More

    ಮುಂಬೈ ಇಂಡಿಯನ್ಸ್‌ಗೆ ಭರ್ಜರಿ ಗೆಲುವು, ಮುಗ್ಗರಿಸಿದ ಕೆಕೆಆರ್

    ಅಬುಧಾಬಿ: ನಾಯಕತ್ವ ಬದಲಾವಣೆಯೊಂದಿಗೆ ಅದೃಷ್ಟ ಖುಲಾಯಿಸುವ ಲೆಕ್ಕಾಚಾರದಲ್ಲಿದ್ದ ಕೋಲ್ಕತ ನೈಟ್‌ರೈಡರ್ಸ್‌ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಸರ್ವಾಂಗೀಣ ನಿರ್ವಹಣೆ ಎದುರು 8 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿದೆ. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ (78*ರನ್, 44 ಎಸೆತ, 9 ಬೌಂಡರಿ, 3 ಸಿಕ್ಸರ್) ಸಾಹಸದಿಂದ ಐಪಿಎಲ್-13ರಲ್ಲಿ ಆರನೇ ಗೆಲುವು ದಾಖಲಿಸಿದ ರೋಹಿತ್ ಶರ್ಮ ಬಳಗ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದೆ.

    ಶೇಕ್ ಜಯೆದ್ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ 32ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್ ತಂಡ ನಿಧಾನಗತಿಯ ಪಿಚ್‌ನಲ್ಲಿ ರನ್‌ಗಾಗಿ ಪರದಾಡಿತು. ಅಗ್ರ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಬಳಿಕ ಬಾಲಂಗೋಚಿ ಪ್ಯಾಟ್ ಕಮ್ಮಿನ್ಸ್ (53*ರನ್, 36 ಎಸೆತ, 5 ಬೌಂಡರಿ, 2 ಸಿಕ್ಸರ್) ಸಿಡಿಸಿದ ಬಿರುಸಿನ ಅರ್ಧಶತಕದ ನೆರವಿನಿಂದ ಕೆಕೆಆರ್, 5 ವಿಕೆಟ್‌ಗೆ 148 ರನ್ ಸೇರಿಸಿತು. ಪ್ರತಿಯಾಗಿ ಸರಾಗವಾಗಿ ಗುರಿಯತ್ತ ಮುನ್ನಗ್ಗಿದ ಮುಂಬೈ ತಂಡ 16.5 ಓವರ್‌ಗಳಲ್ಲಿ 2 ವಿಕೆಟ್‌ಗೆ 149 ರನ್ ಗಳಿಸಿ ಗೆಲುವು ಒಲಿಸಿಕೊಂಡಿತು. ಇವೊಯಿನ್ ಮಾರ್ಗನ್ ಸಾರಥ್ಯದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಕೆಕೆಆರ್ ನಿರಾಸೆ ಎದುರಿಸಿತು.

    ಡಿಕಾಕ್ ಆಕರ್ಷಕ ಬ್ಯಾಟಿಂಗ್: ಬೌಲಿಂಗ್‌ನಲ್ಲಿ ಮುಂಬೈ ತಂಡಕ್ಕೆ ತಿರುಗೇಟು ನೀಡುವ ಕೆಕೆಆರ್ ತಂಡದ ಆಸೆಗೆ ಆರಂಭಿಕರಾದ ಕ್ವಿಂಟನ್ ಡಿಕಾಕ್ ಮತ್ತು ನಾಯಕ ರೋಹಿತ್ ಶರ್ಮ ತಣ್ಣೀರೆರಚಿದರು. ಡಿಕಾಕ್ ಒಂದೆಡೆ ಬಿರುಸಿನ ಆಟದ ಮೂಲಕ ಕೆಕೆಆರ್ ಬೌಲರ್‌ಗಳನ್ನು ಕಾಡಿದರೆ, ರೋಹಿತ್ ಶರ್ಮ (35 ರನ್, 36 ಎಸೆತ, 5 ಬೌಂಡರಿ, 1 ಸಿಕ್ಸರ್) ಸಮರ್ಥ ಬೆಂಬಲ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 63 ಎಸೆತಗಳಲ್ಲಿ 94 ರನ್ ಪೇರಿಸಿತು. ಡಿಕಾಕ್ 25 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ರೋಹಿತ್ ಬೆನ್ನಲ್ಲೇ ಸೂರ್ಯಕುಮಾರ್ (10) ಔಟಾದರೂ, ಡಿಕಾಕ್ ಒಂದೆಡೆ ಭದ್ರವಾಗಿ ನೆಲೆಯೂರಿ ಹಾರ್ದಿಕ್ ಪಾಂಡ್ಯ (21) ಜತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಕೆಕೆಆರ್‌ಗೆ ಕಮ್ಮಿನ್ಸ್-ಮಾರ್ಗನ್ ಆಸರೆ
    ಆರಂಭಿಕ ಆಘಾತದಿಂದಾಗಿ ಕೆಕೆಆರ್ 61 ರನ್‌ಗೆ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದಾಗ ಜತೆಗೂಡಿದ ಹೊಸ ನಾಯಕ ಇವೊಯಿನ್ ಮಾರ್ಗನ್ ಮತ್ತು ಪ್ಯಾಟ್ ಕಮ್ಮಿನ್ಸ್ ಉಪಯುಕ್ತ ಜತೆಯಾಟವಾಡಿದರು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಆಸರೆಯಾಗಿ ನಿಂತ ಇಂಗ್ಲೆಂಡ್-ಆಸೀಸ್ ಜೋಡಿ ಮುರಿಯದ 6 ವಿಕೆಟ್‌ಗೆ 56 ಎಸೆತಗಳಲ್ಲಿ 87 ರನ್ ಪೇರಿಸಿತು. ಅನುಭವಿ ಬ್ಯಾಟ್ಸ್‌ಮನ್ ಮಾರ್ಗನ್ (39*ರನ್, 29 ಎಸೆತ, 2 ಬೌಂಡರಿ, 2 ಸಿಕ್ಸರ್) ಕೂಡ ಒಂದೆಡೆ ರನ್‌ಗಾಗಿ ಪರದಾಡುತ್ತಿದ್ದರೆ, 11ನೇ ಓವರ್‌ನಲ್ಲಿ ಕ್ರೀಸ್‌ಗೆ ಇಳಿದ ಬೆನ್ನಲ್ಲೇ ಬಿರುಸಿದ ಆಟವಾಡಿದ ಕಮ್ಮಿನ್ಸ್, ಮುಂಬೈ ಬೌಲರ್‌ಗಳಿಗೆ ಸವಾಲಾಗಿ ನಿಂತರು. ಕಮ್ಮಿನ್ಸ್ ಇನಿಂಗ್ಸ್‌ನ ಕೊನೇ ಓವರ್‌ನಲ್ಲಿ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮಾರ್ಗನ್-ಕಮ್ಮಿನ್ಸ್ ಜೋಡಿ ಕೊನೇ 4 ಓವರ್‌ಗಳಲ್ಲಿ 49 ರನ್ ಕಸಿಯುವ ಮೂಲಕ ಕೆಕೆಆರ್ ಸ್ಪರ್ಧಾತ್ಮಕವೆನಿಸುವ ಮೊತ್ತ ಪೇರಿಸಲು ನೆರವಾದರು. ಅದರಲ್ಲೂ ಕೌಲ್ಟರ್ ನಿಲ್ ಎಸೆದ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ 2 ಸಿಕ್ಸರ್ ಸಹಿತ 21 ರನ್ ದೋಚಿದರು.

    ಕೆಕೆಆರ್‌ಗೆ ಆರಂಭಿಕ ಆಘಾತ
    ಮೊದಲು ಬ್ಯಾಟಿಂಗ್ ಮಾಡುವುದನ್ನು ಆಯ್ದುಕೊಂಡ ಮಾರ್ಗನ್ ಅವರ ನಿರ್ಧಾರವನ್ನು ಸಮರ್ಥಿಸುವಂಥ ಆಟ ಕೆಕೆಆರ್ ಆರಂಭಿಕರಿಂದ ಬರಲಿಲ್ಲ. ರಾಹುಲ್ ತ್ರಿಪಾಠಿ (7) ಮತ್ತು ನಿತೀಶ್ ರಾಣಾ (5) ಕ್ರಮವಾಗಿ ಮುಂಬೈ ವೇಗಿಗಳಾದ ಟ್ರೆಂಟ್ ಬೌಲ್ಟ್ ಮತ್ತು ನಾಥನ್ ಕೌಲ್ಟರ್-ನಿಲ್‌ಗೆ ವಿಕೆಟ್ ಒಪ್ಪಿಸಿದರು. ಇದರಿಂದ ಕೆಕೆಆರ್ ಪವರ್‌ಪ್ಲೇಯಲ್ಲಿ 2 ವಿಕೆಟ್‌ಗೆ 33 ರನ್ ಗಳಿಸಿತು. ಪಂದ್ಯದ 8ನೇ ಓವರ್‌ನಲ್ಲಿ ಸ್ಪಿನ್ನರ್ ರಾಹುಲ್ ಚಹರ್ ಕೆಕೆಆರ್‌ಗೆ ಮತ್ತೆರಡು ಆಘಾತ ನೀಡಿದರು. ಶುಭಮಾನ್ ಗಿಲ್ (21) ಮತ್ತು ದಿನೇಶ್ ಕಾರ್ತಿಕ್ (4) ಸತತ 2 ಎಸೆತಗಳಲ್ಲಿ ಔಟಾದರು. ಬ್ಯಾಟಿಂಗ್‌ನತ್ತ ಗಮನಹರಿಸುವ ಸಲುವಾಗಿ ನಾಯಕತ್ವ ತ್ಯಜಿಸಿದ ಕಾರ್ತಿಕ್ ಅವರಿಂದ ನಿರೀಕ್ಷಿತ ಆಟ ಬರಲಿಲ್ಲ. ಬಳಿಕ ಬಂದ ಆಲ್ರೌಂಡರ್ ಆಂಡ್ರೆ ರಸೆಲ್ (12) ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ನಿರಾಸೆ ಮೂಡಿಸಿದರು. ನಾಯಕನ ಜತೆ ಕೇವಲ 19 ರನ್ ಜತೆಯಾಟವಾಡಿದ ಅವರು, ಬುಮ್ರಾ ಎಸೆತದಲ್ಲಿ ನಿರ್ಗಮಿಸಿದರು.

    ಕೌಲ್ಟರ್-ನಿಲ್, ಗ್ರೀನ್ ಕಣಕ್ಕೆ
    ಕೆಕೆಆರ್ 2 ಮತ್ತು ಮುಂಬೈ 1 ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಟಾಮ್ ಬ್ಯಾಂಟನ್ ಮತ್ತು ಕಮಲೇಶ್ ನಾಗರಕೋಟಿ ಬದಲಿಗೆ ಸ್ಪಿನ್ನರ್ ಕ್ರಿಸ್ ಗ್ರೀನ್ ಮತ್ತು ಶಿವಂ ಮಾವಿ ಕೆಕೆಆರ್ ಪರ ಆಡಿದರು. ಮುಂಬೈ ತಂಡ ಜೇಮ್ಸ್ ಪ್ಯಾಟಿನ್‌ಸನ್‌ಗೆ ವಿಶ್ರಾಂತಿ ನೀಡಿ, ನಾಥನ್ ಕೌಲ್ಟರ್-ನಿಲ್ ಅವರನ್ನು ಆಡಿಸಿತು.

    ದುರ್ಬಲ ಹೃದಯದವರು ಪಂಜಾಬ್ ತಂಡದ ಪಂದ್ಯ ನೋಡಬೇಡಿ, ಪ್ರೀತಿ ಝಿಂಟಾ ಎಚ್ಚರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts