More

    ವರದಕ್ಷಿಣೆ ಕಿರುಕುಳ ನೀಡಿ ಸೊಸೆಯ ಸಾವಿಗೆ ಕಾರಣರಾದ ಅತ್ತೆಗೆ 7ವರ್ಷ ಜೈಲು ಶಿಕ್ಷೆ

    ಮೈಸೂರು: ವರದಕ್ಷಿಣೆ ಕಿರುಕುಳ ನೀಡಿ ಸೊಸೆಯ ಸಾವಿಗೆ ಕಾರಣರಾದ ಅತ್ತೆಗೆ ನಗರದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 7 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


    ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ಸೌಮ್ಯಾ ಅವರ ಸಾವಿಗೆ ಕಾರಣರಾದ ಅತ್ತೆ ಸರೋಜಮ್ಮ(63) ಶಿಕ್ಷೆಗೆ ಗುರಿಯಾದವರು.


    ಹಂಪಾಪುರದ ನಂಜಪ್ಪ ಪುತ್ರಿ ಸೌಮ್ಯಾ ಅವರನ್ನು ಪ್ರಸನ್ನ ಕುಮಾರ್ ಅವರೊಂದಿಗೆ 2015ರ ಮೇ 8ರಂದು ವಿವಾಹ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ ವರದಕ್ಷಿಣೆ ರೂಪದಲ್ಲಿ 50ಗ್ರಾಂ ಚಿನ್ನ, 1 ಬೈಕ್ ನೀಡಬೇಕಿತ್ತು. ಆರ್ಥಿಕ ನಷ್ಟದಿಂದ ಸೌಮ್ಯಾ ತಂದೆ ನೀಡಲು ಆಗಿರಲಿಲ್ಲ. ಈ ವಿಚಾರವಾಗಿ ಸೌಮ್ಯಾ ಅವರ ಪತಿ ಮತ್ತು ಅತ್ತೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು.

    ಇದರಿಂದ ಬೇಸತ್ತ ಸೌಮ್ಯಾ 2016ರ ಜನವರಿ 18ರಂದು ಮೈಮೇಲೆ ಸೀಮೆಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಸುಟ್ಟ ಗಾಯವಾಗಿದ್ದ ಸೌಮ್ಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಸೌಮ್ಯಾ ಮರಣಪೂರ್ವ ಹೇಳಿಕೆ ನೀಡಿದ್ದರು. ಸಾವಿಗೆ ಪ್ರಸನ್ನ ಕುಮಾರ್ ಮತ್ತು ಅತ್ತೆ ಸರೋಜಮ್ಮ ಕಾರಣ ಎಂದು ಹೇಳಿಕೆ ನೀಡಿದ್ದರು. ಜತೆಗೆ ಮೃತಳ ತಂದೆ ನೀಡಿದ ದೂರಿನ ಮೇರೆಗೆ ಜಯಪುರ ಠಾಣೆ ಪೊಲೀಸರು, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.


    ವಿಚಾರಣೆ ವೇಳೆ ಜಾಮೀನೊನಿನ ಮೇಲೆ ಬಿಡುಗಡೆಯಾಗಿದ್ದ ಪ್ರಸನ್ನ ಕುಮಾರ್, ಮಾನಸಿಕ ಖಿನ್ನತೆಗೊಳಗಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಪ್ರಸನ್ನ ಕುಮಾರ್ ಹೆಸರನ್ನು ಕೈ ಬಿಟ್ಟ ಪೊಲೀಸರು, ಸರೋಜಮ್ಮ ಅವರ ಮೇಲಿನ ಪ್ರಕರಣವನ್ನು ಮುಂದುವರಿಸಿದ್ದರು.


    ಸರೋಜಮ್ಮ ಅವರ ಮೇಲಿನ ಆರೋಪ ಸಾಬೀತಾದ ಹಿನ್ನಲೆಯಲ್ಲಿ ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್ ಆರೋಪಿಗೆ 7 ವರ್ಷ ಕಾರಾಗೃಹ ಶಿಕ್ಷೆಯೊಂದಿಗೆ 14 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಬಿ.ಈ. ಯೋಗೇಶ್ವರ ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts