬಂದ್ ಮಾಡಿಸಿದರು. ಕೆಲವಡೆ ಸ್ವಯಂ ಪ್ರೇರಿತರಾಗಿ ವರ್ತಕರು ಅಂಗಡಿ ಬಂದ್ ಮಾಡಿದ್ದರು. 4 ತಾಸು ರಸ್ತೆ ಸಂಚಾರ ತಡೆಯಿಂದಾಗಿ ಪ್ರಯಾಣಿಕರು, ವಾಹನ ಸವಾರರು ತೊಂದರೆ ಅನುಭವಿಸಿದರು.
    ತಾಲೂಕಿನ ವಿವಿಧ ಗ್ರಾಮಗಳ ರೈತರು ಸಾವಿರಾರು ಎಕರೆಯಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಖಾಸಗಿ ಕಂಪನಿಯವರು ಪೂರೈಸಿದ್ದ ಸೂರ್ಯಕಾಂತಿ ಬೀಜ ಕಳಪೆಯಾಗಿದ್ದು ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ದೂರಿದರು.
    ಹಾನಿಯ ವರದಿ ಆಧಾರದ ಮೇಲೆ ಪರಿಹಾರ ನೀಡಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಆದರೆ ಇಲ್ಲಿವರೆಗೂ ಪರಿಹಾರ ಘೋಷಿಸಿಲ್ಲ. ಖಾಸಗಿ ಕಂಪನಿ ಪೂರೈಸಿದ್ದ ಕಳಪೆ ಸೂರ್ಯಕಾಂತಿ ಬೀಜ ಬಿತ್ತಿದ್ದ ರೈತರ ಬೆಳೆ ಹಾಳಾಗಿದ್ದು, ಪ್ರತಿ ಎಕರೆಗೆ 80 ಸಾವಿರ ರೂ.ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಹಾಗೆಯೇ ರೈತರಿಗೆ ಬರನಷ್ಟ ಪರಿಹಾರ ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
    ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಜೆಂಟಿ ಕೃಷಿ ನಿರ್ದೇಶಕಿ ತಾರಾಮಣಿ ರೈತರೊಂದಿಗೆ ಚರ್ಚಿಸಿದರು. ಕೃಷಿ ವಿಜ್ಞಾನಿಗಳ ತಂಡ ಹಾನಿಯಾದ ಸೂರ್ಯಕಾಂತಿ ಬೆಳೆ ಪರಿಶೀಲಿಸಿದ್ದು ಜು.14ರಂದು ವರದಿ ಸಲ್ಲಿಸಿದ್ದಾರೆ. ಈ ಕಂಪನಿಯ ಬೀಜಗಳನ್ನು ನಿಷೇಧ ಮಾಡುವಂತೆ ಮಾರಾಟಗಾರರಿಗೆ ಸೂಚಿಸಿದ್ದು, ಸೋಮವಾರ ಬೆಳಗ್ಗೆ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.
    ಇದಕ್ಕೆ ಪ್ರತಿಕ್ರಿಯಿಸಿದ ರೈತರು, ಕರವೇ ಕಾರ್ಯಕರ್ತರು, ಕಾನೂನು ಪ್ರಕಾರ ಮಾಡಿದ್ದೀರಿ, ಆದರೆ ರೈತರಿಗೆ ಅನ್ಯಾಯವಾಗಿದೆ. ಕಂಪನಿಯವರ ಕಡೆಯಿಂದ ಪರಿಹಾರ ಕೊಡಿಸಿ ಅಥವಾ ಸರ್ಕಾರದಿಂದಲಾದರೂ ಪರಿಹಾರ ಕೊಡಸಬೇಕು ಎಂದು ಪಟ್ಟು ಹಿಡಿದರು. ಅಧಿಕಾರಿಗಳ ಸಮರ್ಪಕ ಉತ್ತರ ಬಾರದ ಕಾರಣ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಲಿಖಿತ ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದದರು.
    ನಂತರ ಆಗಮಿಸಿದ ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡರ ರೈತರೊಂದಿಗೆ ಚರ್ಚಿಸಿದರು. ಜಿಲ್ಲಾಧಿಕಾರಿಗಳು ದೂರವಾಣಿ ಮೂಲಕ ಮಾಹಿತಿ ಪಡೆದುಕೊಂಡು, ಎರಡು ದಿನದಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ರೈತರ ಸಭೆ ಕರೆದು ಪರಿಹಾರ ಘೋಷಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಸ್ಪಂದಿಸಿದ ರೈತರು, ಕರವೇ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟರು.
    ರೈತ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ಕರವೇ ಜಿಲ್ಲಾಧ್ಯಕ್ಷ ಶರಣು ಗೋಡಿ, ರೈತ ಮುಖಂಡರಾದ ಚಂದ್ರಕಾಂತ ಉಳ್ಳಾಗಡ್ಡಿ, ಪ್ರಕಾಶ ಸಜ್ಜನರ, ರವಿ ಕೊಳಲು, ಎಚ್.ಬಿ.ಕುರಿ, ಶರಣಪ್ಪ ಕಂಬಳಿ, ವಿಶ್ವನಾಥ ತಾಮ್ರಗುಂಡಿ, ಅಂದಪ್ಪ ಕುರಿ, ಧ್ರುವಕುಮಾರ ಹೂಗಾರ, ಬೀರಪ್ಪ ಮಲಾರ್ಜಿ, ಆರ್.ಎಸ್. ಕುರಿ, ಈರಣ್ಣ ಕವಲೂರ, ವೀರಭದ್ರಪ್ಪ ಮುದ್ದಿ, ಅಂದಪ್ಪ ಹಂದ್ರಾಳ, ಈರಣ್ಣ ಗಡಾದ, ಕೋಟೆಪ್ಪ ಮೋರನಾಳ, ರಾಮಣ್ಣ ಆರೇರ, ನಿಂಗಪ್ಪ ಬಂಡಾರಿ, ಶೋಭಾ ಕಲಾಲ, ರಾಮನಗೌಡ ಹಳೇಮನಿ, ಮುತ್ತು ಬಳ್ಳಾರಿ, ದೇವಪ್ಪ ಚಿಕ್ಕಣ್ಣವರ, ಅಶೋಕ ಅಳವಂಡಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts