More

    ತಾಯಿ, ಭೂಮಿಯ ಋಣ ತೀರಿಸಲು ಸಾಧ್ಯವಿಲ್ಲ

    ಶಿಕಾರಿಪುರ: ಆತ್ಮಶುದ್ಧಿ ಆಗಬೇಕಾದರೆ ನಮ್ಮ ಮನಸು, ನಡೆ, ನುಡಿಗಳು ಶುದ್ಧವಾಗಿರಬೇಕು. ನಮ್ಮ ಬದುಕು ನಿಷ್ಕಲ್ಮಷವಾದ ನೀರಿನಂತಿರಬೇಕು. ನಾವು ಸಾಧನೆ ಮಾಡುವ ಪರಿಸರ ಸಹ ಪರಿಶುದ್ಧವಾಗಿರಬೇಕು ಎಂದು ಕಾಳೇನಹಳ್ಳಿ ಶಿವಯೋಗಾಶ್ರಮದ ಡಾ. ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

    ಕಾಳೇನಹಳ್ಳಿ ಶಿವಯೋಗಾಶ್ರಮದಲ್ಲಿ ನಿರ್ಮಾಣ ಮಾಡುತ್ತಿರುವ ಯೋಗ, ಧ್ಯಾನ ಮತ್ತು ಆಧ್ಯಾತ್ಮ ಮಂದಿರಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು, ಭೂಮಿ ತಾಯಿ ನಮಗೆ ಅನ್ನ, ಇರಲು ಜಾಗ, ಬದುಕು, ಬೆಳಕು ಕೊಟ್ಟಿದ್ದಾಳೆ. ಅವಳ ಋಣದಲ್ಲಿ ನಾವು ಇದ್ದೇವೆ. ಎಷ್ಟು ಜನ್ಮವೆತ್ತಿದರೂ ತಾಯಿಯ ಋಣ, ಭೂಮಿಯ ಋಣ ತೀರಿಸಲು ಸಾಧ್ಯವೇ ಇಲ್ಲ. ನಮ್ಮ ಜನನದಿಂದ ಮರಣದವರೆಗೆ ಅವಳೆದೆಯ ಮೇಲೆಯೇ ನಮ್ಮ ಜೀವನ. ಮರಣವಾದಾಗಲೂ ಮತ್ತೆ ಅವಳ ಒಡಲಿಗೆ ಸೇರುತ್ತೇವೆ ಎಂದರು.
    ನಮ್ಮ ಹಿರಿಯರು ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂದಿರುವುದು. ತಾಯಿ ಮತ್ತು ತಾಯಿ ನಾಡು ಸ್ವರ್ಗಕ್ಕಿಂತಲೂ ಮಿಗಿಲು. ಹಾಗಾಗಿ ಪೂಜೆಯ ನಂತರವೇ ಭೂ ತಾಯಿಯ ಮೇಲೆ ನಾವು ನಿರ್ಮಾಣ ಕಾರ್ಯ ಕೈಗೊಳ್ಳಬೇಕು. ನಾವು ಪ್ರಕೃತಿ ಆರಾಧಕರು. ಗಿಡ, ಮರ, ಬಳ್ಳಿ, ಪರ್ವತ, ನದಿ, ಸಾಗರ, ಗಿರಿ, ಆಗಸದಲ್ಲಿ ನಾವು ಭಗವಂತನನ್ನು ಕಾಣುತ್ತೇವೆ, ಆರಾಧಿಸುತ್ತೇವೆ. ಇದು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಶ್ರೀಮಂತಿಕೆಯ ಸಾಕ್ಷಿರೂಪ ಎಂದು ಹೇಳಿದರು.
    ಯೋಗ ಮತ್ತು ಧ್ಯಾನಗಳು ನಮ್ಮ ಅನಗತ್ಯ ಬಯಕೆಗಳನ್ನು ನಾಶ ಮಾಡಿ ಮನಸ್ಸನ್ನು ಶುದ್ಧೀಕರಿಸುವ ಜತೆಗೆ ದೇಹದ ಆರೋಗ್ಯವನ್ನು ಕಾಪಾಡುತ್ತವೆ. ಯೋಗದ ತವರು ಭಾರತ. ಇಂದು ಇಡೀ ವಿಶ್ವವೇ ಭಾರತದ ಯೋಗ ಚಿಕಿತ್ಸೆಗೆ ಮಾರುಹೋಗಿದೆ. ಆದರೆ ನಮ್ಮ ಋಷಿಮುನಿಗಳ ಕೊಡುಗೆಯಾದ ಯೋಗ ಮತ್ತು ಧ್ಯಾನವನ್ನು ನಾವೇ ಉಪೇಕ್ಷೆ ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
    ಪ್ರಮುಖರಾದ ರುದ್ರಪ್ಪಯ್ಯ, ಶಿವಪ್ಪಯ್ಯ, ಕೆ.ಪಿ.ರುದ್ರಪ್ಪ, ಮುರುಗೇಶಣ್ಣ, ಕೆರಿಯಪ್ಪ, ಸದಾಶಿವ ಶಾಸ್ತ್ರಿ, ಮಹೇಶ ಶಾಸ್ತ್ರಿ, ಪ್ರಭು ಶಾಸ್ತ್ರಿ, ಶ್ರೀಮಠದ ಭಕ್ತರು, ಕಾಳೇನಹಳ್ಳಿ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts