More

    ಪೆಟ್ರೋಲ್ ಉತ್ಪಾದನೆ ಅತ್ಯಧಿಕ!

    ವೇಣುವಿನೋದ್ ಕೆ.ಎಸ್. ಮಂಗಳೂರು
    ಹಲವೆಡೆ ಪೆಟ್ರೋಲ್ ದರ 100 ರೂ. ದಾಟಿದರೂ ಪೆಟ್ರೋಲ್ ಖರೀದಿಸುವವರ ಸಂಖ್ಯೆ ಕಡಿಮೆಯಾಗಿಲ್ಲ.
    ರಾಜ್ಯದ ಏಕೈಕ ರಿಫೈನರಿಯಾಗಿರುವ ಮಂಗಳೂರು ರಿಫೈನರಿ ಆಂಡ್ ಪೆಟ್ರೋ ಕೆಮಿಕಲ್ಸ್ ಲಿ.(ಎಂಆರ್‌ಪಿಎಲ್)ನಲ್ಲಿ ಕಳೆದ ಮೂರು ವರ್ಷಗಳ ಜೂನ್ ತಿಂಗಳ ಮಾಹಿತಿಯನ್ನು ಹೋಲಿಸಿದಾಗ ಇದುವರೆಗೆ ಈ ವರ್ಷವೇ ಅತಿ ಹೆಚ್ಚು ಪೆಟ್ರೋಲ್ ಉತ್ಪಾದನೆ ಆಗಿದೆ!

    2019ರ ಜೂನ್ ತಿಂಗಳಲ್ಲಿ 61 ಸಾವಿರ ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. ಕಳೆದ ವರ್ಷ ಜೂನ್‌ನಲ್ಲಿ ಕೋವಿಡ್ ಮೊದಲ ಅಲೆಯ ಲಾಕ್‌ಡೌನ್ ಬಳಿಕದ ಸಂದರ್ಭ ಇದು 45 ಸಾವಿರ ಮೆಟ್ರಿಕ್ ಟನ್‌ಗೆ ಇಳಿಕೆಯಾಗಿತ್ತು. ಈ ವರ್ಷದ ಜೂನ್‌ನಲ್ಲಿ ಲಭ್ಯ ಮಾಹಿತಿ ಪ್ರಕಾರ ಪೆಟ್ರೋಲ್‌ಗೆ ಉತ್ತಮ ಬೇಡಿಕೆ ಬಂದಿದ್ದು, 64 ಸಾವಿರ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ಇಷ್ಟು ಪ್ರಮಾಣದ ಬೇಡಿಕೆಯನ್ನು ವಿವಿಧ ಪೆಟ್ರೋಲಿಯಂ ಮಾರಾಟ ಸಂಸ್ಥೆಗಳು ಇರಿಸಿವೆ.

    ಎಲ್ಲ ಕಡೆ ಸಾರ್ವಜನಿಕ ಸಾರಿಗೆ ಇಲ್ಲದ ಕಾರಣ ಜನರು ಹೆಚ್ಚಾಗಿ ಸ್ವಂತ ವಾಹನ ಬಳಸುತ್ತಿರುವುದು ಇದಕ್ಕೆ ಕಾರಣವಿರಬಹುದು. ಹಾಗಾಗಿಯೇ ಗಣನೀಯವಾಗಿ ಪೆಟ್ರೋಲ್‌ಗೆ ಬೇಡಿಕೆ ಇದೆ. ಲೀಟರ್‌ಗೆ 100 ರೂ. ದಾಟಿದರೂ ಬೇಡಿಕೆ ಇಳಿಕೆಯಾಗಿಲ್ಲ ಎನ್ನುತ್ತವೆ ಎಂಆರ್‌ಪಿಎಲ್ ಮೂಲಗಳು.

    ಹೊಡೆತ ನೀಡಿದ ಡೀಸೆಲ್: ಪೆಟ್ರೋಲ್‌ಗೆ ಬೇಡಿಕೆ ಹೆಚ್ಚುತ್ತಿದ್ದರೂ ಎಂಆರ್‌ಪಿಎಲ್‌ಗೆ ಹಿನ್ನಡೆಯಾಗಿರುವುದು ಡೀಸೆಲ್ ಮಾರಾಟ ಇಳಿಕೆಯಾದ್ದರಿಂದ. ಕೈಗಾರಿಕಾ ಉದ್ದೇಶ, ಸಾರ್ವಜನಿಕ ಸಾರಿಗೆ ಇತ್ಯಾದಿಗಳಿಗೆ ಡೀಸೆಲ್ ಹೆಚ್ಚು ಬಳಕೆಯಾಗುತ್ತದೆ. 2019ರ ಜೂನ್‌ನಲ್ಲಿ ಡೀಸೆಲ್ ಮಾರಾಟ 243 ಸಾವಿರ ಮೆಟ್ರಿಕ್ ಟನ್ ಇತ್ತು. ಕಳೆದ ಲಾಕ್‌ಡೌನ್ ವೇಳೆ ಜೂನ್‌ನಲ್ಲಿ 140 ಸಾವಿರ ಮೆಟ್ರಿಕ್ ಟನ್‌ಗೆ ಇಳಿಯಿತು. ಈ ಜೂನ್‌ನಲ್ಲೂ ಅಷ್ಟೇ ಇದೆ. ಅಂದರೆ ಡೀಸೆಲ್ ಬೇಡಿಕೆ ಇನ್ನೂ ಸುಧಾರಿಸಿಲ್ಲ ಎನ್ನುವುದು ಅಧಿಕಾರಿಗಳ ಚಿಂತೆಗೆ ಕಾರಣ. ಎಂಆರ್‌ಪಿಎಲ್‌ನ ಒಟ್ಟು ಉತ್ಪಾದನೆಯಲ್ಲಿ ಡೀಸೆಲ್ ಜಾಸ್ತಿ. ಹಾಗಿರುವಾಗ ಒಟ್ಟಾರೆ ಬೇಡಿಕೆ ಇಳಿಕೆಯಾಗಿದ್ದು, ಶೇ.40ರಷ್ಟು ಉತ್ಪಾದನೆ ಕಡಿಮೆಯಾಗಿದೆ. ಎಂಆರ್‌ಪಿಎಲ್‌ನಲ್ಲಿ ಪೆಟ್ರೋಲಿಯಂ ಉತ್ಪಾದನೆಗೆ ಮೂರು ಯುನಿಟ್‌ಗಳಿವೆ. ಸದ್ಯ ಎರಡರಲ್ಲಿ ಮಾತ್ರವೇ ಉತ್ಪಾದನೆ ನಡೆಯುತ್ತಿದೆ, ಬೇಡಿಕೆ ಕಡಿಮೆ ಎಂಬ ಕಾರಣಕ್ಕೆ ಒಂದು ಸಣ್ಣ ಯುನಿಟ್ ಸ್ಥಗಿತಗೊಳಿಸಲಾಗಿದೆ.

    ರಫ್ತಿಗೆ ಆದ್ಯತೆ ಇಲ್ಲ: ಎಂಆರ್‌ಪಿಎಲ್ ದೇಶೀಯ ಮಾರುಕಟ್ಟೆಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಕೆ ಮಾಡುವುದಕ್ಕೆ ಆದ್ಯತೆ ನೀಡುತ್ತದೆ. ಯಾಕೆಂದರೆ ಹೊರ ದೇಶಗಳಿಂದ ಕಚ್ಚಾತೈಲಕ್ಕೆ ಜಾಸ್ತಿ ಹಣ ನೀಡಿ ತಂದು ಸಂಸ್ಕರಿಸಿ ಮಾರಾಟ ಮಾಡುವಾಗ ವೆಚ್ಚ ಜಾಸ್ತಿಯಾಗುತ್ತದೆ. ಹಾಗಾಗಿ ಪೆಟ್ರೋಲಿಯಂ ರಫ್ತು ಮಾಡಿದರೆ ನಷ್ಟವೇ ಜಾಸ್ತಿ. ರಾಜ್ಯಕ್ಕೆ ಬೇಕಾದ ಶೇ.80ರಷ್ಟು ಪೆಟ್ರೋಲ್, ಡೀಸೆಲ್ ಅನ್ನು ಎಂಆರ್‌ಪಿಎಲ್ ಉತ್ಪಾದಿಸಿದರೆ, ಕಂಪನಿಗಳಾದ ಐಒಸಿ, ಎಚ್‌ಪಿಸಿಎಲ್ ವಿತರಣೆ ಮಾಡುತ್ತವೆ.

    ಪೆಟ್ರೋಲ್‌ಗೆ ಬೇಡಿಕೆ ನಿರೀಕ್ಷೆಗಿಂತಲೂ ಹೆಚ್ಚೇ ಇದೆ. ಕೋವಿಡ್ ಪೂರ್ವ ವರ್ಷಕ್ಕಿಂತ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಡೀಸೆಲ್ ಬೇಡಿಕೆ ಚೇತರಿಕೆಗೆ ಇನ್ನಷ್ಟು ಸಮಯ ಬೇಕಾಗಬಹುದು.
    ರುಡೋಲ್ಫ್ ನರೋನ್ಹ ಮಹಾಪ್ರಬಂಧಕರು, ಕಾರ್ಪೊರೆಟ್ ಕಮ್ಯುನಿಕೇಶನ್ಸ್, ಎಂಆರ್‌ಪಿಎಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts