More

    ಚಿಕ್ಕಾಂಶಿ ಹೊಸೂರಲ್ಲಿ 140ಕ್ಕೂ ಹೆಚ್ಚು ಅಡಕೆ ಗಿಡಗಳಿಗೆ ವಿಷ ಪ್ರಾಶನ; ದುಷ್ಕೃತ್ಯಕ್ಕೆ ಬೆಚ್ಚಿದ ರೈತ ಕುಟುಂಬ

    ಹಾನಗಲ್ಲ: ತಾಲೂಕಿನ ಚಿಕ್ಕಾಂಶಿ ಹೊಸೂರ ಗ್ರಾಮದ ರೈತನ ಅಡಕೆ ತೋಟದಲ್ಲಿ ರಾತ್ರೋ ರಾತ್ರಿ ದುಷ್ಕರ್ವಿುಗಳು ಗಿಡಗಳ ಬುಡದಲ್ಲಿ ರಂಧ್ರ ಕೊರೆದು ವಿಷ ದ್ರಾವಣ ತುಂಬಿ 140ಕ್ಕೂ ಅಡಕೆ ಗಿಡಗಳನ್ನು ನಾಶಪಡಿಸಿದ ಘಟನೆ ನಡೆದಿದೆ.

    15 ವರ್ಷಗಳವರೆಗೆ ಶ್ರಮವಹಿಸಿ ಬೆಳೆಸಿದ್ದ ಅಡಕೆ ಗಿಡಗಳು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಆದಾಯ ತಂದು ಕೊಡುತ್ತಿದ್ದವು. ಪ್ರಸಕ್ತ ವರ್ಷದ ಫಸಲಿಗಾಗಿ ಅಡಕೆ ಗಿಡಗಳು ಒಡಲಿನಲ್ಲಿ ತುಂಬಿಕೊಂಡಿರುವ ಸಿಂಗಾರ ಇನ್ನೇನು ಬಿಚ್ಚಿಕೊಳ್ಳುವಂತಿದ್ದವು. ಆದರೆ, ದುಷ್ಕರ್ವಿುಗಳ ಕೃತ್ಯದಿಂದಾಗಿ ಸುಮಾರು 140ಕ್ಕೂ ಅಧಿಕ ಅಡಕೆ ಗಿಡಗಳ ಗರಿಗಳು ಕೆಂಪಾಗಿ ತಲೆ ಚೆಲ್ಲುತ್ತಿವೆ. ತೋಟದ ಮಾಲೀಕ ಕಣ್ಣೀರು ಹೊರಹಾಕುತ್ತಿದ್ದಾರೆ.

    ತಾಲೂಕಿನ ಚಿಕ್ಕಾಂಶಿ ಹೊಸೂರು ಗ್ರಾಮದ ಇಂದ್ರಮ್ಮ ಪಾಟೀಲ ಹಾಗೂ ರಾಜೇಶ ಪಾಟೀಲ ಎಂಬುವವರಿಗೆ ಸೇರಿದ ಅಡಕೆ ತೋಟದಲ್ಲಿ ಈ ಘಟನೆ ನಡೆದಿದ್ದು, ಬುಧವಾರ ದೂರು ದಾಖಲಾಗಿದೆ. 130ಕ್ಕೂ ಹೆಚ್ಚು ಫಸಲು ಬಿಡುವ, 12 ವರ್ಷದ ಅಡಕೆ, ಹತ್ತಾರು ಹಣ್ಣಿನ ಗಿಡಗಳ ಬುಡಕ್ಕೆ ಎರಡು ಭಾಗದಲ್ಲಿ 4 ಇಂಚಿಗೂ ಹೆಚ್ಚು ರಂಧ್ರ ಕೊರೆದು, ಅಪಾಯಕಾರಿ ವಿಷ ದ್ರಾವಣ ತುಂಬಿದ್ದಾರೆ. ಪರಿಣಾಮವಾಗಿ ಅಡಕೆ ಗಿಡಗಳು ಕೇವಲ ಎರಡೇ ದಿನದಲ್ಲಿ ಪೂರ್ಣ ಮುದುಡಿ, ಎಲೆಗಳು ಕೆಂಪಾಗಿ ಸುಟ್ಟಂತಾಗಿವೆ.

    ರಾಜೇಶ ಪಾಟೀಲ ಅವರು ಸ್ನೇಹಿತರೊಂದಿಗೆ ಮೂರು ದಿನ ತಿರುಪತಿ ದೇವರ ದರ್ಶನ ಪಡೆಯಲು ತೆರಳಿರುವುದನ್ನು ತಿಳಿದ ಪಾಪಿಗಳು ಶುಕ್ರವಾರ ಮತ್ತು ಶನಿವಾರ ರಾತ್ರಿ ಈ ದುಷ್ಕೃತ್ಯ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

    ರಾಜೇಶ್ ತಿರುಪತಿಯಿಂದ ಮರಳಿದ ನಂತರ ಕೃತ್ಯ ಬೆಳಕಿಗೆ ಬಂದಿದೆ. ಅಡಕೆ ಗಿಡಗಳಿಗೆ ರಂಧ್ರ ಕೊರೆಯಲು ಎಲೆಕ್ಟ್ರಾನಿಕ್ ಯಂತ್ರ ಬಳಸಿ ನಂತರ ವಿಷಕಾರಿ ದ್ರಾವಣ ತುಂಬಿರುವುದು ಕಂಡುಬಂದಿದೆ. ಇದರಿಂದ ಅಡಕೆ ಗಿಡಗಳು ಸಂಪೂರ್ಷ ನಾಶವಾಗಿವೆ. ಕೆಲವು ದಿನಗಳ ಹಿಂದಷ್ಟೇ ಸರ್ವೆ ವಿಚಾರವಾಗಿ ತನ್ನೊಂದಿಗೆ ಪಕ್ಕದ ಜಮೀನಿನ ವ್ಯಕ್ತಿ ಜಗಳವಾಡಿದ್ದ. ಆತನಿಂದಲೇ ಈ ಕೃತ್ಯ ನಡೆದಿರುವ ಅನುಮಾನವಿದೆ ಎಂದು ಹಾನಗಲ್ಲ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ರಾಜೇಶ ಪಾಟೀಲ ಆರೋಪಿಸಿದ್ದಾರೆ.

    ಘಟನೆಯ ಹಿನ್ನೆಲೆಯಲ್ಲಿ ಅಡಕೆ ತೋಟಕ್ಕೆ ತೋಟಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾನಗಲ್ಲ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆದಿದೆ.

    ಫಸಲು ಬಿಡುವು ಅಡಕೆ ಗಿಡಗಳನ್ನು ನಾಶ ಮಾಡಿರುವುದರಿಂದ ಆತಂಕಿತಳಾಗಿದ್ದೇನೆ. ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು. ರೈತ ವಲಯದಲ್ಲಿ ಈ ಘಟನೆ ಆತಂಕ ಮೂಡಿಸಿದೆ. ನನ್ನ ಕುಟುಂಬ ನಿರ್ವಹಣೆಗೆ ಆಧಾರವಾಗಿದ್ದ ತೋಟ ನಾಶವಾಗಿರುವುದರಿಂದ ಮುಂದೇನು ಮಾಡಬೇಕೆಂದು ತೋರುತ್ತಿಲ್ಲ.

    | ಇಂದ್ರಮ್ಮ ಪಾಟೀಲ, ಅಡಕೆ ತೋಟದ ಮಾಲೀಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts