More

    ವಿಧಾನಸೌಧದ 250ಕ್ಕೂ ಅಧಿಕ ನಕಲಿ ಪಾಸ್​​ಗಳು ಪತ್ತೆ!

    ಬೆಂಗಳೂರು: ಇತ್ತೀಚೆಗೆ ವಿಧಾನಸೌಧಕ್ಕೆ ಶಾಸಕರ ಸೋಗಿನಲ್ಲಿ ವ್ಯಕ್ತಿಯೊಬ್ಬರು ಆಗಮಿಸಿ ಸದನ ಪ್ರವೇಶಿಸಿ ಕುಳಿತಿದ್ದ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ತಪಾಸಣೆ ಕಾರ್ಯ ಚುರುಕುಗೊಳಿಸಿದ್ದು, ಕಳೆದ ನಾಲ್ಕು ದಿನದಲ್ಲಿ 250ಕ್ಕೂ ಹೆಚ್ಚು ನಕಲಿ ಪಾಸ್‌ಗಳನ್ನು ಪತ್ತೆ ಹಚ್ಚಿದ್ದಾರೆ.

    ಸಚಿವರ ಹಾಗೂ ಶಾಸಕರ ಪಾಸ್‌ಗಳನ್ನು ಕಲರ್ ಜೆರಾಕ್ಸ್ ಮಾಡಿ ಭದ್ರತಾ ಸಿಬ್ಬಂದಿ ಹಾಗೂ ಮಾರ್ಷಲ್​ಗಳನ್ನು ಯಾಮಾರಿಸುತ್ತಿದ್ದದ್ದು ಬಹಿರಂಗಗೊಂಡಿದೆ. ಜನಪ್ರತಿನಿಧಿಗಳಿಗೆ ವಿಧಾನಸೌಧ ಪ್ರವೇಶಕ್ಕೆ ಗುರುತಿನ ಚೀಟಿ ನೀಡಲಾಗುತ್ತದೆ. ಅದೇ ರೀತಿ ಸಚಿವರ-ಶಾಸಕರ ಸಿಬ್ಬಂದಿಗೂ ಅಧಿಕೃತವಾಗಿ ಪಾಸ್ ನೀಡಲಾಗುತ್ತದೆ. ಅಲ್ಲದೆ, ಕಾರುಗಳಿಗೆ ಪ್ರತ್ಯೇಕವಾಗಿ ಪಾಸ್ ನೀಡಲಾಗುತ್ತದೆ. ಇದನ್ನೇ ದುರ್ಬಳಕೆ ಮಾಡಿಕೊಂಡಿರುವ ಕೆಲವರು ಕಾರುಗಳಿಗೆ ನೀಡಲಾಗುವ ಪಾಸ್‌ಗಳನ್ನು ಕಲರ್ ಜೆರಾಕ್ಸ್ ಮಾಡಿ ಒಳ ಪ್ರವೇಶಿಸಿರುವುದು ಕಂಡುಬಂದಿದೆ.

    ಅಧಿಕೃತವಲ್ಲದ ಹಾಗೂ ನವೀಕರಣಗೊಳ್ಳದ ಪಾಸ್‌ಗಳನ್ನು ತೋರಿಸಿ ವಿಧಾನಸೌಧ ಹಾಗೂ ವಿಕಾಸಸೌಧ ಪ್ರವೇಶಕ್ಕೆ ಬಳಸಿದ್ದ ಸುಮಾರು 250ಕ್ಕೂ ಹೆಚ್ಚು ನಕಲಿ ಪಾಸ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಪೈಕಿ ಅವಧಿ ಮುಗಿದಿರುವ, ಜೆರಾಕ್ಸ್ ಮಾಡಿಸಿಕೊಂಡಿರುವ ಪಾಸ್‌ಗಳೇ ಅಧಿಕ ಇವೆ. ರಾಜಕಾರಣಿಗಳ ಬೆಂಬಲಿಗರು ಸಹ ಪಾಸ್‌ಗಳ ದುರ್ಬಳಕೆ ಮಾಡಿಕೊಂಡಿರುವುದು ಕಂಡುಬಂದಿದೆ.

    ತಪಾಸಣೆ ಬಿಗಿಗೊಳಿಸಿದ ಪೊಲೀಸರು: ಸದನಕ್ಕೆ ಶಾಸಕರ ಸೋಗಿನಲ್ಲಿ ವ್ಯಕ್ತಿಯೊಬ್ಬ ಪ್ರವೇಶಿಸಿದ ಹಿನ್ನೆಲೆಯಲ್ಲಿ ಭದ್ರತಾ ತಪಾಸಣೆ ಕಾರ್ಯ ಚುರುಕುಗೊಳಿಸಲಾಗಿದೆ. ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಪ್ರವೇಶಿಸುವ ಪ್ರತಿ ವ್ಯಕ್ತಿ ಹಾಗೂ ವಾಹನಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಒಳ ಬಿಡಲಾಗುತ್ತಿದೆ. ವಿಧಾನಸೌಧ ಪ್ರವೇಶಿಸುವ ಎಲ್ಲಾ ಗೇಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ತಪಾಸಣೆ ಬಿಗಿಗೊಳಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಬ್ಯಾಗ್ ಸೇರಿ ಇನ್ನಿತರ ವಸ್ತುಗಳನ್ನು ಇಟ್ಟುಕೊಂಡು ಅನುಮಾನಾಸ್ಪವಾಗಿ ಬರುವ ಎಲ್ಲರನ್ನು ಲೋಹಪರಿಶೋಧಕ ಯಂತ್ರಗಳ ಪರೀಕ್ಷೆಗೆ ಒಳಪಡಿಸಬೇಕು. ಅಲ್ಲದೆ, ಬ್ಯಾಗ್‌ಗಳನ್ನು ಕಡ್ಡಾಯವಾಗಿ ಸ್ಕ್ಯಾನಿಂಗ್‌ಗೆ ಒಳಪಡಿಸಬೇಕು. ಅಧಿಕೃತ ಗುರುತಿನ ಚೀಟಿ ಅಥವಾ ಪಾಸ್‌ ಇದ್ದರೆ ಮಾತ್ರ ಒಳಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.

    ಪಾಸ್ ಅವಧಿ ಮುಗಿದಿದ್ದರೂ ಕೆಲವರು ಜೆರಾಕ್ಸ್ ಮಾಡಿಸಿಕೊಂಡು ವಿಧಾನಸೌಧ ಪ್ರವೇಶಿಸುವುದು ಕಂಡು ಬಂದಿದೆ. ಈ ರೀತಿ ಪ್ರವೇಶಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು.
    | ಡಾ.ಎಸ್.ಡಿ.ಶರಣಪ್ಪ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ

    ನಕಲಿ ಪಾಸ್ ಬಳಸಿದರೆ ಕಠಿಣ ಕ್ರಮ: ನಕಲಿ ಪಾಸ್ ಬಳಸಿ ವಿಧಾನಸೌಧ ಹಾಗೂ ವಿಕಾಸಸೌಧ ಪ್ರವೇಶಿಸಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಎಚ್ಚರಿಕೆ ನೀಡಿದ್ದಾರೆ. ಅಧಿಕೃತವಲ್ಲದ ಹಾಗೂ ನವೀಕರಣಗೊಳ್ಳದ ಪಾಸ್‌ಗಳನ್ನು ತೋರಿಸಿ ವಿಧಾನಸೌಧ ಪ್ರವೇಶಿಸಬಾರದು. ಕಳೆದ ನಾಲ್ಕು ದಿನಗಳಿಂದ ಭದ್ರತೆಯನ್ನು ಬಿಗಿಗೊಳಿಸಿ ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆ. ಇದುವರೆಗೂ 250ಕ್ಕೂ ಹೆಚ್ಚು ನಕಲಿ ಪಾಸ್‌ಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

    ಯಂಗ್​ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?

    ಈತ ಗಂಡಸಿಯ ಸಾಹಸಿ: ಚಿರತೆಯನ್ನು ಹಿಡಿದು ಬೈಕ್​ಗೆ ಕಟ್ಟಿಕೊಂಡು ಹೋಗಿ ಅರಣ್ಯ ಇಲಾಖೆಗೆ ಒಪ್ಪಿಸಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts