More

    ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಮೋದಿ ಕೈ ಬಲಪಡಿಸಿ

    ಕುಷ್ಟಗಿ: ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸಲು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

    ಪಟ್ಟಣದ ಬುತ್ತಿಬಸವೇಶ್ವರ ದೇವಸ್ಥಾನ ಸಭಾಭವನದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಬೂತ್ ವಿಜಯ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
    ಕಾಂಗ್ರೆಸ್ ಆಡಳಿತಾವಧಿಯಲ್ಲಿ ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲಿನಲ್ಲಿ ಕೊಂಡೊಯ್ಯಲು ಸಾಧ್ಯವಾಗಲಿಲ್ಲ ಎಂಬ ಕೊರಗು ದೇಶದ ಜನತೆಯನ್ನು ಕಾಡುತ್ತಿತ್ತು. ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಭಾರತ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ದೇಶದ ಜನರ ಆಶೀರ್ವಾದಕ್ಕೆ ಚ್ಯುತಿ ಬಾರದಂತೆ ನೋಡಿಕೊಂಡ ಏಕೈಕ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದಾರೆ. ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಬಿಜೆಪಿ ಅಭ್ಯರ್ಥಿಗಳಿಗೆ ಜನ ಆಶೀರ್ವದಿಸಬೇಕಿದೆ ಎಂದರು.

    ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಈ ಬಾರಿಯ ಲೋಕಸಭೆ ಚುನಾವಣೆ ವಿರೋಧ ಪಕ್ಷದವರ ಹುಚ್ಚು ಬಿಡಸಲಿದೆ. ಬಿಜೆಪಿ ಅಭ್ಯರ್ಥಿಗಳು ನರೇಂದ್ರ ಮೋದಿಯವರನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ, ವಿರೋಧ ಪಕ್ಷದ ಅಭ್ಯರ್ಥಿಗಳು ಯಾರನ್ನು ಪ್ರತಿನಿಧಿಸುತ್ತಿದ್ದಾರೆ ಎಂಬುದು ಅಭ್ಯರ್ಥಿಗಳಿಗೇ ಗೊತ್ತಿಲ್ಲ. ಚಹಾ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಗಿದ್ದಾರೆ. ರಾಹುಲ್ ಗಾಂಧಿ ಚಹಾ ಮಾರುವ ಕುಟುಂಬದಲ್ಲಿ ಜನಿಸಿದ್ದರೆ ಆ ವ್ಯಕ್ತಿ ಚಹಾ ಮಾರಲೂ ಸಹ ಯೋಗ್ಯನಾಗುತ್ತಿರಲಿಲ್ಲ ಎಂದು ಲೇವಡಿ ಮಾಡಿದರು. ಜಾತಿ ಗೊಂದಲಕ್ಕೀಡಾಗದೆ ಅಭಿಮಾನಕ್ಕೆ ಮತಗಳನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ವಿರುದ್ಧ ಹಾಲುಮತ ಸಮುದಾಯಕ್ಕೆ ಸಲಹೆ ನೀಡಿದರು.

    ಮಾಜಿ ಸಚಿವ ನಾಗಪ್ಪ ಸಾಲೋಣಿ ಮಾತನಾಡಿ, ಬಿಜೆಪಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದೆ. ಆದರೆ, ತಳಮಟ್ಟದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ಸಮನ್ವಯತೆ ಸಾಧಿಸುವ ಅಗತ್ಯವಿದೆ ಎಂದರು. ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ದೇಶದಲ್ಲಿ ಶಾಂತಿ ನೆಲೆಸಲು ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸಬೇಕಿದೆ ಎಂದರು.

    ಕನಕಗಿರಿಯ ಮಾಜಿ ಶಾಸಕ ಬಸವರಾಜ ದಢೇಸುಗೂರು ಮಾತನಾಡಿ, ಪ್ರಧಾನಿ ಮೋದಿಯವರ ಹೆಸರು ಹೇಳುವವರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪ್ರಕರಣ ದಾಖಲಿಸುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

    ಮಾಜಿ ಸಚಿವ ಹಾಲಪ್ಪ ಆಚಾರ, ಶಾಸಕ ದೊಡ್ಡನಗೌಡ ಪಾಟೀಲ್, ಜೆಡಿಎಸ್ ಮುಖಂಡ ಸಿ.ವಿ.ಚಂದ್ರಶೇಖರ ಇತರರು ಮಾತನಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್, ತಾಲೂಕು ಅಧ್ಯಕ್ಷ ಮಹಾಂತೇಶ ಬದಾಮಿ, ಮಾಜಿ ಶಾಸಕ ಕೆ.ಶರಣಪ್ಪ, ವಿಪ ಸದಸ್ಯೆ ಹೇಮಲತಾ ನಾಯಕ್, ಪ್ರಮುಖರಾದ ಕೆ.ಕರಿಯಪ್ಪ ಸಿಂಧನೂರು, ಸಿ.ಎಚ್.ಪಾಟೀಲ್, ದೇವೇಂದ್ರಪ್ಪ ಬಳೂಟಗಿ, ಚಂದ್ರಶೇಖರ ಹಲಗಿ, ಪ್ರಭಾಕರ ಚಿಣಿ ಇತರರು ಇದ್ದರು.

    ಈ ಬಾರಿ ನಡೆಯುತ್ತಿರುವ ಚುನಾವಣೆ ದೇಶದ ಪ್ರಧಾನಿಯ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯಾಗಿದೆ. ವಿಶ್ವದ ಅನೇಕ ರಾಷ್ಟ್ರಗಳ ಸಮಸ್ಯೆಗಳಿಗೆ ಭಾರತದಿಂದ ಪರಿಹಾರ ಎಂಬ ವಾತಾವರಣ ಸೃಷ್ಟಿಯಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ.
    ಕೆ.ಬಸವರಾಜ, ಬಿಜೆಪಿ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts