More

    ರಾಜಸ್ಥಾನ ರಾಯಲ್ಸ್ ಎದುರು ಭರ್ಜರಿ ಜಯ ದಾಖಲಿಸಿದ ಮುಂಬೈ; ಪ್ಲೇಆಫ್ ಆಸೆ ಜೀವಂತ

    ಶಾರ್ಜಾ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ವೇಗಿಗಳ ಮಾರಕ ದಾಳಿ ನೆರವಿನಿಂದ ಐಪಿಎಲ್-14ರ ತನ್ನ ನಿರ್ಣಾಯಕ ಹಣಾಹಣಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸುವ ಮೂಲಕ ಪ್ಲೇಆಫ್ ರೇಸ್‌ನಲ್ಲಿ ಉಳಿಯಿತು. ಮತ್ತೊಂದೆಡೆ, 8ನೇ ಸೋಲು ಕಂಡ ರಾಜಸ್ಥಾನ ರಾಯಲ್ಸ್ ತಂಡ ಲೀಗ್‌ನಿಂದ ಹೊರಬಿದ್ದ 3ನೇ ತಂಡ ಎನಿಸಿಕೊಂಡಿತು. ಪ್ಲೇಆಫ್ ಹಂತಕ್ಕೇರುವ ಆಸೆ ಜೀವಂತವಿರಿಸಿರುವ ರೋಹಿತ್ ಶರ್ಮ ಬಳಗ ಶುಕ್ರವಾರ ನಡೆಯಲಿರುವ ತನ್ನ ಕಡೇ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಇದೀಗ ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ 4ನೇ ಸ್ಥಾನಿಯಾಗಿ ಪ್ಲೇಆಫ್ ಹಂತಕ್ಕೇರಲು ಪ್ರಬಲ ಪೈಪೋಟಿ ಏರ್ಪಟ್ಟಿದೆ.

    ಶಾರ್ಜಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಮುಂಬೈ ನಾಯಕ ರೋಹಿತ್ ಶರ್ಮ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡ ವೇಗಿಗಳಾದ ನಾಥನ್ ಕೌಲ್ಟರ್ ನಿಲ್ (14ಕ್ಕೆ 4), ಜೇಮ್ಸ್ ನೀಶಾಮ್ (12ಕ್ಕೆ 3), ಜಸ್‌ಪ್ರೀತ್ ಬುಮ್ರಾ (14ಕ್ಕೆ 2) ರಾಯಲ್ಸ್‌ಗೆ ಕಡಿವಾಣ ಹೇರುವಲ್ಲಿ ಯಶಸ್ವಿಯಾದರು. 20 ಓವರ್ ಕೋಟಾ ಪೂರ್ತಿ ಆಡಿದರೂ ರಾಜಸ್ಥಾನ ರಾಯಲ್ಸ್ ತಂಡ 9 ವಿಕೆಟ್‌ಗೆ 90 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಅಲ್ಪಮೊತ್ತ ಬೆನ್ನಟ್ಟಿದ ಮುಂಬೈ ತಂಡ, ಇಶಾನ್ ಕಿಶನ್ (50*ರನ್, 25 ಎಸೆತ, 5 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 8.2 ಓವರ್‌ಗಳಲ್ಲಿ 2 ವಿಕೆಟ್‌ಗೆ 94 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ, ಪ್ಲೇಆಫ್ ಹಂತಕ್ಕೇರಲು ಪ್ರಮುಖವೆನಿಸಿರುವ ತನ್ನ ರನ್‌ರೇಟ್ ಸುಧಾರಿಸಿಕೊಂಡ ಮುಂಬೈ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.

    ರಾಜಸ್ಥಾನ ರಾಯಲ್ಸ್: 9 ವಿಕೆಟ್‌ಗೆ 90 (ಎವಿನ್ ಲೆವಿಸ್ 24, ಯಶಸ್ವಿ ಜೈಸ್ವಾಲ್ 12, ಡೇವಿಡ್ ಮಿಲ್ಲರ್ 15, ರಾಹುಲ್ ತೆವಾಟಿಯಾ 12, ನಾಥನ್ ಕೌಲ್ಟರ್ ನಿಲ್ 14ಕ್ಕೆ 4, ಜೇಮ್ಸ್ ನೀಶಾಮ್ 12ಕ್ಕೆ 3, ಜಸ್‌ಪ್ರೀತ್ ಬುಮ್ರಾ 14ಕ್ಕೆ 2), ಮುಂಬೈ ಇಂಡಿಯನ್ಸ್: 8.2 ಓವರ್‌ಗಳಲ್ಲಿ 2 ವಿಕೆಟ್‌ಗೆ 94 (ಇಶಾನ್ ಕಿಶನ್ 50*, ರೋಹಿತ್ ಶರ್ಮ 22, ಮುಸ್ತಾಫಿಜರ್ ರೆಹಮಾನ್ 32ಕ್ಕೆ 1, ಚೇತನ್ ಸಕಾರಿಯಾ 36ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts