More

    ಗದ್ದೆಯಂತಾದ ಮುಡಿಪು-ಇರಾ ರಸ್ತೆ

    ಉಳ್ಳಾಲ: ಏಳು ವರ್ಷಗಳ ಹಿಂದೆ ಚತುಷ್ಪಥ ರಸ್ತೆ ನಕ್ಷೆಯಡಿ ಕಾಮಗಾರಿ ಆರಂಭಗೊಂಡಿದ್ದ ಮುಡಿಪು-ಇರಾ ರಸ್ತೆ ಬುಧವಾರ ಸುರಿದ ಮಳೆಗೆ ಅಕ್ಷರಶಃ ಗದ್ದೆಯಂತಾಗಿದ್ದು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.

    ಅವೈಜ್ಞಾನಿಕ ಕಾಮಗಾರಿ ಪರಿಣಾಮ ಕಾಂಕ್ರೀಟ್ ಹಾಕಿದ್ದರೂ ವಾಹನ ಸಂಚಾರ ಅಪಾಯಕಾರಿ ಎನಿಸಿದೆ. ಅರೆಬರೆ ಚರಂಡಿ ಕಾಮಗಾರಿಯಿಂದ ವಾಹನ ಸವಾರರು ಜೀವ ಭಯದಿಂದ ಸಾಗಬೇಕಾಗಿದ್ದು ಪ್ರತಿಭಟನೆ, ಮನವಿಗಳ ಹೊರತಾಗಿಯೂ ಅಧಿಕಾರಿಗಳು ಕಣ್ತೆರೆದಿಲ್ಲ.

    ರಸ್ತೆ ಕಾಮಗಾರಿಯಲ್ಲಿನ ನಿರ್ಲಕ್ಷೃ ವಿರೋಧಿಸಿ ಸ್ಥಳೀಯರು ಹೋರಾಟಕ್ಕೆ ಸಜ್ಜಾಗಿದ್ದಾರೆ. ತಮ್ಮ ತಾಳ್ಮೆ ಪರೀಕ್ಷಿಸುತ್ತಿರುವ ಕೆಎಐಡಿಬಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಕೈಗಾರಿಕಾ ಪ್ರದೇಶದ ರಸ್ತೆ ಬಂದ್ ಮಾಡಲು ಯೋಜನೆ ರೂಪಿಸಿದ್ದರು. ಈ ಬಗ್ಗೆ ವಿಜಯವಾಣಿ ಜೂನ್ 15ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

    ಐದು ದಿನಗಳ ಹಿಂದೆ ಕಾಮಗಾರಿ ಬಾಕಿಯಿರುವ ರಸ್ತೆಗೆ ಗುತ್ತಿಗೆದಾರರು ಕ್ವಾರಿಯ ಮಣ್ಣು ತಂದು ಸುರಿದಿದ್ದಾರೆ. ಬುಧವಾರ ಸುರಿದ ಮಳೆಗೆ, ಕೈಗಾರಿಕಾ ವಲಯ ಎಂದು ಗುರುತಿಸಲಾಗಿರುವ ರಸ್ತೆಯ ಮೇಲ್ಭಾಗದಲ್ಲಿರುವ ಪ್ರದೇಶದಲ್ಲಿ ಚರಂಡಿ ಮುಚ್ಚಲ್ಪಟ್ಟ ಪರಿಣಾಮ ಹರಿದ ನೀರು ಕ್ವಾರಿ ಮಣ್ಣಿಗೆ ಸೇರಿ ರಸ್ತೆಯಿಡೀ ಕೆಸರಿನಿಂದ ಆವೃತ್ತವಾಗಿದೆ. ಇದರಿಂದ ವಾಹನ ಸವಾರರು ಇನ್ನಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಎರಡು ವರ್ಷಗಳ ಹಿಂದೆಯೂ ರಸ್ತೆ ಕೆಸರಿನಿಂದ ಆವೃತವಾಗಿ ಸಂಚಾರ ಬಂದ್ ಆಗಿತ್ತು. ಅಂಥದ್ದೇ ಪರಿಸ್ಥಿತಿ ಈ ಬಾರಿ ಪುನರಾವರ್ತನೆ ಆಗುವ ಆತಂಕ ಸಾರ್ವಜನಿಕರದ್ದಾಗಿದ್ದು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.

    ಜಿಲ್ಲಾಧಿಕಾರಿಗೆ ಪತ್ರ

    ಮೆಲ್ಕಾರ್, ಕಲ್ಲಡ್ಕ, ಮಂಚಿ, ಬಿ.ಸಿ.ರೋಡು ರಸ್ತೆ, ಮಾರ್ನಬೈಲ್, ವಿಟ್ಲ ಮುಂತಾದ ಪ್ರದೇಶಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುವುದರಿಂದ ದಿನವಿಡೀ ವಾಹನಗಳ ಸಾಲು ಕಂಡು ಬರುತ್ತದೆ. ಆದರೂ ಇದನ್ನು ಗುತ್ತಿಗೆದಾರರಾಗಲೀ, ಅಧಿಕಾರಿಗಳಾಗಲೀ ಗಂಭೀರವಾಗಿ ಪರಿಗಣಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ವಿಜಯವಾಣಿಯಲ್ಲಿ ಪ್ರಕಟಗೊಂಡ ವರದಿಯ ಪ್ರತಿಯೊಂದಿಗೆ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಜನಶಿಕ್ಷಣ ಟ್ರಸ್ಟ್, ರಸ್ತೆ ಕಾಮಗಾರಿಯ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದೆ.

    ಐದು ದಿನಗಳ ಹಿಂದೆ ಗುತ್ತಿಗೆದಾರರು ಮಣ್ಣು ತಂದು ಹಾಕಿದ್ದಾರೆ. ಆರಂಭದಲ್ಲಿ ಮಣ್ಣು ಹಾಕಿ ತಾತ್ಕಾಲಿಕ ನೆಲೆಯಲ್ಲಾದರೂ ರಸ್ತೆ ಸರಿಪಡಿಸಬಹುದೆಂದು ಭಾವಿಸಿದ್ದೆವು. ಆದರೆ ಮಣ್ಣು ಹಾಕಿದ್ದರಿಂದ ಮಳೆನೀರು ನಿಂತು ಸಂಪೂರ್ಣ ಕೆಸರಿನಿಂದ ಕೂಡಿದ್ದು ವಾಹನ ಸಂಚಾರ ಕಷ್ಟ ಎನಿಸಿದೆ
    – ರಾಧಾಕೃಷ್ಣ ರೈ ಉಮಿಯ, ಹೋರಾಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts