More

    ಮುದ್ದಣನ ಹೆಸರಲ್ಲಿ 150 ರೂ.ನಾಣ್ಯ

    ಹರಿಪ್ರಸಾದ್ ನಂದಳಿಕೆ, ಬೆಳ್ಮಣ್

    ಉಡುಪಿ ಜಿಲ್ಲೆಯ ನಂದಳಿಕೆಯ ವರಕವಿ ಮುದ್ದಣನ 150ನೇ ಜಯಂತಿ (ಜ.24) ಪ್ರಯುಕ್ತ ಕೇಂದ್ರ ಸರ್ಕಾರ 150 ರೂ. ಮೌಲ್ಯದ ನಾಣ್ಯ ಹೊರತರಲಿದೆ. ಈ ಸಂಬಂಧ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ.

    35 ಗ್ರಾಂ ತೂಕದ 44 ಮಿ.ಮೀ.ಸುತ್ತಳತೆಯ ಈ ನಾಣ್ಯವನ್ನು 4 ಬಗೆಯ ಲೋಹಗಳ ಮಿಶ್ರಣದಿಂದ ತಯಾರಿಸಲಾಗಿದೆ. ಶೇ.50ರಷ್ಟು ಬೆಳ್ಳಿ, 40ರಷ್ಟು ತಾಮ್ರ, 05ರಷ್ಟು ನಿಕಲ್ ಹಾಗೂ 05ರಷ್ಟು ಸತುವನ್ನು ಹೊಂದಿದೆ. ನಾಣ್ಯದ ಒಂದು ಕಡೆ (ಹೆಡ್)ಮಧ್ಯದಲ್ಲಿ ಅಶೋಕ ಸ್ತಂಭದ ಸಿಂಹದ ತಲೆ, ಕೆಳಗೆ ಸತ್ಯಮೇವ ಜಯತೆ ಎಂದು ಬರೆದಿದೆ. ಬಲ ಬದಿಯ ವೃತ್ತದೊಳಗೆ ಭಾರತ್ ಎಂದೂ, ವೃತ್ತದೊಳಗೆ ಇಂಡಿಯಾ ಎಂದು ಬರೆಯಲಾಗಿದೆ. ಸಿಂಹದ ತಲೆಯ ಕೆಳಗೆ ರೂ.ಚಿಹ್ನೆ ಹಾಗೂ ಮೌಲ್ಯ 150 ಎಂದು ಬರೆದಿದೆ. ನಾಣ್ಯದ ಮತ್ತೊಂದು ಭಾಗದ ಮಧ್ಯೆ ಕವಿ ಮುದ್ದಣನ ಚಿತ್ರ, ಮೇಲಿನ ವೃತ್ತದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕವಿ ಮುದ್ದಣನ 150ನೇ ಜನ್ಮ ದಿನಾಚರಣೆ ಎಂಬ ಉಲ್ಲೇಖವಿದೆ. ಮುದ್ದಣನ ಚಿತ್ರದ ಕೆಳಗೆ ಅಂತರಾಷ್ಟ್ರೀಯ ಅಂಕೆಯಲ್ಲಿ ವರ್ಷ 1870-2020 ಎಂದು ಬರೆಯಲಾಗಿದೆ. ಭಾರತ ಸರ್ಕಾರದ ನಾಣ್ಯ ಮತ್ತು ಕರೆನ್ಸಿ ವಿಭಾಗದ ಜಂಟಿ ಕಾರ್ಯದರ್ಶಿ ಮನೀಶಾ ಸಿನ್ಹಾ ಜ.19ರಂದು ಈ ಪ್ರಕಟಣೆ ನೀಡಿದ್ದಾರೆ. ಈ ಹಿಂದೆ ಮುದ್ದಣನ ಹೆಸರಿನಲ್ಲಿ ಅಂಚೆ ಇಲಾಖೆ ಅಂಚೆಚೀಟಿಯನ್ನೂ ಬಿಡುಗಡೆ ಮಾಡಿ ಗೌರವ ಸೂಚಿಸಿತ್ತು.

    ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಕವಿ: ಕವಿ ಮುದ್ದಣ ಕಾರ್ಕಳ ತಾಲೂಕಿನ ನಂದಳಿಕೆ ಎಂಬ ಗ್ರಾಮೀಣ ಭಾಗದವರಾಗಿದ್ದರು. 1899ರಲ್ಲಿ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆಗೆ ಸೇರಿದರು. ಅವರ ಸಾಹಿತ್ಯ ಅಭಿರುಚಿ ಹಾಗೂ ಉತ್ಸುಕತೆ ಕಂಡು ಶಾಲಾ ಮೇಲಧಿಕಾರಿಗಳು ಅವರನ್ನು ಹೆಚ್ಚಿನ ವ್ಯಾಸಂಗಕ್ಕೆ ಮದ್ರಾಸು ತರಬೇತಿ ಶಾಲೆಗೆ ಕಳುಹಿಸಿದ್ದರು. ಸರ್ಕಾರದಿಂದ ಸಿಗುತ್ತಿದ್ದ ವಿದ್ಯಾಭ್ಯಾಸ ಭತ್ಯೆಯನ್ನು ಮುದ್ದಣ, ಪುರಾಣ ಕೃತಿಗಳ ಖರೀದಿಗೆ ವಿನಿಯೋಗಿಸುತ್ತಿದ್ದರು. ಪುಸ್ತಕ ಖರೀದಿಗೆ ಹಣದ ಕೊರತೆ ಇದ್ದಾಗ ಊಟದ ತ್ಯಜಿಸಿ ಉಳಿಯುತ್ತಿದ್ದ ಹಣದಿಂದ ಪುಸ್ತಕ ಖರೀದಿಸುತ್ತಿದ್ದರು. ಈ ಸಮಯದಲ್ಲೇ ಸಾಹಿತ್ಯ ಕೃತಿಗಳನ್ನು ರಚಿಸಲು ಪ್ರಾರಂಭಿಸಿದ್ದರು. ಮುದ್ದಣರ ಬದುಕು-ಬರಹ ಬಗ್ಗೆ ಪ್ರತಿ ವರ್ಷವೂ ನಂದಳಿಕೆ ಕವಿ ಮುದ್ದಣ ಮಿತ್ರ ಮಂಡಳಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

    ಅದ್ಭುತ ಕೃತಿಗಳ ರಚನೆಕಾರ: ಮುದ್ದಣ ಯಕ್ಷಗಾನ ಪ್ರೇಮಿಯೂ ಆಗಿದ್ದರು. ಅದ್ಭುತ ರಾಮಾಯಣ, ಶ್ರೀರಾಮ ಪಟ್ಟಾಭಿಷೇಕಂ (242 ಷಡ್ಪದಿ ಶೈಲಿಯ ಪದ್ಯಗಳು) ಹಾಗೂ ಶ್ರೀ ರಾಮಾಶ್ವಮೇಧಂ ಮುದ್ದಣನ ಶ್ರೇಷ್ಠ ಕೃತಿಗಳು. ಕುಮಾರ ವಿಜಯ ಯಕ್ಷಗಾನ ಪ್ರಸಂಗವನ್ನೂ ರಚಿಸಿದ್ದಾರೆ. ಹೆಂಡತಿಯೊಂದಿಗಿನ ಸಲ್ಲಾಪ ಚರ್ಚೆಯನ್ನು ಸಪ್ತಾಕ್ಷರಿ ಮಂತ್ರ ಎಂಬ ಗದ್ಯವಾಗಿಸಿದ್ದ ಮುದ್ದಣ 31ರ ಹರೆಯದಲ್ಲೇ (1901ರ ಫೆಬ್ರವರಿ 15) ಕ್ಷಯರೋಗಕ್ಕೆ ಬಲಿಯಾದರು.

    ಇದು ಗೌರವಾರ್ಥ, ಚಲಾವಣೆಗಲ್ಲ: ಭಾರತೀಯ ರಿಸರ್ವ್ ಬ್ಯಾಂಕ್ ಈ ‘ಸ್ಮರಣಾರ್ಥ ನಾಣ್ಯ’ಗಳನ್ನು ಸಾಧಕರು ಅಥವಾ ಘಟನೆಯ ಗೌರವಾರ್ಥ, ಅಥವಾ ನೆನಪಿಗಾಗಿ ಬಿಡುಗಡೆ ಮಾಡುತ್ತದೆ. ಈ ನಾಣ್ಯಗಳು ಚಲಾವಣೆಗೆ ಬರುವುದಿಲ್ಲ, ಅವುಗಳನ್ನು ನೆನಪಿಗಾಗಿ ಇರಿಸಲಾಗುತ್ತದೆ. ಈ ನಾಣ್ಯಗಳು ವಿವಿಧ ದರಗಳಲ್ಲಿವೆ. ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಗೌರವಾರ್ಥವಾಗಿ 1964ರಲ್ಲಿ ಮೊದಲ ಸ್ಮರಣಾರ್ಥ ನಾಣ್ಯ ಸರಣಿಯನ್ನು ಬಿಡುಗಡೆ ಮಾಡಲಾಯಿತು. ಸಂಗ್ರಾಹಕರು ಈ ವಿಶೇಷ ನಾಣ್ಯಗಳನ್ನು ಖರೀದಿಸಲು ಅವಕಾಶವಿದೆ.

    ನಂದಳಿಕೆಯ ಕವಿ ಮುದ್ದಣನ ಬಗ್ಗೆ ನಾಣ್ಯ ಹೊರಬರುತ್ತಿರುವ ವಿಚಾರ ಶ್ಲಾಘನೀಯ. ಈ ಮೂಲಕ ಕಾರ್ಕಳ ತಾಲೂಕಿನ ನಂದಳಿಕೆಯ ಕೀರ್ತಿ ಇನ್ನಷ್ಟು ಎತ್ತರಕ್ಕೇರಿದೆ. ನಂದಳಿಕೆಯಲ್ಲಿ ಮುಂದಿನ ದಿನಗಳಲ್ಲಿ ಮುದ್ದಣನ ಹೆಸರಿನಲ್ಲಿ ಅಧ್ಯಯನ ಕೇಂದ್ರ ತೆರೆಯಲು ಪ್ರಯತ್ನ ಮಾಡಲಾಗುವುದು.
    ವಿ.ಸುನೀಲ್ ಕುಮಾರ್, ಸಚಿವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

    ಮುದ್ದಣನ ಹೆಸರಿನ ನಾಣ್ಯ ಬರುತ್ತಿರುವುದು ಗ್ರಾಮಕ್ಕೆ ಖುಷಿ ನೀಡಿದೆ. ಈ ಮೂಲಕ ನಂದಳಿಕೆಗೆ ಕೀರ್ತಿ ಬಂದಿದೆ. ನಂದಳಿಕೆಯಲ್ಲಿ ಮುದ್ದಣನ ಹೆಸರಲ್ಲಿ ಇನ್ನೂ ಹಲವು ಯೋಜನೆಗಳು ಜಾರಿಗೆ ಬರಲಿವೆ.
    ಸುಹಾಸ್ ಹೆಗ್ಡೆ, ನಂದಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts