More

    ಸರ್ಕಾರಿ ಆಸ್ಪತ್ರೆಗಳಲ್ಲಿ ಇಲ್ಲ ತಾಯಿಕಾರ್ಡ್: ಎರಡ್ಮೂರು ತಿಂಗಳಿಂದ ಗರ್ಭಿಣಿಯರ ಪರದಾಟ

    ದೇವರಾಜ ಮ್ಯಾದನೇರಿ ಮುದೇನೂರು

    ಸರ್ಕಾರ, ಗರ್ಭಿಣಿ-ಮಗುವಿನ ಆರೋಗ್ಯ ದೃಷ್ಟಿಯಿಂದ ಜನನಿ-ಶಿಶು ಸುರಕ್ಷಾ ಕಾರ್ಯಕ್ರಮದಡಿ ತಾಯಿ ಕಾರ್ಡ್ ವಿತರಿಸುತ್ತಿದೆ. ಆದರೆ, ಕಳೆದ ಎರಡ್ಮೂರು ತಿಂಗಳಿಂದ ಮುದೇನೂರು ಸೇರಿದಂತೆ ಕುಷ್ಟಗಿ ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ತಾಯಿ ಚೀಟಿ ಸಿಗದ ಕಾರಣ ಪರದಾಡುವಂತಾಗಿದೆ.

    ಗರ್ಭಿಣಿಯರಿಗೆ ಪ್ರಸೂತಿ ಪೂರ್ವ, ಹೆರಿಗೆ ವೇಳೆ ಹಾಗೂ ಪ್ರಸೂತಿ ನಂತರದ ಆರೋಗ್ಯ ಸೇವೆಗಳು ಉಚಿತ ಹಾಗೂ ಸಕಾಲಕ್ಕೆ ದೊರೆಯಬೇಕೆಂಬ ಉದ್ದೇಶದಿಂದ ಸರ್ಕಾರ ಜನನಿ-ಶಿಶು ಸುರಕ್ಷಾ ಕಾರ್ಯಕ್ರಮ ಜಾರಿಗೊಳಿಸಿ ತಾಯಿ ಕಾರ್ಡ್ ವಿತರಿಸುತ್ತಿದೆ. ಇದರಿಂದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ, ಔಷಧ ಸುಲಭವಾಗಿ ಪಡೆದುಕೊಳ್ಳಬಹುದು. ಅಲ್ಲದೆ ಮಗುವಿನ ಜನನ ಪ್ರಮಾಣ ಪತ್ರ ಪಡೆಯಬಹುದು. ಲಸಿಕೆ ಹಾಕಿಸಿಕೊಳ್ಳಲು ಕಾರ್ಡ್ ಅನುಕೂಲವಾಗಲಿದೆ. ಆದರೆ, ಕುಷ್ಟಗಿ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ತಾಯಿ ಕಾರ್ಡ್ ಇಲ್ಲದ ಕಾರಣ ಸಿಬ್ಬಂದಿ ಪುಸ್ತಕಗಳಲ್ಲಿ ನೋಂದಣಿ ಮಾಡಿಕೊಳ್ಳುವಂತಹ ಸ್ಥಿತಿ ಬಂದಿದೆ.

    ತಾಲೂಕಿನ ಚಳಗೇರಾ, ಹನುಮಸಾಗರ, ಹಿರೇಗೊಣ್ಣಾಗರ, ಮಾಲಗಿತ್ತಿ, ಹೂಲಗೇರಾ, ದೋಟಿಹಾಳ, ಮುದೇನೂರು, ತಾವರಗೇರಾ, ಹಿರೇಮನ್ನಾಪುರ ಸೇರಿ 11 ಪಿಎಚ್‌ಸಿಗಳಿವೆ.ಲಿಂಗದಹಳ್ಳಿ, ಮೆಣೇಧಾಳ, ಚಳಗೇರಾ, ಹಿರೇನಂದಿಹಾಳ, ಬೆನಕಹಾಳ, ತಳುವಗೇರಾ, ಹಿರೇಬನ್ನಿಗೋಳ, ಸಂಗನಾಳ ಸೇರಿದಂತೆ 37 ಕಡೆ ಉಪ ಕೇಂದ್ರಗಳಿವೆ. ಎರಡ್ಮೂರು ತಿಂಗಳಿಂದ ಗರ್ಭಿಣಿಯರಿಗೆ ಸಕಾಲಕ್ಕೆ ತಾಯಿ ಕಾರ್ಡ್ ಸಿಗುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದ ಗರ್ಭಿಣಿಯರು ಸಮಸ್ಯೆ ಎದುರಿಸುತ್ತಿದ್ದಾರೆ. ಬೇರೆ ಊರಿಗೆ ಹೋಗಿ ಚಿಕಿತ್ಸೆ ಪಡೆಯಬೇಕಾಗಿದೆ. ಗರ್ಭಿಣಿಯರಿಗೆ ಶೀಘ್ರ ತಾಯಿ ಕಾರ್ಡ್ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

    ಸರ್ಕಾರಿ ಆಸ್ಪತ್ರೆಗಳಲ್ಲಿ ತಾಯಿ ಕಾರ್ಡ್ ಲಭ್ಯ ಇಲ್ಲದ ಕಾರಣ ತಾತ್ಕಾಲಿಕವಾಗಿ ಗರ್ಭಿಣಿಯರ ಹೆಸರು ನೋಂದಣಿ ಮಾಡಿಸಿಕೊಳ್ಳಲು ವೈದ್ಯರಿಗೆ ಸೂಚಿಸಲಾಗಿದೆ. ನೆರೆಯ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಿಂದ ಪಡೆದು ಹಂಚಿಕೆ ಮಾಡಲಾಗುತ್ತಿದೆ. ಕೆಲ ದಿನಗಳಲ್ಲಿ ತಾಯಿ ಕಾರ್ಡ್ ಬರಲಿದ್ದು, ಎಲ್ಲ ಗರ್ಭಿಣಿಯರಿಗೆ ವಿತರಿಸಲಾಗುವುದು.
    | ಆನಂದ ಗೋಟೂರು, ವೈದ್ಯಾಧಿಕಾರಿ, ತಾಲೂಕು ಆಸ್ಪತ್ರೆ, ಕುಷ್ಟಗಿ

    ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ತಾಯಿ ಕಾರ್ಡ್ ಇಲ್ಲದ ಕಾರಣ ಗರ್ಭಿಣಿಯರು ತೊಂದರೆ ಅನುಭವಿಸುತ್ತಿದ್ದಾರೆ. ದೂರದ ಹಳ್ಳಿಯವರು ಬೇರೆ ಊರಿನ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಲು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಆರೋಗ್ಯ ಇಲಾಖೆ ತ್ವರಿತವಾಗಿ ತಾಯಿ ಕಾರ್ಡ್ ಹಂಚಿಕೆಗೆ ಮುಂದಾಗಬೇಕು.
    | ಹುಸೇನಪ್ಪ ಹಿರೇಮನಿ, ಗ್ರಾಪಂ ಸದಸ್ಯ, ಮುದೇನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts