More

    ಕೆಸರು, ಧೂಳು ಲಕ್ಷ್ಮೇಶ್ವರ ಜನತೆಗೆ ಗೋಳು

    ಲಕ್ಷ್ಮೇಶ್ವರ: ಪಟ್ಟಣದ ಅಭಿವೃದ್ಧಿಗೆ ತಕ್ಕಂತೆ ಮೂಲ ಸೌಲಭ್ಯ ದೊರಕದಿರುವುದರಿಂದ ಜನರು ಪರದಾಡುವಂತಾಗಿದೆ. ಮುಖ್ಯವಾಗಿ ಕುಡಿಯುವ ನೀರು, ರಸ್ತೆ, ಸ್ವಚ್ಛತೆಗಾಗಿ ಜನತೆ ಅಂಗಲಾಚುವಂತಾಗಿದೆ. ಪಟ್ಟಣದಲ್ಲಿನ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ಮಳೆಗಾಲದಲ್ಲಂತೂ ರಸ್ತೆ ಯಾವುದು, ಹೊಂಡ ಯಾವುದು ಎಂಬುದೇ ತಿಳಿಯುದಿಲ್ಲ.


    ಮಳೆಗಾಲದಲ್ಲಿ ಕೆಸರು, ಬೇಸಿಗೆಯಲ್ಲಿ ಧೂಳು: ಪಟ್ಟಣದಲ್ಲಿ 23 ವಾರ್ಡ್​ಗಳ ವ್ಯಾಪ್ತಿಯಲ್ಲಿ ಸುಮಾರು 96 ಕಿ.ಮೀ. ರಸ್ತೆಯಲ್ಲಿ ಕೇವಲ 21 ಕಿ.ಮೀ. ಡಾಂಬರ್ ಮತ್ತು ಒಂದಷ್ಟು ಕಡೆ ಮಾತ್ರ ಸಿಸಿ ರಸ್ತೆಗಳಿದ್ದರೆ, 30 ಕಿ.ಮೀ. ಕಚ್ಚಾ ರಸ್ತೆ ಇದೆ. ಉಳಿದ 45 ಕಿ.ಮೀ. ರಸ್ತೆಗಳು ಹೇಳ ಹೆಸರಿಲ್ಲದಂತಿವೆ.


    ಮಳೆಗಾಲದಲ್ಲಿ ಕೊಳಚೆ- ಕೆಸರಾಗಿದ್ದರೆ ಬೇಸಿಗೆಯಲ್ಲಿ ಧೂಳಿನ ಸಮಸ್ಯೆಯಿಂದ ಜನ ಪುರಸಭೆ ಮತ್ತು ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ. ಚರಂಡಿಗಳ ಸ್ಥಿತಿಯಂತೂ ಹೇಳತೀರದು. ಮಳೆಗಾಲದಲ್ಲಿ ರಸ್ತೆಗಳೇ ಚರಂಡಿಯಾಗಿ ಮಾರ್ಪಾಡುತ್ತಿವೆ. 7 ವರ್ಷಗಳ ಹಿಂದೆ ಪಟ್ಟಣದಲ್ಲಿ ಕೈಗೊಂಡಿದ್ದ 40 ಕೋಟಿ ರೂ. ವೆಚ್ಚದ ಒಳಚರಂಡಿ ಕಾಮಗಾರಿಯಿಂದ ಇದ್ದ ರಸ್ತೆಗಳೂ ಹಾಳಾಗಿ ಅಲ್ಲಿಂದ ಜನರ ಏಳು-ಬೀಳು ಪ್ರಾರಂಭವಾಯಿತು.


    ಪಟ್ಟಣವು ಪ್ರಮುಖ ವ್ಯಾಪಾರ ಕೇಂದ್ರವಾಗಿರುವುದರಿಂದ ಹೆಚ್ಚಿನ ಜನರು ಇಲ್ಲಿಗೆ ಬರುತ್ತಾರೆ. ಹಲವಾರು ವರ್ಷಗಳ ಬೇಡಿಕೆ ಪರಿಣಾಮ ಈಗ ಮುಖ್ಯ ಬಜಾರ್ ರಸ್ತೆಯ ಕಾಮಗಾರಿ ಕುಂಟುತ್ತಾ ಸಾಗಿರುವುದು ಜನರಿಗೆ ಸಮಾಧಾನದ ತಂದಿದೆ. ಆದರೆ, ವಾರ್ಡ್ ರಸ್ತೆಗಳ ಸ್ಥಿತಿ ಯಾವಾಗ ಬದಲಾಗುವುದೋ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಕಸಗುಡಿಸುವ ಪೌರಕಾರ್ವಿುಕರು ಧೂಳಿನಿಂದ ಮುಳಿಗೇಳುತ್ತಿದ್ದಾರೆ.

    ಕೆಸರು, ಧೂಳು ಲಕ್ಷ್ಮೇಶ್ವರ ಜನತೆಗೆ ಗೋಳು


    ವಾರ್ಡ್​ಗಳ ಸ್ಥಿತಿ:
    ಪಟ್ಟಣದ 23 ವಾರ್ಡ್​ಗಳಲ್ಲಿನ ರಸ್ತೆಗಳು ಹಾಳಾಗಿವೆ. ಜನರ ಪರದಾಟ, ಯಾತನೆ ತಪ್ಪದಾಗಿದೆ. ಹೊಸ ಬಡಾವಣೆಗಳಿಗೆ ಬೇಕಾಬಿಟ್ಟ ಪರವಾನಗಿ ನೀಡಿದ್ದರಿಂದ ಮೂಲ ಸೌಲಭ್ಯಗಳಿಲ್ಲದೆ ಹತ್ತಾರು ಬಡಾವಣೆಗಳ ಜನರು ಬವಣೆ ಅನುಭವಿಸುತ್ತಿದ್ದಾರೆ. ಮಳೆ ಬಂದರಂತೂ ವಿದ್ಯಾರ್ಥಿಗಳು, ವೃದ್ಧರು, ಬೆಳಗ್ಗೆ ಪೇಪರ್, ಹಾಲು ಹಾಕುವವರು ಎದ್ದೂ ಬಿದ್ದು ಸಾಗಬೇಕಿದೆ. ವಿನಾಯಕ ನಗರ, ಈಶ್ವರ ನಗರ, ಲಕ್ಷ್ಮೀನಗರ, ಸೋಮೇಶ್ವರ ನಗರ, ವೀರಗಂಗಾಧರ ನಗರ, ಉಪನಾಳ ನಗರ, ಇಂದಿರಾನಗರ, ಬಸವೇಶ್ವರ ನಗರ ನಿವಾಸಿಗರು ಅನೇಕ ವರ್ಷಗಳಿಂದ ಪುರಸಭೆಗೆ ಮನವಿ ನೀಡುತ್ತಾ ಬಂದರೂ ಅಭಿವೃದ್ಧಿ ಮರಿಚಿಕೆಯಾಗಿದೆ.


    ಬೇಕಿದೆ ವಿಶೇಷ ಅನುದಾನ:
    ಪಟ್ಟಣದಲ್ಲಿ ದಿನೆದಿನೇ ಹೊಸ ಬಡಾವಣೆಗಳು ತಲೆಎತ್ತುತ್ತಿವೆ. ಪುರಸಭೆಗೆ ಬರುವ ಅನುದಾನ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಪಟ್ಟಣದ ಅಭಿವೃದ್ಧಿಗಾಗಿ ಹೆಚ್ಚುವರಿ ಅನುದಾನಕ್ಕೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಬರುವ ಅನುದಾನ ಆಯಾ ವಾರ್ಡ್​ಗಳ ಅಭಿವೃದ್ಧಿಗೆ ಹಂಚಿಕೆಯಾಗಿ ದೊಡ್ಡಮಟ್ಟದ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗುತ್ತಿವೆ ಎನ್ನುತ್ತಾರೆ ಪುರಸಭೆ ಸದಸ್ಯರಾದ, ಮಹೇಶ ಹೊಗೆಸೊಪ್ಪಿನ, ಪ್ರವೀಣ ಬಾಳಿಕಾಯಿ ಮತ್ತಿತರರು.



    8.50 ಕೋಟಿ ರೂ. ವೆಚ್ಚದಲ್ಲಿ ನಗರೋತ್ಥಾನ ಯೋಜನೆಯ ಅನುದಾನಲ್ಲಿ 23 ವಾರ್ಡ್​ಗಳಲ್ಲಿನ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಪ್ರಾರಂಭಕ್ಕೆ ಕಾರ್ಯಾದೇಶ ನೀಡಲಾಗಿದೆ. ಕೆಲ ವಾರ್ಡ್​ಗಳಲ್ಲಿ ಈಗಾಗಲೇ ಕಾಮಗಾರಿ ಪ್ರಾರಂಭವಾಗಿವೆ. ಪುರಸಭೆಯ 1 ಕೋಟಿ ರೂ. ಮತ್ತು ರಾಜ್ಯ ಸರ್ಕಾರದ 1 ಕೋಟಿ ರೂ. ಅನುದಾನ ಬಳಸಿ ಮುಖ್ಯ ಬಜಾರ್ ರಸ್ತೆ ಅಭಿವೃದ್ಧಿ ಕಾರ್ಯ ಆರಂಭವಾಗಿದೆ. – ಶಂಕರ ಹುಲ್ಲಮ್ಮನವರ, ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts