More

    ದ.ಕ.ದಲ್ಲಿ 50ಕ್ಕೂ ಅಧಿಕ ಬಸ್ ಸಂಚಾರ, ಖಾಸಗಿ ಸೇವೆ ಮುಂದುವರಿಕೆ

    ಮಂಗಳೂರು: ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಷ್ಕರ ಎರಡನೇ ದಿನವಾದ ಗುರುವಾರ ದ.ಕ ಜಿಲ್ಲೆಯ ಮಂಗಳೂರು ಮತ್ತು ಪುತ್ತೂರು ವಿಭಾಗದಲ್ಲಿ ಕೆಲವು ಸಿಬ್ಬಂದಿ ಹಾಜರಾಗುವುದರೊಂದಿಗೆ 50ಕ್ಕೂ ಅಧಿಕ ಬಸ್ ಸ್ಥಳೀಯ ಹಾಗೂ ರಾಜ್ಯದ ವಿವಿಧೆಡೆ ಸಂಚರಿಸಿವೆ.

    ಮುಷ್ಕರದ ಮಾಹಿತಿ ತಿಳಿದಿರುವುದರಿಂದ ಕೆಎಸ್ಸಾರ್ಟಿಸಿ ಬಸ್ ತಂಗುದಾಣಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ತುರ್ತು ಅವಶ್ಯಕತೆ ಹೊರತುಪಡಿಸಿ ಬಹುತೇಕರು ದೂರ ಪ್ರಯಾಣ ರದ್ದುಗೊಳಿಸಿದ್ದಾರೆ. ಇದರಿಂದಾಗಿ ಮೈಸೂರು, ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ದೂರದ ಊರುಗಳಿಗೆ ತೆರಳಲು ಹೆಚ್ಚಿನ ಪ್ರಯಾಣಿಕರು ಇರಲಿಲ್ಲ. ಬೆರಳೆಣಿಕೆ ಮಂದಿ ಮಾತ್ರ ಆಗಮಿಸಿ ಬಸ್‌ಗೆ ಕಾಯುತ್ತಿದ್ದ ದೃಶ್ಯ ಕಂಡು ಬಂದಿದೆ. ಇನ್ನೊಂದೆಡೆ ಖಾಸಗಿ ಬಸ್‌ಗಳ ಸಂಚಾರವಿರುವುದರಿಂದ ಲ್ಲೆಯಲ್ಲಿ ದೊಡ್ಡ ಮಟ್ಟಿನ ಸಮಸ್ಯೆಯಾಗಿಲ್ಲ.

    ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಹೆಲ್ಪ್ ಡೆಸ್ಕ್ ತೆರೆಯಲಾಗಿದ್ದು, ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಬೆಳಗ್ಗೆ ಟೆಂಪೋ ಟ್ರಾವೆಲರ್, ಖಾಸಗಿ ಬಸ್‌ಗಳ ಮೂಲಕ ಪ್ರಯಾಣಿಕರು ಹಾಸನ ಸಕಲೇಶಪುರ ಭಾಗಗಳಿಗೆ ಪ್ರಯಾಣಿಸಿದರು. ಹೊತ್ತೇರುತ್ತಿದ್ದಂತೆ ಕೆಎಸ್ಸಾರ್ಟಿಸಿ ಸಿಬ್ಬಂದಿ ಆಗಮಿಸಿದ್ದು, ಬಸ್‌ಗಳನ್ನು ತಂದು ಟ್ರಿಪ್ ಮಾಡಿದ್ದಾರೆ. ನಗರದಲ್ಲಿ ಸರ್ಕಾರಿ ಬಸ್ ಇಲ್ಲದಿದ್ದರೂ ಸಮಸ್ಯೆಯಿಲ್ಲ, ಆದರೆ ಗ್ರಾಮಾಂತರ ಭಾಗಕ್ಕೆ ಸಂಚರಿಸದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಇತರ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು. ಕೇರಳ ಕೆಎಸ್ಸಾರ್ಟಿಸಿ ಬಸ್‌ಗಳು ಎಂದಿನಂತೆ ಸಂಚರಿಸಿವೆ.

    ಮಂಗಳೂರಿನಿಂದ ಕರ್ನಾಟಕ ಸಾರಿಗೆಯ 27 ಬಸ್‌ಗಳನ್ನು ಬೆಂಗಳೂರು, ಧರ್ಮಸ್ಥಳ, ಕಾಸರಗೋಡು ಮೊದಲಾದೆಡೆಗೆ ಓಡಿಸಲಾಗಿದೆ. ಎರಡು ರಾಜಹಂಸ ಹಾಗೂ ವೋಲ್ವೊ ಬಸ್‌ಗಳು ಸಂಚಾರ ನಡೆಸಿವೆ. ಪುತ್ತೂರು ವಿಭಾಗದಲ್ಲಿ ಧರ್ಮಸ್ಥಳ, ಬಿ.ಸಿ.ರೋಡ್ ಹಾಗೂ ಸ್ಟೇಟ್‌ಬ್ಯಾಂಕ್ ನಡುವೆ ಒಟ್ಟು ಏಳು ಬಸ್‌ಗಳು ಸಂಚರಿಸಿವೆ. ಖಾಸಗಿ ಬಸ್‌ಗಳು ಜಿಲ್ಲೆಯ ಎಲ್ಲೆಡೆ ಸಂಚರಿಸಿವೆ. ಶುಕ್ರವಾರ ಬಸ್‌ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

    ಬುಧವಾರ ಉಡುಪಿ ಡಿಪೋದಿಂದ ಯಾವುದೇ ಕೆಎಸ್‌ಆರ್‌ಟಿಸಿ ಬಸ್ಸು ರಸ್ತೆಗೆ ಇಳಿದಿರಲಿಲ್ಲ. ಗುರುವಾರ ಬೆಳಗ್ಗೆ 9 ಗಂಟೆಗೆ ಮಣಿಪಾಲದಿಂದ ಹೊರಟ ಐರಾವತ ಬಸ್ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತಲುಪಿದ್ದು, ನಿಲ್ದಾಣದಲ್ಲಿ ಕಾಯುತ್ತಿದ್ದ ಎಂಟು ಮಂದಿಯನ್ನು ಹತ್ತಿಸಿಕೊಂಡು ಮಂಗಳೂರು ಮೂಲಕ ಬೆಂಗಳೂರಿಗೆ ಸಂಚರಿಸಿದೆ.

    ನೋಟಿಸ್‌ಗೆ ಹೆದರಿದರೇ?: ಮಂಗಳೂರು ವಿಭಾಗದಿಂದ ಬುಧವಾರವೇ ಎಲ್ಲ ಸಿಬ್ಬಂದಿಗೂ ನೋಟಿಸ್ ಜಾರಿಮಾಡಲಾಗಿತ್ತು. ಅದರಂತೆ ಕೆಲ ಸಿಬ್ಬಂದಿ ಆಗಮಿಸಿದ್ದಾರೆ. ಮುಖ್ಯವಾಗಿ ನಿವೃತ್ತಿಗೆ ಹತ್ತಿರವಾಗಿರುವ ಹಿರಿಯ ಸಿಬ್ಬಂದಿ ಮತ್ತು ತರಬೇತಿ ಹಂತದ ಸಿಬ್ಬಂದಿ. ಈ ನಡುವೆ ಕರ್ತವ್ಯಕ್ಕೆ ಹಾಜರಾದ ನೌಕರರೊಬ್ಬರು, ತಮ್ಮನ್ನು ಬಲವಂತವಾಗಿ ಕರೆಸಿಕೊಳ್ಳಲಾಗಿದೆ ಎಂದು ಮಾಧ್ಯಮದವರ ಮುಂದೆ ಆರೋಪಿಸಿದರು.

    ನಿವೃತ್ತರಿಗೆ ಆಹ್ವಾನ: ಇತ್ತೀಚಿನ ಎರಡು ವರ್ಷಗಳಲ್ಲಿ ನಿವೃತ್ತರಾದ 62 ವರ್ಷ ಮೀರದ ನಿವೃತ್ತ ನೌಕರರನ್ನು ಒಪ್ಪಂದದ ಆಧಾರದಲ್ಲಿ ಕರ್ತವ್ಯಕ್ಕೆ ತೆಗೆದುಕೊಳ್ಳಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ. ಚಾಲಕರಿಗೆ ದಿನಕ್ಕೆ 800 ರೂ. ಮತ್ತು ನಿರ್ವಾಹಕರಿಗೆ 700 ರೂ. ಗೌರವಧನ ನಿಗದಿಪಡಿಸಲಾಗಿದೆ.

    ಉಡುಪಿಯಲ್ಲಿ ಗಂಟೆಗೊಂದು ಖಾಸಗಿ ಬಸ್: ಉಡುಪಿ: ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸರ್ಕಾರಿ ಬಸ್ ಸಂಚರಿಸುವ ಮಾರ್ಗಗಳಲ್ಲಿ ಪ್ರತಿ ಗಂಟೆಗೊಂದು ಖಾಸಗಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಉಡುಪಿ- ಮಂಗಳೂರು ಮಧ್ಯೆ ಖಾಸಗಿ ಬಸ್‌ಗಳೇ ಇರುವುದರಿಂದ ಸಮಸ್ಯೆಯಾಗಿಲ್ಲ ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ ಜಿ. ಪಿ. ತಿಳಿಸಿದರು.

    ಗುರುವಾರ ನಗರದ ಸರ್ವಿಸ್ ಮತ್ತು ಸರ್ಕಾರಿ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ, ಜನರ ಅಹವಾಲು ಸ್ವೀಕರಿಸಿ ಮಾತನಾಡಿದರು.
    ಬಸ್ ದರ ಹೆಚ್ಚು ವಸೂಲಿ ಅಥವಾ ಬಸ್ ಸೌಲಭ್ಯದಿಂದ ವಂಚಿತರಾದ ಬಗ್ಗೆ ತಮಗೆ ಯಾವುದೇ ದೂರು ಬಂದಿಲ್ಲ. ಬೆರಳೆಣಿಕೆಯ ಪ್ರಯಾಣಿಕರಿದ್ದರೂ ಬಸ್ ಓಡಿಸಬೇಕು. ಘಾಟಿ ಪ್ರದೇಶ ಹಾಗೂ ಬಸ್ ಸಂಚಾರ ವಿರಳವಾಗಿರುವ ಕಡೆಗಳಲ್ಲಿ ಪರವಾನಗಿ ರಹಿತವಾಗಿ ಹಾಗೂ ಸರೆಂಡರ್ ಮಾಡಿದ ಬಸ್‌ಗಳನ್ನೂ ‘ವಿಶೇಷ ಸಂದರ್ಭ’ ಎಂದು ಪರಿಗಣಿಸಿ ಬಸ್ ಓಡಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ ಎಂದು ತಿಳಿಸಿದರು. ಇಲಾಖೆ ಪರಿವೀಕ್ಷಕ ಮಾರುತಿ ನಾಯಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts