More

    ಮುಡುಕುತೊರೆಯಲ್ಲಿ ವಿಜೃಂಭಣೆಯ ರಥೋತ್ಸವ

    ತಲಕಾಡು: ಇತಿಹಾಸ ಪ್ರಸಿದ್ಧ ಶ್ರೀಸೋಮಶೈಲ ಪುಣ್ಯ ಕ್ಷೇತ್ರ ಮುಡುಕುತೊರೆಯಲ್ಲಿ ಮಂಗಳವಾರ ಭಕ್ತಸಾಗರದ ನಡುವೆ ಶ್ರೀ ಭ್ರಮರಾಂಬ ಸಮೇತ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.

    ಮುಂಜಾನೆಯಿಂದಲೇ ಸಾಗರೋಪಾದಿಯಲ್ಲಿ ಬೆಟ್ಟಕ್ಕೆ ಹರಿದು ಬಂದ ಭಕ್ತರು, ದೇಗುಲದ ಮೂಲಮೂರ್ತಿ ಹಾಗೂ ಪ್ರಾಂಗಣದಲ್ಲಿ ಹೂವಿನ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಉತ್ಸವಮೂರ್ತಿಯ ದರ್ಶನ ಪಡೆದರು.

    ಬೆಳಗ್ಗೆ ಮೂಲ ದೇವರಿಗೆ ಏಕಾದಶಿ ರುದ್ರಾಭಿಷೇಕ, ಹೊಸ ವಸ್ತ್ರ ಸಮರ್ಪಣೆ, ಶಿವಯಾಗ ಹೋಮ, ರಥಕ್ಕೆ ಸಂಪ್ರೋಕ್ಷಣೆ, ಮಹಾಬಲಿ ಪ್ರದಾನ ನಂತರ ಸ್ವಾಮಿಗೆ ಬೃಹಸ್ಪತಿ ಪೂಜೆ, ನವಗ್ರಹ ಪೂಜೆ ಮಧ್ಯಾಹ್ನ 12 ಗಂಟೆಗೆ ಬೆಟ್ಟದ ಮೇಲಿನ ದೇಗುಲದಲ್ಲಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿ ತಾಳುಬೆಟ್ಟದ ಮಂಟಪದ ಬಳಿಗೆ ತರಲಾಯಿತು.

    ತಾಳುಬೆಟ್ಟದ ಬಳಿಯ ಆರು ಮಂಟಪಗಳಲ್ಲಿ ಉತ್ಸವಮೂರ್ತಿಗೆ ಪೂಜಾ ಕೈಂಕರ್ಯ ನಡೆಸಿ ರಥದ ಬಳಿಗೆ ತರಲಾಯಿತು. ರಥದ ಬಳಿ ಯಾತ್ರಾದಾನ, ಪೂರ್ವಕ, ಮಂಗಳಾಷ್ಟಕ ಪಠನ, ಉತ್ಸವ ಮೂರ್ತಿಗೆ ರಥದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ನಡೆಸಿ ರಥಾರೋಹಣ ನೆರವೇರಿಸಲಾಯಿತು. ಪಂಚಲಿಂಗ ಪ್ರಧಾನ ದೇವಾಲಯದ ಆಗಮಿಕ ಆನಂದ್ ದೀಕ್ಷಿತ್, ಮುಡುಕುತೊರೆ ದೇಗುಲದ ಸರದಿ ಅರ್ಚಕ ವಿಶ್ವನಾಥ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯ ನೆರವೇರಿದವು.

    ತಾಳುಬೆಟ್ಟದ ಮುಖ್ಯವೃತ್ತದಿಂದ ರಥಬೀದಿಯಲ್ಲಿ ಮಧ್ಯಾಹ್ನ 2ಗಂಟೆಗೆ ಉತ್ಸವ ಮೆರವಣಿಗೆ ಸಾಗಿತು. ಮೊದಲ ರಥದಲ್ಲಿ ಶ್ರೀ ವಿಘ್ನನಿವಾರಕ ಮಹಾಗಣಪತಿ, ಎರಡನೇ ರಥದಲ್ಲಿ ಶ್ರೀ ಮನೋನ್ಮಣಿ ಅಮ್ಮನವರು ಮೂರನೇ ಮಹಾರಥದಲ್ಲಿ ಶ್ರೀ ಭ್ರಮರಾಂಬ ಸಮೇತ ಶ್ರೀ ಮಲ್ಲಿಕಾರ್ಜುನಸ್ವಾಮಿ ಉತ್ಸವಮೂರ್ತಿ ವಿರಾಜಮಾನರಾಗಿ ಕಂಗೊಳಿಸಿತು. ನೆರೆದಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಜೈಕಾರ ಕೂಗುತ್ತ ಸಂಭ್ರಮದಿಂದ ತೇರು ಎಳೆದರು.

    ಲಕ್ಷಕ್ಕೂ ಅಧಿಕ ಭಕ್ತರ ಆಗಮನ: ನಾಡಿನ ವಿವಿಧ ಮೂಲೆಗಳಿಂದ ಜಾತ್ರೆಗೆ ಅಗಮಿಸಿದ್ದ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರು ಹಾಗೂ ವಿಶೇಷವಾಗಿ ನವದಂಪತಿ ಚಲಿಸುತ್ತಿದ್ದ ತೇರಿಗೆ ಬಾಳೆಹಣ್ಣು, ಜವನ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಸಮೀಪದ ಗ್ರಾಮಗಳಿಂದ ಎತ್ತಿನಗಾಡಿ ಟ್ರಾೃಕ್ಟರ್, ಆಟೋ, ದ್ವಿಚಕ್ರವಾಹನ, ಕಾರು, ಬಸ್ಸಿನಲ್ಲಿ ಜಾತ್ರೆಗೆ ಭರಪೂರವಾಗಿ ಭಕ್ತರು ಆಗಮಿಸಿದ್ದರು. ಜಾತ್ರೆಯಲ್ಲಿ ವ್ಯಾಪಾರ ಚಟುವಟಿಕೆ ಬಿರುಸುಗೊಂಡಿತ್ತು. ಪುಟಾಣಿಗಳು ಸುತ್ತುವ ಜೋಕಾಲಿಯಲ್ಲಿ ಸಂಭ್ರಮಿಸಿದರು.

    ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಜಿಪಂ ಸದಸ್ಯ ಟಿ.ಎಚ್. ಮಂಜುನಾಥ್, ದೇಗುಲದ ಇಒ ರಾಜಶೇಖರ್, ನಾಡಕಚೇರಿ ತಹಸೀಲ್ದಾರ್ ನರಸಿಂಹಯ್ಯ, ರಾಜಸ್ವನಿರೀಕ್ಷಕ ಸಿದ್ದರಾಜು, ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಆರ್.ಲವ. ತಲಕಾಡು ಪಿಎಸ್‌ಐ ಬಿ.ಬಸವರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts