More

    ಮುಂದೈತೆ ಸಿನಿಹಬ್ಬ: ಚಂದನವನದಲ್ಲಿ ಹಳೇ ಕಲರವ..

    ಬೆಂಗಳೂರು: ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ತಮಿಳು ಚಿತ್ರ ‘ಮಾಸ್ಟರ್’ ಚಿತ್ರ ಹೌಸ್​ಫುಲ್ ಆಗುತ್ತಿದ್ದಂತೆಯೇ, ಕೇವಲ ಐದು ದಿನಗಳಲ್ಲಿ ಜಗತ್ತಿನಾದ್ಯಂತ ಚಿತ್ರ 150 ಕೋಟಿ ರೂ ಸಂಪಾದಿಸಿದೆ ಎಂಬ ಸುದ್ದಿ ಬರುತ್ತಿದ್ದಂತೆಯೇ, ಕನ್ನಡ ಚಿತ್ರರಂಗದಲ್ಲೂ ಆಶಾಭಾವನೆ ಮೂಡಿದೆ. ಇದುವರೆಗೂ ಚಿತ್ರಗಳನ್ನು ಮುಂದೂಡುತ್ತಿದ್ದ ನಿರ್ವಪಕರೆಲ್ಲ ಇದೀಗ ಆದಷ್ಟು ಬೇಗ ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತಿದ್ದು, ಮತ್ತೊಮ್ಮೆ ಪೈಪೋಟಿ ಶುರುವಾಗಿದೆ.

    ಕೇಂದ್ರ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಮಾತ್ರ ಹಾಜರಾತಿ ಘೋಷಿಸಿರುವುದರಿಂದ, ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಹಲವು ನಿರ್ವಪಕರು ಸುಮ್ಮನಿದ್ದರು. ಶೇ. 100ರಷ್ಟು ಹಾಜರಾತಿಗೆ ಅನುಮತಿ ಕೊಟ್ಟ ನಂತರ ಚಿತ್ರ ಬಿಡುಗಡೆ ಮಾಡುವ ಬಗ್ಗೆ ಚಿಂತಿಸಿದ್ದರು. ಇದೀಗ ಫೆಬ್ರವರಿಯಲ್ಲಿ ಪರಿಸ್ಥಿತಿ ಸರಿ ಹೋಗಬಹುದು ಮತ್ತು ಶೇ 100ರಷ್ಟು ಹಾಜರಾತಿಗೆ ಸರ್ಕಾರ ಅನುಮತಿ ನೀಡಬಹುದು ಎಂಬ ನಿರೀಕ್ಷೆ ಇದ್ದು, ಅದಕ್ಕೆ ಸರಿಯಾಗಿ ಫೆಬ್ರವರಿಯಿಂದ ದೊಡ್ಡ ಬಜೆಟ್ ಚಿತ್ರಗಳ ಬಿಡುಗಡೆಯನ್ನು ಪ್ಲಾನ್ ಮಾಡಲಾಗಿದೆ. ಬುಧವಾರ ಮತ್ತೊಮ್ಮೆ ದೊಡ್ಡ ಬಜೆಟ್ ನಿರ್ವಪಕರೆಲ್ಲ ಸಭೆ ಸೇರಿ, ಚಿತ್ರಗಳ ಬಿಡುಗಡೆಯನ್ನು ಫಿಕ್ಸ್ ಮಾಡಿದ್ದಾರೆ.

    ಈಗಾಗಲೇ, ‘ಪೊಗರು’, ‘ರಾಬರ್ಟ್’ ಮತ್ತು ‘ಯುವರತ್ನ’ ಚಿತ್ರಗಳ ಬಿಡುಗಡೆ ದಿನಾಂಕ ಫಿಕ್ಸ್ ಆಗಿವೆ. ಈಗ ‘ಸಲಗ’, ‘ಕೋಟಿಗೊಬ್ಬ 3’ ಮತ್ತು ‘ಭಜರಂಗಿ 2’ ಚಿತ್ರಗಳ ಬಿಡುಗಡೆ ಸಹ ಫಿಕ್ಸ್ ಆಗಿದ್ದು, ಈ ಚಿತ್ರಗಳನ್ನು ಕ್ರಮವಾಗಿ ಏಪ್ರಿಲ್ 15, 29 ಮತ್ತು ಮೇ 14ರಂದು ಬಿಡುಗಡೆ ಮಾಡುವುದಕ್ಕೆ ಸಭೆಯಲ್ಲಿ ತೀರ್ವನಿಸಲಾಗಿದೆ.

    ನಾವೂ ಬರಲು ರೆಡಿ…:
    ಸ್ಟಾರ್ ನಟರ ಚಿತ್ರಗಳ ಬಿಡುಗಡೆ ದಿನಾಂಕ ಪಕ್ಕಾ ಆಗುತ್ತಿದ್ದಂತೆಯೇ, ಚಿತ್ರರಂಗದಲ್ಲಿ ಹೊಸ ಸಂಚಲನ ಶುರುವಾಗಿದೆ. ಒಂದು ಕಡೆ ಇದು ಖುಷಿಯ ವಿಚಾರವಾದರೂ, ಇನ್ನೊಂದು ಕಡೆ ಹಲವರಲ್ಲಿ ಭಯ ಆವರಿಸಿದೆ. ಏಕೆಂದರೆ, ದೊಡ್ಡ ಮತ್ತು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾದರೆ, ಚಿತ್ರಮಂದಿರಗಳು ಸಿಗುವುದು ಕಷ್ಟವಾಗುತ್ತದೆ. ಹಾಗಾಗಿ ಆ ಚಿತ್ರಗಳು ಬರುವುದಕ್ಕೆ ಮುಂಚೆಯೇ, ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಹಲವು ನಿರ್ವಪಕರು ಪ್ರಯತ್ನಿಸುತ್ತಿದ್ದು, ಕೆಲವರು ಈಗಾಗಲೇ ತಮ್ಮ ಚಿತ್ರಗಳ ಬಿಡುಗಡೆಯನ್ನು ಘೋಷಿಸಿದ್ದಾರೆ. ಅದರಂತೆ ಮುಂದಿನ ವಾರ (ಜ.29) ಅನೀಶ್ ಅಭಿನಯದ ‘ರಾಮಾರ್ಜುನ’ ಬಿಡುಗಡೆಯಾಗಲಿದೆ. ಫೆಬ್ರವರಿ 5ಕ್ಕೆ ಪ್ರಜ್ವಲ್ ಅಭಿನಯದ ‘ಇನ್​ಸ್ಪೆಕ್ಟರ್ ವಿಕ್ರಂ’ ಮತ್ತು ವಿನೋದ್ ಪ್ರಭಾಕರ್ ಅಭಿನಯದ ‘ಶ್ಯಾಡೋ’ ಚಿತ್ರಗಳು ಬಂದರೆ, ಫೆಬ್ರವರಿ 11ಕ್ಕೆ ರಿಷಬ್ ಶೆಟ್ಟಿ ಅಭಿನಯದ ‘ಹೀರೋ’ ಬರುವ ನಿರೀಕ್ಷೆ ಇದೆ. ಇನ್ನು ಫೆಬ್ರವರಿ ಕೊನೆಗೆ ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

    ಹೊಸಬರ ಎದೆಯಲ್ಲಿ ಢವಢವ…:
    ಇದು ಸದ್ಯಕ್ಕೆ ಲೆಕ್ಕ ಸಿಕ್ಕಿರುವ ಒಂದಿಷ್ಟು ಚಿತ್ರಗಳ ಪಟ್ಟಿ. ಇನ್ನು, ದೊಡ್ಡ ಮತ್ತು ಮೀಡಿಯಂ ಚಿತ್ರಗಳ ಮಧ್ಯೆ ಅದೆಷ್ಟು ಹೊಸಬರ ಚಿತ್ರಗಳು ಬಿಡುಗಡೆಯಾಗುತ್ತವೋ ಹೇಳುವುದು ಕಷ್ಟ. ಈಗಾಗಲೇ ಕಳೆದೆರೆಡು ವಾರಗಳಲ್ಲಿ ‘ಮಹಿಷಾಸುರ’, ‘ವಿಕ್ಕಿ’, ‘ಸಾವು ಇನ್ ಲವ್’ ಎಂಬ ಹೊಸಬರ ಚಿತ್ರಗಳು ಬಿಡುಗಡೆಯಾಗಿವೆ. ಇನ್ನು ಇದೊಂದೇ ವಾರ ‘ಪಂಟ್ರು’, ‘ಕತ್ಲೆ ಕಾಡು’, ‘ಲಡ್ಡು’ ಮತ್ತು ‘ತಲಾಖ್ ತಲಾಖ್ ತಲಾಖ್’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೊಸಬರ ಮತ್ತು ಕಡಿಮೆ ಬಜೆಟ್​ನ ಹಲವು ಚಿತ್ರಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ.

    ಬಿಗ್ ಸಿನಿಮಾಗಳ ಪಟ್ಟಿ

    • ಫೆ 19 – ಪೊಗರು
    • ಮಾ 11 – ರಾಬರ್ಟ್
    • ಏ 1 – ಯುವರತ್ನ
    • ಏ 15 – ಸಲಗ
    • ಏ 29 – ಕೋಟಿಗೊಬ್ಬ 3
    • ಮೇ 14 – ಭಜರಂಗಿ 2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts