More

    ಮೆಕ್ಕೆಜೋಳಕ್ಕೆ ಮಗ್ಗಲ ಮುಳ್ಳುಸಜ್ಜೆ

    ಶಿಗ್ಗಾಂವಿ (ಗ್ರಾ): ಹೊಲಗಳಲ್ಲಿ ಮೆಕ್ಕೆಜೋಳಕ್ಕಿಂತ ಹುಲುಸಾಗಿ ಬೆಳೆದು ನಿಂತಿರುವ ಮುಳ್ಳುಸಜ್ಜೆ ಹೆಸರಿನ ಕಸವು ಪೈರಿಗೆ ಮುಳುವಾಗುತ್ತಿದೆ.

    ತಾಲೂಕಿನಾದ್ಯಂತ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ರೈತರು ಹತ್ತಿ ಬೆಳೆಯಿಂದ ವಿಮುಖರಾಗಿ ಕಡಿಮೆ ಖರ್ಚಿನ ಮತ್ತು ಉತ್ತಮ ದರ ಹೊಂದಿರುವ ಮೆಕ್ಕೆಜೋಳದತ್ತ ಮುಖ ಮಾಡಿದ್ದಾರೆ. ಬಂಕಾಪುರ ಹೋಬಳಿ ಭಾಗದಲ್ಲಿ ಎರಡು ವರ್ಷಗಳಿಂದ ಮುಂಗಾರು ಮತ್ತು ಹಿಂಗಾರಿನಲ್ಲಿ ಮೆಕ್ಕೆಜೋಳ ಬೆಳೆದ ಜಮೀನುಗಳಲ್ಲಿ ಮುಳ್ಳುಸಜ್ಜೆ ಕಳೆ ತೀವ್ರವಾಗಿ ಬೆಳೆಯುತ್ತಿದ್ದು, ಈ ಬಾರಿ ನಿಯಂತ್ರಣಕ್ಕೆ ಬಾರದೆ ರೈತರು ಕಂಗಾಲಾಗಿದ್ದಾರೆ.

    ಬೆಳೆ ಜತೆಗಿರುವ ಕಳೆ ತೆಗೆಯಲು ಕಾರ್ಮಿಕರ ಕೊರತೆಯಿದೆ. ಬುಡದಿಂದಲೇ ಮುಳ್ಳಿನಿಂದ ಕೂಡಿರುವ ಮುಳ್ಳುಸಜ್ಜೆ ಕೀಳಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಬಂದರೂ ಹೆಚ್ಚು ಕೂಲಿ ಕೊಡಬೇಕಾಗಿದೆ. ಹಾಗೇ ಬಿಟ್ಟರೆ ಬೆಳೆ ಇಳುವರಿ ಕುಂಠಿತವಾಗುತ್ತದೆ ಎಂಬ ಆತಂಕ ರೈತರದು.

    ಈ ಭಾಗದಲ್ಲಿ ಮುಳ್ಳುಸಜ್ಜೆ ಕಳೆ ಇರಲಿಲ್ಲ. ಸರ್ಕಾರ ಪೂರೈಕೆ ಮಾಡಿರುವ ರಾಸಾಯನಿಕ ಗೊಬ್ಬರ ಯೂರಿಯಾ ಮತ್ತು ಡಿಎಪಿಯಲ್ಲಿ ಮುಳ್ಳುಸಜ್ಜೆ ಬೀಜ ಬೆರೆತು ಬಂದಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಇದರ ಬಗ್ಗೆ ಕೃಷಿ ವಿಜ್ಞಾನಿಗಳೇ ಉತ್ತರ ನೀಡಬೇಕಾಗಿದೆ.

    ರೈತರು ಮುಂಗಾರು ಮತ್ತು ಹಿಂಗಾರಿನಲ್ಲಿ ಪದೇಪದೆ ಮೆಕ್ಕೆಜೋಳ ಬೆಳೆಯುತ್ತಿರುವುದರಿಂದ ಮುಳ್ಳುಸಜ್ಜೆ ಕಳೆ ಹೆಚ್ಚಾಗಿ ನಿಯಂತ್ರಣಕ್ಕೆ ಬರುತ್ತಿಲ್ಲ. ರೈತರು ಬೆಳೆ ಬದಲಾವಣೆ (ಕಾಲಗೈ) ಮಾಡಬೇಕು. ಗೋವಿನಜೋಳ ಬೆಳೆದ ಹೊಲಗಳಲ್ಲಿ ಹೆಸರು, ಅಲಸಂದಿ, ಸೋಯಾಬೀನ್, ಹುರಳಿಯಂತಹ ದ್ವಿದಳ ಧಾನ್ಯ ಬೆಳೆಯಬೇಕು. ಬೆಳೆ ಬದಲಾವಣೆ ಒಂದೇ ಮುಳ್ಳುಸಜ್ಜೆ ನಿಯಂತ್ರಣಕ್ಕೆ ಇರುವ ಪರಿಹಾರವಾಗಿದೆ ಎನ್ನುತ್ತಾರೆ ಶಿಗ್ಗಾಂವಿ ಸಹಾಯಕ ಕೃಷಿ ನಿರ್ದೇಶಕ ಸುರೇಶಬಾಬುರಾವ್ ದೀಕ್ಷಿತ್.

    ಕಳೆನಾಶಕಕ್ಕೂ ಬಗ್ಗದ ಕಸ: ಕೆಲ ಪ್ರತಿಷ್ಠಿತ ಔಷಧ ಕಂಪನಿಗಳು ಮುಳ್ಳುಸಜ್ಜೆ ನಿಯಂತ್ರಣ ಮಾಡುತ್ತೇವೆ ಎಂದು ರೈತರ ಹೊಲಗಳಲ್ಲಿ ಡೆಮೋ ಮೂಲಕ ಉಚಿತವಾಗಿ ಕಳೆನಾಶಕ ಸಿಂಪಡಿಸಿ ಕಳೆ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಆದರೂ ಫಲಿತಾಂಶ ಶೂನ್ಯವಾಗಿದೆ.

    ಗೋವಿನಜೋಳದಲ್ಲಿನ ಮುಳ್ಳುಸಜ್ಜೆ ಕಸಕ್ಕೆ ಕಳೆನಾಶಕ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಹಲವು ಬಾರಿ ಕಿತ್ತರೂ ಮತ್ತೆ ಹುಟ್ಟುತ್ತಿದೆ. ಭೂಮಿಯ ಫಲವತ್ತತೆ ಹೀರಿಕೊಂಡು ಗೋವಿನಜೋಳದ ಇಳುವರಿ ಕುಂಠಿತಗೊಳಿಸಿದೆ. ಇದಕ್ಕೆ ಕೃಷಿ ವಿಜ್ಞಾನಿಗಳು ಶಾಶ್ವತ ಪರಿಹಾರ ತಿಳಿಸಬೇಕು.
    I ಗದಿಗೆಪ್ಪ ಹೆಳವರ, ರೈತ ಮುಗಳಿಕಟ್ಟಿ ಗ್ರಾಮ

    ಬ್ಯಾಡಗಿ ತಾಲೂಕಿನ ಕೆಲ ರೈತರು ಮುಳ್ಳುಸಜ್ಜೆ ನಿಯಂತ್ರಣಕ್ಕೆ ಒಂದು ಕ್ಯಾನ್‌ಗೆ 30 ಎಂಎಲ್ ಟಿಂಜರ್, ಒಂದು ಕೆಜಿ ಉಪ್ಪು, 8 ಕೆಜಿ ಯೂರಿಯಾ ಮಿಶ್ರಣ ಮಾಡಿ ಸಿಂಪಡಿಸಿದ್ದಾರೆ. ಇದರಿಂದ ಕಳೆ ನಿಯಂತ್ರಣಕ್ಕೆ ಬಂದಿದೆ ಎಂಬ ಮಾತು ಕೇಳಿಬಂದಿದೆ. ಆದರೆ, ಖಚಿತವಾಗಿಲ್ಲ. ರೈತರು ಒಮ್ಮೆ ಈ ಪ್ರಯೋಗ ಮಾಡಿ ನೋಡಬಹುದು.
    I ಸುರೇಶಬಾಬುರಾವ್ ದಿಕ್ಷೀತ್, ಸಹಾಯಕ ಕೃಷಿ ನಿರ್ದೇಶಕ ಶಿಗ್ಗಾಂವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts