More

    ವಾಹನ ಚಾಲಕರಿಂದ ಪಾದಚಾರಿಗಳಿಗೆ ಇನ್ನಿಲ್ಲದ ತೊಂದರೆ

    ವಾಹನ ಚಾಲಕರಿಂದ ಪಾದಚಾರಿಗಳಿಗೆ ಇನ್ನಿಲ್ಲದ ತೊಂದರೆ

    ಮೂಡಿಗೆರೆ: ಪಟ್ಟಣದಲ್ಲಿ ವಾಹನ ದಟ್ಟಣೆಯಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಿರಿದಾದ ಎಲ್ಲ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಉಂಟಾದಾಗ ಪೊಲೀಸರು ರಸ್ತೆ ಸಂಚಾರ ಸುಗಮಗೊಳಿಸಲು ಹರಸಾಹಸ ಪಡುತ್ತಿರುತ್ತಾರೆ. ರಸ್ತೆ ಅಗಲೀಕರಣವಾಗದೆ ಸಮಸ್ಯೆಗೆ ಪರಿಹಾರವೇ ಇಲ್ಲ.

    ಪಟ್ಟಣದ ಕೆ.ಎಂ.ರಸ್ತೆ, ಎಂ.ಜಿ.ರಸ್ತೆ, ತತ್ಕೋಳ ರಸ್ತೆ, ಜೆ.ಎಂ.ರಸ್ತೆ ಮೇಗಳಪೇಟೆ ಸಹಿತ ಇನ್ನು ಕೆಲ ರಸ್ತೆಗಳಲ್ಲಿ ಪ್ರತಿ ದಿನ ಬೆಳಗ್ಗೆಯಿಂದ ಸಂಜೆಯವರೆಗೆ ವಾಹನಗಳು ಅಡ್ಡಾದಿಡ್ಡಿಯಾಗಿ ಸಾಗುತ್ತ ಪಾದಚಾರಿಗಳಿಗೆ ಇನ್ನಿಲ್ಲದ ತೊಂದರೆ ಕೊಡುತ್ತಿವೆ. ಎಲ್ಲ ರಸ್ತೆಗಳೂ ತೀರಾ ಕಿರಿದಾಗಿವೆ. ಹಿಂದಿನ ಕಾಲದಲ್ಲಿ ಎತ್ತಿನಗಾಡಿಗೆಂದು ನಿರ್ವಿುಸಿದ ರಸ್ತೆಗೆ ಡಾಂಬರೀಕರಣ ಮಾಡಿ ಅದರಲ್ಲೇ ಸಂಚಾರ ಮುಂದುವರಿಸಲಾಗುತ್ತಿದೆ.

    ಎರಡು ವರ್ಷದ ಹಿಂದೆ ಕೆ.ಎಂ. ರಸ್ತೆ ಹೊರತುಪಡಿಸಿ ಉಳಿದ ಎಲ್ಲ ರಸ್ತೆಗಳಿಗೂ ನಗರೋತ್ಥಾನದ 3.5 ಕೋಟಿ ರೂ. ಬಳಸಿ ಕಾಂಕ್ರಿಟೀಕರಣಗೊಳಿಸಲಾಗಿತ್ತು. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಬದಿ ದೊಡ್ಡ ಹೊಂಡ ಉಂಟಾಗಿದೆ. ವಾಹನಗಳನ್ನು ಕಾಂಕ್ರೀಟ್ ರಸ್ತೆಯಿಂದ ಬದಿಗೆ ಸರಿಸಲು ಸಾಧ್ಯವಾಗುತ್ತಿಲ್ಲ. ಪಟ್ಟಣದೊಳಗಿನ ಬಾಕ್ಸ್ ಚರಂಡಿಯೂ ಬಾಯಿ ತೆರೆದಿದೆ.

    8 ವರ್ಷದ ಹಿಂದೆ ಎಂ.ಪಿ.ಕುಮಾರಸ್ವಾಮಿ ಎರಡನೇ ಅವಧಿಗೆ ಶಾಸಕರಾಗಿದ್ದಾಗ ತಾಪಂ ಸಭಾಂಗಣದಲ್ಲಿ 4 ಬಾರಿ ಸಾರ್ವಜನಿಕ ಸಭೆ ನಡೆಸಿ ಪ್ರಾರಂಭದಲ್ಲಿ ಕೆ.ಎಂ.ರಸ್ತೆ ಅಗಲೀಕರಣ ಮಾಡಲು ರಸ್ತೆ ಮಧ್ಯದಿಂದ ಎರಡೂ ಕಡೆ 45 ಅಡಿಯವರೆಗೆ ಕಟ್ಟಡಗಳನ್ನು ತೆರವುಗೊಳಿಸುವಂತೆ ಮಾಲೀಕರಿಗೆ ಸೂಚಿಸಲಾಗಿತ್ತು. ಬಳಿಕ ಜಯಪ್ರಕಾಶ್ ಹೆಗಡೆ ಸಂಸದರಾಗಿದ್ದಾಗ ಕೆ.ಎಂ.ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 173 ಎಂದು ಘೊಷಣೆ ಮಾಡಲಾಯಿತು. ಹೆದ್ದಾರಿಯಾದ ಬಳಿಕ ಈ ರಸ್ತೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಪಪಂ ರಸ್ತೆ ಅಗಲೀಕರಣ ಯೋಜನೆ ಕೈ ಬಿಟ್ಟಿತು.

    ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ತಕ್ಕ ಮಟ್ಟಿಗೆ ರಸ್ತೆಯ ಗುಂಡಿ ಮುಚ್ಚಿ ಬೇರೆ ಅಭಿವೃದ್ಧಿ ಮಾಡದೆ ಕೈಚೆಲ್ಲಿ ಕುಳಿತಿದ್ದಾರೆ. ಎಂ.ಜಿ.ರಸ್ತೆ ಅಗಲೀಕರಣವನ್ನು ಪಪಂ ಕೈಗೆತ್ತಿಕೊಂಡಿಲ್ಲ. ಈಗ ಪ್ರತಿನಿತ್ಯ ವಾಹನ ದಟ್ಟಣೆಯಿಂದ ಪಟ್ಟಣದಲ್ಲಿ ಸಂಚಾರ ಕಷ್ಟವಾಗುತ್ತಿದೆ.

    ಕಡೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ 173 ಅನ್ನು ಕಡೂರಿನಿಂದ ಚಿಕ್ಕಮಗಳೂರಿನವರೆಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಅದರ ಕಾಮಗಾರಿ ಪ್ರಗತಿಯಲ್ಲಿದೆ. ನಂತರ ಮೂಡಿಗೆರೆವರೆಗೆ ಅಗಲೀಕರಣ ಮಾಡಲಾಗುವುದು. ಮೂಡಿಗೆರೆಯಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದರು.

    ಪಟ್ಟಣದ ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಸಭೆ ಕರೆದು ರ್ಚಚಿಸಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ವಾಹನ ದಟ್ಟಣೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts