More

    ಮೂಡಲಗಿ – ನಂದಗಡ ಸಂಕಲ್ಪ ಯಾತ್ರೆ

    ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದ ಎದುರು ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿ ಮೂಡಲಗಿಯಿಂದ ಹೊರಟ ಸಂಕಲ್ಪ ಯಾತ್ರಿಗಳು ಭಾನುವಾರ ನಗರದ ಚನ್ನಮ್ಮ ವೃತ್ತಕ್ಕೆ ಆಗಮಿಸಿ, ಚನ್ನಮ್ಮಳ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

    ಮೂಡಲಗಿಯ ಶ್ರೀಮಂತ ಶಿವಯೋಗಿ ಮಹಾರಾಜರ ನೇತೃತ್ವದ ‘ಸಂಕಲ್ಪ ಯಾತ್ರೆ’ಯಲ್ಲಿ ಪಾಲ್ಗೊಂಡಿದ್ದ ನೂರಾರು ಜನರು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಬಳಿಕ ಪೀರನವಾಡಿಗೆ ತೆರಳಿದರು. ನಂತರ ಅಲ್ಲಿ ಇತ್ತೀಚೆಗೆ ಸ್ಥಾಪನೆಯಾದ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿ, ಖಾನಾಪುರ ತಾಲೂಕಿನ ನಂದಗಡಕ್ಕೆ ತೆರಳಿದರು.

    ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಮಾತನಾಡಿ, ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಇಬ್ಬರೂ ನಮಗೆ ಆದರ್ಶರಾಗಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಮಹನೀಯರಾದ ಈ ಇಬ್ಬರ ಪ್ರತಿಮೆ ಸ್ಥಾಪನೆ ಉದ್ದೇಶ ಈಡೇರದ ಹೊರತು ಹೋರಾಟ ನಿಲ್ಲದು ಎಂದರು. ಮೂಡಲಗಿಯಿಂದ 10ಕ್ಕೂ ಅಧಿಕ ಖಾಸಗಿ ವಾಹನಗಳ ಮೂಲಕ ಆಗಮಿಸಿದ ಜನತೆ ಕೋಟೆ ಕೆರೆ, ಅಶೋಕ ವೃತ್ತ, ಆರ್‌ಟಿಒ ಸರ್ಕಲ್, ರಾಯಣ್ಣ ವೃತ್ತ ಮಾರ್ಗವಾಗಿ ಚನ್ನಮ್ಮ ವೃತ್ತಕ್ಕೆ ಆಗಮಿಸಿ, ಪ್ರತಿಭಟನೆ ನಡೆಸಿದರು. ಬಳಿಕ ನಂದಗಡದಲ್ಲಿನ ರಾಯಣ್ಣ ಸಮಾಧಿಯತ್ತ ಹೊರಟರು. ಈ ಸಂದರ್ಭದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಪ್ರತಿಮೆ ಸ್ಥಾಪನೆಯಾಗುವವರೆಗೂ ಹೋರಾಟ

    ಚನ್ನಮ್ಮ ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಲಖನ್ ಸವಸುದ್ದಿ, ದೆಹಲಿಯಲ್ಲಿರುವ ಸಂಸತ್ ಎದುರು ವೀರರಾಣಿ ಕಿತ್ತೂರು ಚನ್ನಮ್ಮಳ ಪ್ರತಿಮೆ ಸ್ಥಾಪಿಸಿ, ಗೌರವ ಸಲ್ಲಿಸಲಾಗಿದೆ. ಇದೀಗ ಬೆಳಗಾವಿ ಸುವರ್ಣಸೌಧದ ಎದುರು ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿ ‘ಸಂಕಲ್ಪ ಯಾತ್ರೆ’ ಕೈಗೊಂಡಿದ್ದೇವೆ. ಮೂರ್ತಿ ಸ್ಥಾಪನೆಯಾಗುವವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts