More

    ಕಳೆಗಟ್ಟಿದ ಬಸಾಪುರ ಮಹೇಶ್ವರ ಜಾತ್ರೆ -ಸುತ್ತಮುತ್ತಲ ಹಳ್ಳಿಗಳ ಭಕ್ತರ ದಂಡು

    ದಾವಣಗೆರೆ: ಹೊಸ ವರ್ಷದ ಮೊದಲ ಜಾತ್ರೆಗೆ ಹೊರವಲಯದ ಬಸಾಪುರ ಗ್ರಾಮ ಕಳೆಗಟ್ಟಿದೆ. ಐತಿಹಾಸಿಕ ಮಹೇಶ್ವರ ಸ್ವಾಮಿ ಜಾತ್ರೆ ಮಂಗಳವಾರ ವಿಧ್ಯುಕ್ತವಾಗಿ ಚಾಲನೆಗೊಂಡಿದ್ದು, ಯಥಾಪ್ರಕಾರ ವಿವಿಧೆಡೆಗಳಿಂದ ಭಕ್ತರ ದಂಡು ಹರಿದುಬರುತ್ತಿದೆ.
    ಕಾರ್ತಿಕ ಮಾಸದಲ್ಲಿ ಜರುಗುವ ಪುರುಷರ ಈ ಹಬ್ಬಕ್ಕೆ ದಾವಣಗೆರೆ ಅಲ್ಲದೆ ಅಕ್ಕಪಕ್ಕದ ಗ್ರಾಮಸ್ಥರು, ಭಕ್ತರು ಅಕ್ಕಿ-ಬೇಳೆ, ಬೆಲ್ಲ, ಬಾಳೆಹಣ್ಣಿನ ಗೊನೆ ಇತ್ಯಾದಿ ದಾನ ನೀಡುತ್ತಾರೆ. ಕಟ್ಟಿಗೆ ಒಲೆಗಳಿಂದಲೇ ಪ್ರಸಾದ ತಯಾರಿಸಲಾಗುತ್ತದೆ. ಹೀಗಾಗಿ ದಾನಿಗಳಿಂದ ಕಟ್ಟಿಗೆ ಕೂಡ ಬರುತ್ತದೆ. ಉಳಿದಂತೆ ಬಾಳೆಎಲೆ, ತರಕಾರಿ ಇತರೆ ಮಸಾಲೆ ಸಾಮಗ್ರಿಯನ್ನು ಟ್ರಸ್ಟ್ ಖರೀದಿಸಲಿದೆ.
    ಊರ ಹೊರವಲಯದ 1.5 ಎಕರೆ ವಿಸ್ತೀರ್ಣದ ಜಾಗದಲ್ಲಿ ಪ್ರತಿಷ್ಠಾಪನೆಗೊಂಡ ಮಹೇಶ್ವರ ಸ್ವಾಮಿ ಗದ್ದುಗೆಗೆ ಜಾತ್ರೆ ಹಿನ್ನೆಲೆಯಲ್ಲಿ ತೆಂಗಿನ ನೆರಕೆ ಸ್ವರೂಪ ನೀಡಲಾಗಿತ್ತು. ಸ್ವಾಮಿಗೆ ಹೂವಿನ ಅಲಂಕಾರ ಮಾಡಲಾಗಿತ್ತು.
    ದಾವಣಗೆರೆ ಸುತ್ತಮುತ್ತಲ ಜನರು ಗದ್ದುಗೆ ಪಕ್ಕದ ಬಾವಿಯಲ್ಲಿ ಕೈಕಾಲು-ಮುಖ ತೊಳೆದು, ಮಹೇಶ್ವರನ ಜತೆಗೆ ಇತರ ದೇವರ ದರ್ಶನ ಪಡೆದರು. ಹಣೆಗೆ ವಿಭೂತಿ ಧರಿಸಿ, ನಂತರ ಅನ್ನ-ಹಾಲು, ಬೋರಾ ಸಕ್ಕರೆ- ಬಾಳೆಹಣ್ಣಿನ ಪ್ರಸಾದ ಸವಿದರು.
    ತೇಲಿದ ಬಾಳೆಹಣ್ಣಿನ ಒಂದು ಚಿಪ್ಪು
    ಮಂಗಳವಾರ ಬೆಳಗ್ಗೆ 7 ಗಂಟೆಗೆ ಜಂಗಮರ ಪೂಜೆ ಬಳಿಕ ಸ್ವಾಮಿ ಗದ್ದುಗೆ ಸಮೀಪದ ಪೂಜಾ ಬಾವಿಯಲ್ಲಿ ಗಂಗೆ ಪೂಜೆ ಜತೆಗೆ ಎರಡು ಬಾಳೆಹಣ್ಣಿನ ಚಿಪ್ಪುಗಳನ್ನು ಬಿಡುವ ಸಂಪ್ರದಾಯ ನೆರವೇರಿತು. ಒಂದು ಚಿಪ್ಪು ಮುಳುಗಿ, ಮತ್ತೊಂದು ತೇಲಿತು. ಇದು ಶುಭ ಶಕುನ. ಎರಡೂ ಬಾಳೆಹಣ್ಣಿನ ಚಿಪ್ಪು ಮುಳುಗಿದರೆ ಅನರ್ಥವಾಗಲಿದೆ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಬಂದಿದೆ ಎಂದು ಟ್ರಸ್ಟ್‌ನ ಟ್ರಸ್ಟಿ ಆಲದಹಳ್ಳಿ ಸಿದ್ದರಾಮೇಶ್ವರ ವಿವರಿಸಿದರು.
    ಪೂಜೆ ಬಳಿಕ ಬೆಳಗ್ಗೆ 8 ಗಂಟೆಗೆ ಮಹಾಪಂಕ್ತಿ ಪ್ರಸಾದ ನೆರವೇರಿತು. ಸಂಜೆಯವರೆಗೂ ಬಂದ ಭಕ್ತರಿಗೆ ನಿರಂತರ ಅನ್ನ-ಹಾಲು, ಬಾಳೆಹಣ್ಣು-ಬೋರಾ ಸಕ್ಕರೆ ಪ್ರಸಾದ ವ್ಯವಸ್ಥೆ ಇತ್ತು. ಚಿಣ್ಣರು, ಹಿರಿಯರು ಸ್ವಯಂಸೇವಕರಾಗಿ ಆಹಾರ ಬಡಿಸಿ ಸ್ವಾಮಿಯ ಸೇವೆ ಸಲ್ಲಿಸಿದರು. ಸಾವಿರಾರು ಸಂಖ್ಯೆಯ ಜನರು ಜಾತ್ರೆಯಲ್ಲಿ ಭಾಗಿಯಾದರು.
    4 ಲಕ್ಷ ರೂ. ಅಂದಾಜು ವೆಚ್ಚ
    ಅಂಗಡಿ ಬಸವಲಿಂಗಪ್ಪ, ಅಂಗಡಿ ಕೆಂಚಬಸಪ್ಪ ಅವರ ಜಮೀನಿನಲ್ಲಿ ಪ್ರತಿ ವರ್ಷ ನಡೆಯುವ ಜಾತ್ರೆಗೆ ತಿಂಗಳ ಮುನ್ನವೇ ಸಿದ್ಧತೆ ನಡೆಯುತ್ತದೆ. ಹೊಲದ ಕಳೆ ಸ್ವಚ್ಛಗೊಳಿಸಿ ಔಷಧ ಸಿಂಪಡಣೆ ಮಾಡಿ ಸಗಣಿ ಬಳಿಯಲಾಗುತ್ತದೆ. ಜಾತ್ರೆಗೆ ಸುಮಾರು 3ರಿಂದ 4 ಲಕ್ಷ ರೂಗಳಷ್ಟು ವಚ್ಚವಾಗಲಿದೆ ಎಂದು ಟ್ರಸ್ಟ್‌ನವರು ಹೇಳಿದರು.
    ಮಂಗಳವಾರ 10 ಕ್ವಿಂ. ಅಕ್ಕಿ, 5 ಕ್ವಿಂ. ಪ್ರಮಾಣದ ಬೋರಾ ಸಕ್ಕರೆ ಹಾಗೂ ಸುಮಾರು 21 ಸಾವಿರ ಬಾಳೆಹಣ್ಣು ಬಳಸಲಾಗುತ್ತಿದೆ. ಬುಧವಾರ 15 ಕ್ವಿಂ. ಅಕ್ಕಿ ಬಳಕೆಯಾಗುತ್ತದೆ. ಮೊದಲ ದಿನ 300 ಲೀ. ಹಾಗೂ ಎರಡನೇ ದಿನದಂದು ಮಜ್ಜಿಗೆ ಪ್ರಸಾದದ ಕಾರಣಕ್ಕೆ 400ಲೀ. ಹಾಲು ವೆಚ್ಚವಾಗಲಿದೆ. ಭಕ್ತರ ಮನೆ ಮತ್ತು ಹಾಲಿನ ಡೇರಿ ಮೂಲಕವಾಗಿ ಇದಕ್ಕೆ ಸಹಕಾರ ಸಿಗುತ್ತಿದೆ ಎಂದು ವಿವರಿಸಿದರು.
    ಪಲ್ಲಕ್ಕಿಯಲ್ಲಿ ಬರುವ ದೇವರು
    ಸೋಮವಾರ ಸಂಜೆ ವಾಡಿಕೆಯಂತೆ ಆನೆಕೊಂಡದ ಬಸವೇಶ್ವರ ಸ್ವಾಮಿ, ಬಸಾಪುರದ ಶಿವಯೋಗಿ ಹಾಲಸ್ವಾಮಿ, ಗುರುಸಿದ್ದೇಶ್ವರ ಸ್ವಾಮಿ ಉತ್ಸವಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸಿ ಜಾತ್ರೆಗೆ ನಿಯೋಜಿತ, ಮಹೇಶ್ವರ ಸ್ವಾಮಿ ತೋಟಕ್ಕೆ ತರಲಾಯಿತು. ತದನಂತರವೇ ಅಡುಗೆ ತಯಾರಿಗೆ ಒಲೆ ಹಚ್ಚುವ ಪ್ರತೀತಿ ಅನೂಚಾನವಾಗಿ ನಡೆದುಕೊಂಡು ಬಂದಿದೆ.
    ಎರಡು ದಿನದ ಜಾತ್ರೆಯಲ್ಲಿ ಕಡಿಮೆ ಎಂದರೂ 25 ಸಾವಿರದಷ್ಟು ಭಕ್ತರ ದಂಡು ಹರಿದುಬರಲಿದೆ. ಮೊದಲ ದಿನ ಗದ್ದುಗೆ ಸಮೀಪ ಸೋಡಾ, ಐಸ್‌ಕ್ರೀಂ ತಳ್ಳುಗಾಡಿಗಳು ಸುಳಿದಾಡಿದವು. ಬುಧವಾರ ಹತ್ತಿಕಾಯಿ-ಮೆಣಸಿನಕಾಯಿ, ಬೀಡಾ, ಇನ್ನಿತರೆ ತಾತ್ಕಾಲಿಕ ಅಂಗಡಿಗಳು ತೆರೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts