More

    ತಾಯಿಯ ಮಡಿಲು ಸೇರಿದ ಐಶ್ವರ್ಯಾ

    ಬೆಳಗಾವಿ: ಕರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ನರ್ಸ್ ಸುಗಂಧಾ ಕೊರೆಪ್ಪಗೋಳ, ಕೊನೆಗೂ 21 ದಿನದ ಬಳಿಕ ತನ್ನ ಮೂರು ವರ್ಷದ ಮಗಳು ಐಶ್ವರ್ಯಾಳನ್ನು ಅಪ್ಪಿಕೊಂಡು ಮುದ್ದಾಡಿದ ಪ್ರೀತಿಯ ಕ್ಷಣಗಳು ನೋಡುಗರಲ್ಲೂ ಕಣ್ಣೀರು ತರಿಸಿತು.

    ಬೆಳಗಾವಿ ನಗರದ ಜಿಲ್ಲಾಸ್ಪತ್ರೆಯ ತುರ್ತು ಘಟಕದಲ್ಲಿ ಕರೊನಾ ವೈರಸ್ ಸೋಂಕಿತರಿಗೆ ಒಂದು ವಾರಗಳ ಕಾಲ ಚಿಕಿತ್ಸೆ ನೀಡಿದ್ದ ನರ್ಸ್ ಸುಗಂಧಾ, ಖಾಸಗಿ ಹೊಟೇಲ್‌ನಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಟ್ಟಿದ್ದರು. ಹಾಗಾಗಿ ಅವರು ಯಾರನ್ನೂ ಸಮೀಪದಲ್ಲಿ ನಿಂತು ಮಾತನಾಡಿಸುವಂತಿರಲಿಲ್ಲ. ಅಲ್ಲದೆ, ಮನೆಗೂ ಹೋಗುವಂತಿರಲಿಲ್ಲ.

    ಈ ನಡುವೆ ತನ್ನನ್ನು ನೋಡಲು ಬಂದಿದ್ದ ಮಗಳು ಐಶ್ವರ್ಯಾಳನ್ನು ಮುಟ್ಟಿ ಪ್ರೀತಿಸಲಾಗದೆ ದೂರದಿಂದಲೇ ನೋಡಿ ಸಮಾಧಾನ ಪಟ್ಟಿದ್ದರು. ಆದರೆ, ಮಗಳು ಐಶ್ವರ್ಯಾ ತಾಯಿಯನ್ನು ನೋಡಿದ ತಕ್ಷಣವೇ ಕೈ ಚಾಚಿ, ‘ಅಮ್ಮಾ ಬಾ..’ ಎಂದು ಕರೆಯುತ್ತ ರಸ್ತೆ ಮೇಲೆಯೇ ನಿಂತು ಕಣ್ಣೀರು ಹಾಕಿದ್ದಳು. ತಾಯಿ-ಮಗಳ ಅನ್ಯೋನ್ಯ ಸಂಬಂಧಗಳ ಕುರಿತು ಹಾಗೂ ಸ್ಟಾಪ್ ನರ್ಸ್ ಸುಗಂಧಾ ಅವರ ಸೇವೆ ವಿಚಾರವಾಗಿ ದಿಗ್ವಿಜಯ ನ್ಯೂಸ್‌ನಲ್ಲಿ ಏ. 7ರಂದು ‘ಅಮ್ಮಾ ಬಾ ಅಮ್ಮಾ’ ಎಂಬ ವಿಶೇಷ ವರದಿ ಪ್ರಸಾರ ಮಾಡಿತ್ತು. ಅಲ್ಲದೆ, ಮಾ. 8ರಂದು ‘ವಿಜಯವಾಣಿ’ಯಲ್ಲೂ ‘ಸಂಬಂಧವನ್ನೂ ಕಸಿದ ಕರೊನಾ!’ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಗೊಂಡಿತ್ತು.

    ಸಿಎಂ ಕರೆ: ದಿಗ್ವಿಜಯ ನ್ಯೂಸ್‌ನಲ್ಲಿ ವರದಿ ವೀಕ್ಷಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಏ. 8ರಂದು ಬೆಳಗ್ಗೆ 11ಗಂಟೆಗೆ ನರ್ಸ್ ಸುಗಂಧಾ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ, ‘ಕರೊನಾ ವೈರಸ್‌ನಿಂದ ಜನರನ್ನು ರಕ್ಷಿಸಲು ನಿಮ್ಮ ಮಕ್ಕಳನ್ನೂ ಲೆಕ್ಕಿಸದೆ ಹಗಲಿರುಳು ಶ್ರಮಿಸುತ್ತಿದ್ದೀರಿ. ನಿಮ್ಮ ಸಹಕಾರ ನಮಗೆ ಇರಲಿ.

    ಮುಂದಿನ ದಿನಗಳಲ್ಲಿ ನಿಮೆಗಲ್ಲ ಒಳ್ಳೆಯದಾಗಲಿದೆ. ವೈದ್ಯರ, ನರ್ಸ್ ಕುಟುಂಬದ ರಕ್ಷಣೆ ಜವಾಬ್ದಾರಿ ಸರ್ಕಾರದ ಮೇಲಿದ್ದು, ನೀವೆಲ್ಲರೂ ಯಾವುದೇ ಚಿಂತೆ ಮಾಡದೆ ಸೇವೆ ಮುಂದುವರಿಸಿ. ಸಂಕಷ್ಟ ಸಂದರ್ಭದಲ್ಲಿ ಶ್ರಮಿಸುತ್ತಿರುವ ನಿಮ್ಮ ಸೇವೆಯನ್ನು ಸರ್ಕಾರ ಯಾವತ್ತೂ ಮರೆಯುವುದಿಲ್ಲ’ ಎಂದು ಧೈರ್ಯ ತುಂಬಿದ್ದರು.

    ಉಕ್ಕಿ ಹರಿದ ತಾಯಿ-ಮಗಳ ಆನಂದಭಾಷ್ಪ: 21 ದಿನದ ಬಳಿಕ ನರ್ಸ್ ಸುಗಂಧಾ ಅವರು ಮನೆಗೆ ವಾಪಸ್ ತೆರಳಿದರು. ಶನಿವಾರದಂದು ತಾಯಿ ಬರುತ್ತಿದ್ದಾಳೆ ಎಂಬ ವಿಚಾರ ತಿಳಿದಿದ್ದ ಮಗಳು ಐಶ್ವರ್ಯಾ ಬೆಳಗ್ಗೆಯಿಂದ ಉಪಾಹಾರ ಸೇವಿಸದೆ ಮನೆಯ ಮುಂಭಾಗದಲ್ಲಿ ತಾಯಿ ಬರುವುದನ್ನೇ ಕಾಯುತ್ತಿದ್ದಳು. ತಾಯಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವುದನ್ನು ಕಂಡ ಐಶ್ವರ್ಯಾ, ಅಮ್ಮಾ ಎನ್ನುತ್ತಾ ಓಡಿ ಹೋಗಿ ಅಪ್ಪಿಕೊಂಡು ಕಣ್ಣೀರು ಹಾಕುತ್ತ ಬರಮಾಡಿಕೊಂಡಳು. ಮಗಳ ಮುಖ ಕಂಡ ನರ್ಸ್ ಸುಗಂಧಾ ಅವರಿಗೂ ಸಂತೋಷ ತಡೆಯಲಾಗದೆ ಕಣ್ಣೀರು ಹಾಕಿದರು. ತಾಯಿ-ಮಗಳು ಇಬ್ಬರೂ ಮುದ್ದಾಡುತ್ತ ಆನಂದಭಾಷ್ಪ ಸುರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts