More

    ಮೋದಿ ಟ್ರಂಪ್​ ರೋಡ್​ ಶೋಗೆ ಭಾರೀ ಸಿದ್ಧತೆ: 22 ಕಿ.ಮೀ. ಹಾದಿಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರಿಂದ ಟ್ರಂಪ್​ಗೆ ಸ್ವಾಗತ

    ಅಹಮದಾಬಾದ್​: ಇದೇ ತಿಂಗಳ 24 ಮತ್ತು 25ನೇ ತಾರೀಖಿನಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಆತನ ಪತ್ನಿ ಮೆಲಾನಿಯ ಟ್ರಂಪ್​ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು ಅದಕ್ಕೆಂದು ಭಾರತ ಭಾರೀ ಸಿದ್ಧತೆಯನ್ನು ಮಾಡಿಕೊಳ್ಳಲಾರಂಭಿಸಿದೆ. ಅಹಮದಾಬಾದ್​ನಲ್ಲಿ ಟ್ರಂಪ್​ ಮತ್ತು ಮೋದಿ 22.ಕಿ.ಮೀ ರೋಡ್​ ಶೋನಲ್ಲಿ ಭಾಗವಹಿಸಲಿದ್ದು ದಾರಿಯುದ್ದಕ್ಕೂ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಈ ಇಬ್ಬರು ನಾಯಕರಿಗೆ ಸ್ವಾಗತ ಕೋರಲಿದ್ದಾರೆ ಎನ್ನಲಾಗಿದೆ.

    ಅಹಮದಾಬಾದ್​ನ ಮೊಟೆರಾದಲ್ಲಿ ನಿರ್ಮಿಸಲಾಗಿರುವ ಸರ್ದಾರ್​ ವಲ್ಲಭಾಯಿ ಪಟೇಲ್​ ಕ್ರೀಡಾಂಗಣವನ್ನು ಟ್ರಂಪ್​ ಫೆ.24ರಂದು ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೂ ಮೊದಲು ಸಬರಮತಿ ಆಶ್ರಮದಿಂದ ಕ್ರೀಡಾಂಗಣದವರೆಗೂ ಒಟ್ಟು 22ಕಿ.ಮೀ. ಅಂತರದಲ್ಲಿ ಉಭಯ ದೇಶದ ನಾಯಕರುಗಳು ರೋಡ್​ ಶೋ ನಡೆಸಲಿದ್ದಾರೆ. ದೇಶದ ಎಲ್ಲ ರಾಜ್ಯಗಳಿಂದ ಈ ರೋಡ್​ ಶೋ ನೋಡಲು ಜನ ಆಗಮಿಸಲಿದ್ದಾರೆ. ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಈ ರೋಡ್​ ಶೋನಲ್ಲಿ ನಾಯಕರುಗಳಿಗೆ ಸ್ವಾಗತ ಕೋರಲಿದ್ದಾರೆ ಎಂದು ಅಹಮದಾಬಾದ್​ನ ಮೇಯರ್​ ಬಿಜಾಲ್​ ಪಟೇಲ್​ ತಿಳಿಸಿದ್ದಾರೆ. ಈ ರೋಡ್​ ಶೋ ನಗರದಲ್ಲಿ ನಡೆಯುತ್ತಿರುವ ಅತೀ ದೊಡ್ಡ ರೋಡ್​ ಶೋ ಆಗಿರಲಿದೆ ಎಂದು ಆಕೆ ತಿಳಿಸಿದ್ದಾರೆ.

    ರೋಡ್​ ಶೋನಲ್ಲಿ ಭಾಗವಹಿಸುವ ಬೇರೆ ರಾಜ್ಯದ ಜನರಿಗೆ ಅವರವರ ರಾಜ್ಯದ ಸಾಂಸ್ಕೃತಿಕ ಉಡುಗೆಯಲ್ಲಿ ಬರುವಂತೆ ತಿಳಿಸಲಾಗಿದೆ ಎಂದು ಬಿಜೆಪಿಯ ನಾಯಕರೊಬ್ಬರು ತಿಳಿಸಿದ್ದಾರೆ. ಒಟ್ಟಾರೆಯಾಗಿ 300ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಸದಸ್ಯರು ಈ ರೋಡ್​ ಶೋನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

    ಡೊನಾಲ್ಡ್​ ಟ್ರಂಪ್​ ಮತ್ತು ಮೆಲಾನಿಯಾ ಟ್ರಂಪ್​ ಅಹಮದಾಬಾದ್​ಗೆ ಬರುತ್ತಿದ್ದು, ಅವರು ರೋಡ್​ ಶೋಗೆ ತೆರಳುವ ದಾರಿಯಲ್ಲಿ ಏಳು ಅಡಿಯ ಗೋಡೆಯನ್ನು ಕಟ್ಟಲಾಗುತ್ತಿದೆ. ಟ್ರಂಪ್​ ಕಣ್ಣಿಗೆ ನಗರದಲ್ಲಿರುವ ಕೊಳೆಗೇರಿ ಕಾಣದಿರುವಂತೆ ಮಾಡಲೆಂದು ಈ ಗೋಡೆಯನ್ನು ಕಟ್ಟಲಾಗುತ್ತಿದೆ ಎನ್ನುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ ಬಿಜೆಪಿ ನಾಯಕರುಗಳು ಈ ಆರೋಪವನ್ನು ತಳ್ಳಿ ಹಾಕಿದ್ದು ಸುರಕ್ಷತೆಯ ದೃಷ್ಟಿಯಿಂದ ಗೋಡೆ ನಿರ್ಮಿಸುತ್ತಿರುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts