More

    ತಾಪಂ ಗದ್ದುಗೆ ಯಾರ ಮುಡಿಗೆ ?

    ಶಂಕರ ಈ. ಹೆಬ್ಬಾಳ ಮುದ್ದೇಬಿಹಾಳ

    ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನದ ಬಾಕಿ ಉಳಿದಿರುವ ಅವಧಿಗೆ ಆಯ್ಕೆಯಾಗಲು ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
    ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬ ಸ್ಥಾನಕ್ಕೆ ಮೀಸಲಾಗಿದೆ. ಕಾಂಗ್ರೆಸ್‌ನಲ್ಲಿ ಈ ಮೀಸಲಾತಿ ಅಡಿ ಆಯ್ಕೆಯಾಗಿರುವ ಸದಸ್ಯರಿದ್ದು ಬಿಜೆಪಿಯಲ್ಲಿ ಇಲ್ಲ. ಹೀಗಾಗಿ ಜೆಡಿಎಸ್‌ನ ಒಬ್ಬರೇ ಸದಸ್ಯರನ್ನು ಬಿಜೆಪಿ ನಾಯಕರು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅಧ್ಯಕ್ಷ ಪಟ್ಟಕ್ಕೆ ಕೂಡಿಸುವ ತಂತ್ರಗಳನ್ನು ಹೆಣೆದಿದ್ದಾರೆ.

    ಪಕ್ಷಗಳ ಬಲಾಬಲ

    ಅವಿಭಜಿತ ತಾಲೂಕು ಪಂಚಾಯಿತಿ ಆಗಿದ್ದ ಮುದ್ದೇಬಿಹಾಳ ತಾಪಂನಲ್ಲಿ ಮುಂಚೆ 22 ಸದಸ್ಯರು ಇದ್ದರು. ಇದೀಗ ನೂತನ ತಾಲೂಕುಗಳಾದ ತಾಳಿಕೋಟೆಗೆ ಎಂಟು ಹಾಗೂ ನಿಡಗುಂದಿಗೆ ಒಂದು ಸ್ಥಾನ ಹಂಚಿಕೆಯಾಗಿರುವುದರಿಂದ ಮುದ್ದೇಬಿಹಾಳ ತಾಪಂನಲ್ಲಿ ಇದೀಗ 13 ಸದಸ್ಯರ ಬಲವಿದೆ.

    ಕಾಂಗ್ರೆಸ್ ಬಲ, ಜಾಣ ನಡೆ

    ತಾಪಂನಲ್ಲಿ ಒಟ್ಟು ಏಳು ಸದಸ್ಯರ ಬಲ ಹೊಂದಿರುವ ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನಕ್ಕೆ ಬೇಕಾದ ಎಲ್ಲ ಅರ್ಹತೆಗಳಿವೆ. ಆದರೆ ಇಂಗಳಗೇರಿ ತಾಪಂನಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಸದಸ್ಯ ಶಿವನಗೌಡ ಮುದ್ದೇಬಿಹಾಳ ಸದ್ಯಕ್ಕೆ ಬಿಜೆಪಿ ಜತೆಗೆ ಗುರುತಿಸಿಕೊಂಡಿದ್ದರಿಂದ ಕೈ ಪಾಳಯಕ್ಕೆ ಅಲ್ಪಮಟ್ಟಿನ ಹಿನ್ನಡೆಯಾಗಿದೆ. ಇಲ್ಲಿಯೂ ಕಾಂಗ್ರೆಸ್ ನಾಯಕರು ರಣತಂತ್ರ ರೂಪಿಸಿದ್ದು ಕಾಳಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ ಸದಸ್ಯೆ ಲಕ್ಷ್ಮೀಬಾಯಿ ರಾಠೋಡರನ್ನು ಆಪರೇಷನ್ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಎಷ್ಟು ಬೇಕೋ ಅಷ್ಟು ಸ್ಥಾನವನ್ನು ಕಾಂಗ್ರೆಸ್ ಹೊಂದಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

    ಬಿಜೆಪಿ ಬಲ, ರಣತಂತ್ರ

    ಐವರು ಬಿಜೆಪಿ ಸದಸ್ಯರಿದ್ದು ಜೆಡಿಎಸ್ ಸದಸ್ಯರೊಬ್ಬರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಸಂಖ್ಯೆ ಆರಕ್ಕೇರುತ್ತದೆ. ಈಗಾಗಲೇ ಇಂಗಳಗೇರಿ ತಾಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಶಿವನಗೌಡ ಮುದ್ದೇಬಿಹಾಳ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರಿಂದ ಅಧ್ಯಕ್ಷ ಸ್ಥಾನ ಸಲೀಸಾಗಿ ಬಿಜೆಪಿ ಪಾಳಯಕ್ಕೆ ಒಲಿಯಲಿದೆ ಎಂಬ ಲೆಕ್ಕಾಚಾರ ಪಕ್ಷದ ನಾಯಕರಲ್ಲಿದೆ. ಆದರೆ ಐವರು ಬಿಜೆಪಿ ಸದಸ್ಯರಲ್ಲಿಯೇ ಕಾಳಗಿ ಸದಸ್ಯೆ ಬಿಜೆಪಿಗೆ ಕೈಕೊಟ್ಟಿರುವುದರಿಂದ ಅಧ್ಯಕ್ಷ ಸ್ಥಾನ ಯಾವ ಪಕ್ಷದ ಪಾಲಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

    ಇದಲ್ಲದೇ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮತಕ್ಷೇತ್ರದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಪ್ರಮುಖ ಹುದ್ದೆಗಳಲ್ಲಿದ್ದು ತಮ್ಮ ಪಕ್ಷದವರನ್ನೇ ಅಧ್ಯಕ್ಷ ಗಾದಿಗೆ ಕೂಡಿಸಲು ಒಗ್ಗಟ್ಟಾಗಿ ರಣತಂತ್ರ ರೂಪಿಸುವರೋ ಎಂಬ ಮಾತುಗಳು ಕೇಳಿ ಬಂದಿವೆ.

    ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿರೋದು ಯಾರು

    ಆಲೂರು ಕ್ಷೇತ್ರದಿಂದ ಕಾಂಗ್ರೆಸ್ ಸದಸ್ಯೆ ಲತಾ ಮುತ್ತಿನಶೆಟ್ಟಿ ಗೂಳಿ ಹಾಗೂ ನಾಗಬೇನಾಳ ಕ್ಷೇತ್ರದ ಜೆಡಿಎಸ್ ಸದಸ್ಯೆ ಲಕ್ಷ್ಮೀಬಾಯಿ ಪವಾಡೆಪ್ಪ ಹವಾಲ್ದಾರ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಿದ್ದಾರೆ. ಹವಾಲ್ದಾರ ಅಧ್ಯಕ್ಷ ಸ್ಥಾನಕ್ಕೇರಲು ಬಿಜೆಪಿ ಬೆಂಬಲ ಪಡೆದುಕೊಳ್ಳುವುದು ನಿಶ್ಚಿತವಾಗಿದೆ.

    ಜೆಡಿಎಸ್ ಸದಸ್ಯೆ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿದ್ದಾರೆ. ಬೇರೆ ಕಡೆ ಹೋಗಿರುವ ಇನ್ನೋರ್ವ ಸದಸ್ಯ ಚುನಾವಣೆಯ ದಿನದೊಳಗೆ ಬರುವಂತೆ ತಿಳಿಸಿದ್ದೇವೆ. ಅಲ್ಲದೇ ಪೊಲೀಸ್ ಇಲಾಖೆಗೂ ಅವರನ್ನು ಶೋಧ ಮಾಡಿ ಕರೆದುಕೊಂಡು ಬರುವಂತೆ ಮನವಿ ಮಾಡಿದ್ದೇವೆ. ಬಿಜೆಪಿ ತಾಪಂನಲ್ಲಿ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲಿದೆ.
    ಪರಶುರಾಮ ಪವಾರ, ಬಿಜೆಪಿ ಮಂಡಲ ಅಧ್ಯಕ್ಷ

    ತಾಪಂ ಗದ್ದುಗೆ ಯಾರ ಮುಡಿಗೆ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts