More

    ಯೋಜನೆ ಜಾರಿಯಾದ್ರೆ ಎಲ್ಲ ಚುನಾವಣೆ ಬಹಿಷ್ಕಾರ

    ಚಿಕ್ಕಮಗಳೂರು: ಏಳು ಗ್ರಾಪಂಗಳ ಗ್ರಾಮಸ್ಥರ ಅಭಿಪ್ರಾಯವನ್ನೂ ಮೀರಿ ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಘೊಷಿಸಿದರೆ ಆ ಭಾಗದ ಗ್ರಾಮಸ್ಥರೊಂದಿಗೆ ಪಕ್ಷಾತೀತವಾಗಿ ಗಿರಿಶ್ರೇಣಿ ರಸ್ತೆಯ ದ್ವಾರದಲ್ಲಿ ನಿರಂತರ ಹೋರಾಟ ಮಾಡಲಾಗುವುದು ಎಂದು ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಸಮಿತಿ ಮುಖಂಡರು ಎಚ್ಚರಿಸಿದರು.

    ಸಚಿವ ಸಂಪುಟ ಸಭೆಗೂ ಹೋಗದ ಈ ವರದಿಯನ್ನು ಜಾರಿಗೊಳಿಸದಂತೆ ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಾರಾ? ಆಡಳಿತ ಅಥವಾ ವಿಪಕ್ಷದ ಯಾವ ನಾಯಕರಿಗೆ ಈ ಬಗ್ಗೆ ಕಾಳಜಿ ಇದೆ? ಎಂಬುದನ್ನು ಗಮನಿಸಿ ಮುಂದಿನ ಹೋರಾಟ ರೂಪಿಸೋಣ. ಸದನದಲ್ಲಿ ಧ್ವನಿ ಎತ್ತಿ ಸೂಕ್ಷ್ಮಪ್ರದೇಶ ಕೈಬಿಡಿ ಎಂದು ತಮ್ಮ ಪಕ್ಷದ ಶಾಸಕರಿಗೆ ಪತ್ರ ಬರೆದು ಮನವರಿಕೆ ಮಾಡಿ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸ್ಥಳೀಯ ಮುಖಂಡರಿಗೆ ಮನವಿ ಮಾಡಿದರು.

    ಇದು ನಮ್ಮ ಅಳಿವು-ಉಳಿವಿನ ಪ್ರಶ್ನೆ. ಈ ಯೋಜನೆ ಮುಂದುವರಿದರೆ ಯೋಜನೆ ಕೈ ಬಿಡುವವರೆಗೆ 15 ಗ್ರಾಪಂಗಳ ವ್ಯಾಪ್ತಿಯಲ್ಲಿ ಎಲ್ಲ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದರು.

    ಹುಲುವತ್ತಿಯಲ್ಲಿ ಗುರುತ್ವಾಕರ್ಷಣೆಯಿಂದ ಪಡೆಯುತ್ತಿದ್ದ ನೀರಿನ ಪೈಪ್​ಲೈನ್ ತೆರವುಮಾಡಿ ನೋಟಿಸ್ ಜಾರಿ ಮಾಡಿ ಕೇಸ್ ದಾಖಲಿಸಿದ್ದಾರೆ. ಈ ಯೋಜನೆ ಜಾರಿಗೆ ನಮ್ಮ ಅಭ್ಯಂತರವಿಲ್ಲ. ಆದರೆ ಫಾಮ್ರ್ 53, 57 ಅರ್ಜಿದಾರರಿಗೆ ಹಕ್ಕುಪತ್ರ ನೀಡಿ. ಆಶ್ರಯ ಮನೆ, ಕೃಷಿಭೂಮಿ, ರುದ್ರಭೂಮಿ, ಶಾಲೆಗೆ ಸೌಕರ್ಯ ಒದಗಿಸಿ ಉಳಿದಿದ್ದನ್ನು ಘೊಷಣೆ ಮಾಡಿ ಎಂದು ಆಗ್ರಹಿಸಿದರು.

    ಕೈಮರ, ದಾಸರಹಳ್ಳಿಯಿಂದ ದೇವಿಪುರ, ಹಿರೇಕೊಳಲೆಯಿಂದ ಐಡಿ ಪೀಠದವರೆಗೂ ಹತ್ತಾರು ಗ್ರಾಪಂಗಳನ್ನು ಸೇರಿಸಿ ಸುಮಾರು 20 ಸಾವಿರ ಎಕರೆ ಪ್ರದೇಶವನ್ನು ಸಂರಕ್ಷಿತ ಮಿಸಲು ಅರಣ್ಯ ಮಾಡಲು ಹೊರಟಿದ್ದರು. ಇದೀಗ ಇದರಲ್ಲಿ 5 ಸಾವಿರ ಎಕರೆ ಕಡಿಮೆ ಮಾಡಿ 15897 ಎಕರೆ ಅನುಮೋದನೆಗಾಗಿ ಅಧಿಕಾರಿಗಳು ಸರ್ಕಾರಕ್ಕೆ ಕಳುಹಿಸಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು ಜನರ ಪರವಾಗಿ ಮಾತನಾಡುತ್ತಾರೆ ಎಂಬ ಭರವಸೆ ಇತ್ತು. ಆದರೆ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿದ್ದರಿಂದ ಹೋರಾಟ ದಿಕ್ಕು ತಪ್ಪಿತು. ಹಾಗಾಗಿ ವಿಚಾರದಲ್ಲಿ ರಾಜಕಾರಣ ಬೆರೆಸಬಾರದು ಎಂದರು.

    ಯೋಜನೆ ಪರಿಸರವಾದಿಗಳ ಷಡ್ಯಂತ್ರ: ನಮಗೆ ಬದುಕು ಕಟ್ಟಿಕೊಡಿ ಎಂದು ಮತ ನೀಡಿದರೆ ಜೀವನವನ್ನು ಬುಡಮೇಲು ಮಾಡಲು ಜನಪ್ರತಿನಿಧಿಗಳು ಹುನ್ನಾರ ನಡೆಸುತ್ತಿದ್ದಾರೆ ಎಂದು ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯ್ಕುಮಾರ್ ದೂರಿದರು.

    ಈ ಭಾಗದಲ್ಲಿ ದತ್ತಪೀಠ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಬಿಸಗ್ನಿಮಠ, ಫಲಾರಸ್ವಾಮಿ ಮಠ ಮತ್ತಿತರ ಶ್ರದ್ಧಾ ಕೇಂದ್ರಗಳಿವೆ. ಮಹಲ್ ಮತ್ತು ಕೆಮ್ಮಣ್ಣುಗುಂಡಿ ನಡುವೆ ಗೇಟ್ ಅಳವಡಿಸಿದ್ದಾರೆ. 5 ಗಂಟೆ ನಂತರ ಪ್ರವೇಶ ನಿಷೇಧವಾಗಿದೆ. ಮುಂದಿನ ದಿನಗಳಲ್ಲಿ ಕೈಮರದ ಬಳಿ ಇರುವ ಗೇಟ್ ಭದ್ರಗೊಳಿಸಿ ಸಮಯ ನಿಗದಿಪಡಿಸುತ್ತಾರೆ. ಮುಳ್ಳಯ್ಯನಗಿರಿ ಯೋಜನೆ ಜಾರಿಯಾದರೆ ಯಾವುದಕ್ಕೂ ಅವಕಾಶ ಸಿಗಲ್ಲ. ಅಭಿವೃದ್ಧಿ ಕೆಲಸಗಳೂ ಆಗಲ್ಲ ಎಂದರು.

    ಬರೀ ಮೀಸಲು ಅರಣ್ಯ ಘೊಷಣೆಯಾಗುತ್ತಿಲ್ಲ. ಜತೆಗೆ ರಾಷ್ಟ್ರೀಯ ಉದ್ಯಾನ ಮಾಡುತ್ತಿದ್ದಾರೆ. 1972ನೇ ಅರಣ್ಯ ಕಾಯ್ದೆ 36ಎ ಅಡಿಯಲ್ಲಿ ಯೋಜನೆ ರೂಪಿಸುತ್ತಿದ್ದಾರೆ. ಮೀಸಲು ಅರಣ್ಯಕ್ಕೆ ಅನ್ವಯವಾಗುವ ಎಲ್ಲ ಕಾನೂನುಗಳು ಈ ಯೋಜನೆಗೂ ಅನ್ವಯವಾಗುತ್ತದೆ. ಈ ಯೋಜನೆಯಿಂದ ಯಾವ ರಾಜಕಾರಣಿಗಳಿಗೂ ಲಾಭವಿಲ್ಲ. ಆದರೆ ಪರಿಸರ ವಾದಿಗಳ ಷಡ್ಯಂತ್ರದಿಂದ ಈ ಯೋಜನೆ ಮುನ್ನೆಲೆಗೆ ಬಂದಿದೆ ಎಂದು ಆಪಾದಿಸಿದರು.

    ಸಂಚಾಲಕ ಕೆ.ಕೆ.ರಘು ಮಾತನಾಡಿ, 200ಕ್ಕೂ ಹೆಚ್ಚು ಸರ್ವೆ ನಂ. ಇದ್ದರೆ ಕೇವಲ 30 ಸರ್ವೆ ನಂ.ನ ಅಭಿಪ್ರಾಯ ಸಂಗ್ರಹಿಸಿ ಉಳಿದದ್ದನ್ನು ಮರೆ ಮಾಚಿದ್ದಾರೆ. ಈ ಯೋಜನೆ ಯಾವುದೇ ಪಕ್ಷದ ಕೂಸಲ್ಲ. ಪರಿಸರವಾದಿಗಳ ದುರುದ್ದೇಶದಿಂದ ರೂಪಿತವಾಗಿದೆ. ಇದನ್ನು ತಪ್ಪಿಸದಿದ್ದರೆ ಜನರ ಬದುಕು ಬರಡಾಗುತ್ತದೆ. ಪೂರ್ವಾಪರ, ಮುಂದಾಲೋಚನೆ ಇಲ್ಲದ ಜಿಲ್ಲಾಡಳಿತ ಏಕಾಏಕಿ ನಿರ್ಧರಿಸಿದ್ದರಿಂದ ಮುಗ್ಧ ಜನರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.

    ಸಮಿತಿ ಶಾಂತಕುಮಾರ್, ಉಮೇಶ್, ಜೋಸೆಫ್, ರವಿ, ಕುಮಾರ್, ಜಯಕುಮಾರ್, ದಿವಾಕರ್, ಕಾಂಗ್ರೆಸ್​ನ ರೇಖಾ ಹುಲಿಯಪ್ಪ ಗೌಡ, ರಸೂಲ್ ಖಾನ್, ಪ್ರಕಾಶ್, ಜೆಡಿಎಸ್ ಮುಖಂಡ ಹೊಲದಗದ್ದೆ ಗಿರೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts