More

    ಜಿಲ್ಲೆ- ಹೊರಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ದನ ಕಳವು: ಇಬ್ಬರ ಸೆರೆ

    ವಿಜಯವಾಣಿ ಸುದ್ದಿಜಾಲ ಗುರುಪುರ

    ಬಡಗ ಎಡಪದವು ಗ್ರಾಮದ ತಿಪ್ಲೆಬೆಟ್ಟು ಸಹಿತ ಜಿಲ್ಲೆ ಹಾಗೂ ಹೊರಜಿಲ್ಲೆಯ ಹಲವೆಡೆ 100ಕ್ಕೂ ಹೆಚ್ಚು ದನ ಕಳವು ಮಾಡಿರುವ ಜಾಲದ ಆರೋಪಿಗಳಿಬ್ಬರು ಬಜ್ಪೆ ಮತ್ತು ಮೂಡುಬಿದಿರೆ ಠಾಣಾ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಗುರುವಾರ ಸೆರೆ ಸಿಕ್ಕಿದ್ದಾರೆ.

    ಬಂಧಿತ ಆರೋಪಿ ಮೊಹಮ್ಮದ್ ಶರೀಫ್(23) ಮೂಡುಬಿದಿರೆ ತಾಲೂಕಿನ ಪ್ರಾಂತ್ಯ ಗ್ರಾಮದ ಪೇಪರ್ ಮಿಲ್ ಬಳಿಯ ನಿವಾಸಿ. ಹಸೈನಾರ್ ಎಂಬಾತ ಮೂಡುಬಿದಿರೆ ತಾಲೂಕಿನ ಮಿಜಾರು ತೋಡಾರ್ ಗ್ರಾಮದ ನಿವಾಸಿ. ಇವರ ಜತೆಗಾರ ಹಂಜ ಪರಾರಿಯಾಗಿದ್ದಾನೆ.

    ಕೆಲವು ದಿನಗಳ ಹಿಂದೆ ತಿಪ್ಲೆಬೆಟ್ಟುವಿನ ಸುಜಾತಾ ಎಂಬುವರ ಮನೆಯಲ್ಲಿದ್ದ ದನಗಳ ಪೈಕಿ ಎರಡು ಹಸು ಮತ್ತು ಒಂದು ಕರು ಕಳವು ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಮನೆಯವರು ಬಜ್ಪೆ ಠಾಣೆಯಲ್ಲಿ ದೂರು ನೀಡಿದ್ದರು. ಗುರುವಾರ ಬೆಳಗ್ಗೆ ಸುಮಾರು 7.15ರ ಹೊತ್ತಿಗೆ ಮುಚ್ಚೂರು ಕ್ರಾಸ್‌ನ ಬಳಿ ಬಿಳಿ ಬಣ್ಣದ ಕಾರು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಸ್ಥಳೀಯರು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಠಾಣಾಧಿಕಾರಿ ಸಂದೀಪ್ ಆದೇಶದಂತೆ ಕಾರ್ಯಪ್ರವೃತ್ತರಾದ ಪಿಎಸ್‌ಐ ರೇವಣ ಸಿದ್ದಪ್ಪ ನೇತೃತ್ವದ ತಂಡ ಮುಚ್ಚೂರು ಕ್ರಾಸ್ ಹತ್ತಿರದ ಮೈದಾನ ಬಳಿಯ ರಸ್ತೆಯಲ್ಲಿ ತಿರುಗಾಡುತ್ತಿದ್ದ ಕಾರು ನಿಲ್ಲಿಸಲು ಪ್ರಯತ್ನಿಸಿದಾಗ ಚಾಲಕ ವೇಗವಾಗಿ ಕಾರು ಓಡಿಸತೊಡಗಿದಾಗ ಪೊಲೀಸರು ಅಡ್ಡಗಟ್ಟಿದರು. ಆ ವೇಳೆ ಚಾಲಕ ತಪ್ಪಿಸಿ ಓಡಿ ಹೋಗಿದ್ದಾನೆ. ಕಾರಿನೊಳಗೆ ಇದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ದನ ಕಳವಿನ ಮಾಹಿತಿ ಲಭಿಸಿದೆ.

    ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಮಾರ್ಗದರ್ಶನದಂತೆ, ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನದಂತೆ ಜಂಟಿ ಕಾರ್ಯಾಚರಣೆ ನಡೆಸಿದ ಬಜ್ಪೆ ಠಾಣಾಧಿಕಾರಿ ಸಂದೀಪ್ ಹಾಗೂ ಮೂಡುಬಿದಿರೆ ಠಾಣಾಧಿಕಾರಿ ಸಂದೇಶ್ ಅವರ ತಂಡದಲ್ಲಿ ಪಿಎಸ್‌ಐ ಗುರಪ್ಪ ಕಾಂತಿ, ಕುಮಾರೇಶನ್, ಎಎಸ್‌ಐ ರಾಮ ಪೂಜಾರಿ, ಸುಜನ, ರಶೀದ್ ಶೇಖ್, ದೇವಪ್ಪ ಹೊಸಮನಿ, ಮಂಜುನಾಥ, ಬಸವರಾಜ ಪಾಟೀಲ್, ಕೆಂಚನಗೌಡ, ಗುರುಪ್ರಸಾದ್, ಆನಂದ, ಮಧು ವೈ, ಪ್ರಕಾಶ್ ಗೌಡ, ಈರಣ್ಣ, ಪ್ರೇಮ್ ಕುಮಾರ್ ಮತ್ತು ಇತರ ಸಿಬ್ಬಂದಿ ಸೇರಿದ್ದರು.

    ಕಾರಿಗೆ ನಕಲಿ ನಂಬರ್ ಪ್ಲೇಟ್

    ಈ ಆರೋಪಿಗಳು ತಂಡದ ಇತರ ಸದಸ್ಯರೊಂದಿಗೆ ಸೇರಿ ತಿಪ್ಲೆಬೆಟ್ಟುವಿನಲ್ಲಿ ಜಾನುವಾರು ಕಳವು ಮಾಡಿ, ತೋಡಾರಿನ ಅನ್ಸಾರ್ ಎಂಬಾತನಿಗೆ ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಹಸೈನಾರ್ ವಿರುದ್ಧ ಬಜ್ಪೆ ಠಾಣೆಯಲ್ಲಿ ದನ ಕಳವು ಹಾಗೂ ಮೂಡುಬಿದಿರೆ ಠಾಣೆಯಲ್ಲಿ ಸೀಟ್ ಕಳುವು ಮಾಡಿರುವ ಪ್ರಕರಣ ದಾಖಲಾಗಿದೆ. ಆರೋಪಿಗಳು ದನ ಕಳುವಿಗೆ ಬಳಸುತ್ತಿದ್ದ ಕಾರು ಪೊಲೀಸ್ ವಶವಾಗಿದೆ. ಇವರು ಕಾರ್ಕಳ, ಅಜೆಕಾರು, ಬಜಗೋಳಿ, ಕೆರ್ವಾಶೆ, ತೀರ್ಥಹಳ್ಳಿ ಮತ್ತಿತರ ಕಡೆ ದನಕಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ವಾಹನಗಳಿಗೆ ನಕಲಿ ನಂಬರ್ ಪ್ಲೇಟ್ ಬಳಸಿರುವ ಮಾಹಿತಿಯೂ ಲಭ್ಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts