More

    ಮುಡುಕುತೊರೆಯಲ್ಲಿ ಪರ್ವತ ಪರಿಷೆ ಸಂಭ್ರಮ

    ತಲಕಾಡು: ಶ್ರೀ ಸೋಮಶೈಲ ಎಂದೇ ಪ್ರಸಿದ್ಧಿ ಪಡೆದಿರುವ ಮುಡುಕುತೊರೆಯಲ್ಲಿ ಸೋಮವಾರ ಜನಸಾಗರದ ನಡುವೆ ಪರ್ವತಪರಿಷೆ (ಬಟ್ಟಲು ಪೂಜೆ) ಉತ್ಸವ ವಿಜೃಂಭಣೆಯಿಂದ ಜರುಗಿತು.


    ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಮಹಿಳೆಯರು ಮುತ್ತೈದೆತನ ಶಾಶ್ವತವಾಗಿರಲಿ ಎಂದು ಇಲ್ಲಿನ ಕಾವೇರಿ ನದಿಯಲ್ಲಿ ಮಿಂದು ಗುಂಪು ಗುಂಪಾಗಿ ನದಿ ದಡಕ್ಕೆ ತೆರಳಿ ಪಂಚಕಳಸ ಸ್ಥಾಪನೆ ಮಾಡಿ ಶ್ರೀ ಪಾರ್ವತಿ ದೇವಿಯಲ್ಲಿ ವಿಶೇಷವಾಗಿ ಪ್ರಾರ್ಥಿಸಿದರು.
    ಮುಡುಕುತೊರೆ ರಥೋತ್ಸವದ ಬಳಿಕ ಶ್ರೀ ಪಾರ್ವತಿ ದೇವಿಯ ತವರು ಶ್ರೀಶೈಲಕ್ಕೆ ತೆರಳಿದ್ದ ಬಸವ, ಪರ್ವತ ಪರಿಷೆಯ ದಿನ ಮುಡುಕುತೊರೆ ಜಾತ್ರೆಗೆ ಬನ್ನಿಮರದ ಬಳಿಗೆ ಕರೆತರಲಾಗುತ್ತದೆ. ಇಲ್ಲಿಗೆ ಆಗಮಿಸಿದ ಬಸವನಿಗೆ ಭಕ್ತರು ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿದರು.


    ಕಾವೇರಿ ನದಿ ದಡದಿಂದ ಬೆಟ್ಟದ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನಸ್ವಾಮಿ ದೇಗುಲದ ಬಳಿಗೆ ಬಸವ ಸಾಗುವ ರಥಬೀದಿಯ ರಸ್ತೆಯುದ್ದಕ್ಕೂ ಭಕ್ತರು ಬೇಸಿಗೆ ಉರಿಬಿಸಿಲನ್ನೂ ಲೆಕ್ಕಿಸದೆ ಬಸವನಿಗೆ ಅಡ್ಡ ಮಲಗಿ ದಾಟಿಸಿಕೊಂಡು ಭಕ್ತಿ ಮೆರೆದರು.


    ಬೆಟ್ಟದ ಮೇಲೆ ದೇವರ ದರ್ಶನಕ್ಕೆ ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ರಥ ಬೀದಿಯ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಪರಿಷೆಯ ದಿನ ಚಿಕ್ಕರಥೋತ್ಸವ ಜರುಗಲಿಲ್ಲ. ಬೇಸಿಗೆ ಬಿಸಿಲಿನಲ್ಲಿ ಜಾತ್ರೆಗೆ ದಣಿದು ಬರುತ್ತಿದ್ದ ಭಕ್ತರಿಗೆ ಪಾನಕ, ನೀರು, ಮಜ್ಜಿಗೆ ವಿತರಣೆ ಮಾಡಲಾಯಿತು. ಅನ್ನದಾಸೋಹ, ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೇಗುಲದಲ್ಲಿ ಬೆಳಗಿನ ಜಾವ 3.30ಕ್ಕೆ ಮೊದಲ ಅಭಿಷೇಕ ಪೂಜೆ, 5 ಗಂಟೆಗೆ ಎರಡನೇ ಅಭಿಷೇಕ ಪೂಜೆ ನೆರವೇರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts