More

    ಮೂಲರಪಟ್ಣಕ್ಕೆ ಹೊಸ ಸೇತುವೆ

    ಧನಂಜಯ ಗುರುಪುರ
    ಮಂಗಳೂರು ಮತ್ತು ಬಂಟ್ವಾಳ ತಾಲೂಕಿಗೆ ಕೊಂಡಿಯಾಗಿದ್ದ ಸುಮಾರು 50 ವರ್ಷ ಹಳೆಯ ಮೂಲರಪಟ್ಣ ಸೇತುವೆ 2018ರ ಜೂನ್ 25ರಂದು ಕುಸಿದು ಬಿದ್ದ ಬಳಿಕ ಇಲ್ಲಿನ ಸಂಪರ್ಕ ಕೊಂಡಿ ಕಡಿದು ಹೋಗಿತ್ತು. ಬಳಿಕ ಕಿಲೋ ಮೀಟರ್‌ಗಟ್ಟಲೆ ಕಾಲ್ನಡಿಗೆಯಲ್ಲೇ ಸಾಗಬೇಕಿದ್ದ ಈ ಭಾಗದ ಪ್ರಯಾಣಿಕರ ಸಂಕಷ್ಟಕ್ಕೆ ಇದೀಗ ಮುಕ್ತಿ ಸನ್ನಿಹಿತವಾಗಿದೆ. ಅದೇ ಸ್ಥಳದಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು ಜುಲೈ ಅಂತ್ಯಕ್ಕೆ ಲೋಕಾರ್ಪಣೆಯಾಗುವ ನಿರೀಕ್ಷೆಯಿದೆ.

    ಮಂಗಳೂರಿನಿಂದ ಗಂಜಿಮಠ, ಕುಪ್ಪೆಪದವು ಮೂಲಕ ಬಂಟ್ವಾಳಕ್ಕೆ ಮುಖ್ಯ ಸಂಪರ್ಕ ಸೇತುವಾಗಿದ್ದ ಮೂಲರಪಟ್ನ ಸೇತುವೆ ಕುಸಿದ ಬಳಿಕ ಈ ಭಾಗದ ಬಸ್‌ಗಳ ಓಡಾಟ ಸ್ಥಗಿತಗೊಂಡಿತ್ತು. ಮಂಗಳೂರಿನಿಂದ ಗಂಜಿಮಠ ಅಥವಾ ಕುಪ್ಪೆಪದವು ಮೂಲಕ ಮೂಲರಪಟ್ಣಕ್ಕೆ ಸಾಗುವ ಬಸ್‌ಗಳು ಮುತ್ತೂರು ಶಾಲೆಯಾಗಿ ಮೂಲರಪಟ್ಣ ತೂಗುಸೇತುವೆವರೆಗೆ ಹೋಗುತ್ತವೆ. ಅಲ್ಲಿಂದ ಮುಂದಕ್ಕೆ ಮೂಲರಪಟ್ಣ ಮಸೀದಿಯತ್ತ ಅಥವಾ ಬಿ.ಸಿ.ರೋಡ್-ಬಂಟ್ವಾಳಕ್ಕೆ ಹೋಗಬೇಕಿದ್ದರೆ ರಿಕ್ಷಾ ಹಿಡಿಯಬೇಕು. ಹಿಂದೆ ಇದ್ದ ಎರಡು ಸರ್ಕಾರಿ ಬಸ್‌ಗಳಲ್ಲಿ ಈಗ ಒಂದು ಇದ್ದರೂ, ಅದರ ಸೇವೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಿದೆ. ಪರಿಣಾಮವಾಗಿ ಈ ಭಾಗದ ಬಹುತೇಕ ಮಂದಿಗೆ ಖಾಸಗಿ ವಾಹನವೇ ಗತಿಯಾಗಿದೆ. ಕಳೆದ ಎರಡೂವರೆ ವರ್ಷದಿಂದ ಈ ಭಾಗದ ಪ್ರಯಾಣಿಕರು, ಅದರಲ್ಲೂ ಮುಖ್ಯವಾಗಿ ಕೂಲಿ ಕಾರ್ಮಿಕರ ಗೋಳು ಹೇಳತೀರದು.

    ಹೊಸ ತೇತುವೆ: ಮೂಲರಪಟ್ಣದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ 2019ರ ಡಿಸೆಂಬರ್‌ನಲ್ಲಿ ಹೊಸ ಸೇತುವೆ ಕಾಮಗಾರಿ ಆರಂಭಗೊಂಡಿದೆ. ಇದು ಒಟ್ಟು 13 ಕೋಟಿ ರೂ. ವೆಚ್ಚದ ಯೋಜನೆ. ಸದ್ಯ ಶೇ.30-40ರಷ್ಟು ಕಾಮಗಾರಿ ನಡೆದಿದೆ. ಪಿಲ್ಲರ್ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಸೇತುವೆಗೆ ಅಗತ್ಯವಿರುವ ಗರ್ಡರ್‌ಗಳನ್ನು ಸ್ಥಳದಲ್ಲೇ ನಿರ್ಮಿಸಲಾಗುತ್ತಿದೆ. ಗುರುಪುರದಲ್ಲಿ ಹೊಸ ಸೇತುವೆ ನಿರ್ಮಿಸಿದ ನಿರ್ಮಾಣ ಸಂಸ್ಥೆಯಿಂದಲೇ ಮೂಲರಪಟ್ಣ ಸೇತುವೆಯೂ ನಿರ್ಮಾಣಗೊಳ್ಳುತ್ತಿದೆ. ಹೊಸ ಸೇತುವೆಗೆ ಒಟ್ಟು 30 ಮೀಟರ್ ಉದ್ದದ ಗರ್ಡರ್ ಬಳಕೆಯಾಗಲಿದ್ದು, ಆರು ಸ್ಪಾೃನ್‌ಗಳಲ್ಲಿ ತಲಾ 4 ಗರ್ಡರ್‌ಗಳಿರುತ್ತವೆ. ಸೇತುವೆ ಎರಡು ಪಾರ್ಶ್ವಗಳ ಎರಡು ಕೊನೆಯ ಕಂಬಗಳ ಸಹಿತ ಒಟ್ಟು 7 ಕಂಬ(ಪಿಲ್ಲರ್) ಒಳಗೊಂಡಿರುತ್ತದೆ. ಒಂದು ಕಂಬದಿಂದ ಮತ್ತೊಂದು ಕಂಬಕ್ಕೆ 28 ಮೀಟರ್ ಅಂತರವಿರುತ್ತದೆ. ಒಂದೂವರೆ ಮೀಟರ್ ಕ್ಯಾರಿಯೇಜ್ ಹಾಗೂ ಏಳೂವರೆ ಮೀಟರ್ ಅಗಲಕ್ಕೆ ಸೇತುವೆ ರಸ್ತೆ ಒಳಗೊಂಡಿರುತ್ತದೆ.

    ಬೇಸಗೆಯಲ್ಲಿ ಕಾಮಗಾರಿಗೆ ಇನ್ನಷ್ಟು ವೇಗ ಸಿಗಲಿದೆ. ಇದು ಗುರುಪುರದಲ್ಲಿ ನಿರ್ಮಿಸಲಾಗಿರುವ ಸೇತುವೆ ಮಾದರಿಯದ್ದಾಗಿದೆ. ಆದರೆ, ಅಲ್ಲಿ ಎರಡೂ ಪಾರ್ಶ್ವದಲ್ಲಿ ಪಾದಚಾರಿಗಳಿಗೆ ಕಾಲುದಾರಿ ವ್ಯವಸ್ಥೆ(ಕ್ಯಾರಿಯೇಜ್) ಇದ್ದರೆ ಇಲ್ಲಿ, ಒಂದು ಪಾಶ್ವದಲ್ಲಿ ಕಾಲುದಾರಿ ನಿರ್ಮಿಸಲಾಗುತ್ತದೆ. ಯಾವುದೇ ಅಡೆತಡೆ ಎದುರಾಗದಿದ್ದರೆ ಜುಲೈ ಕೊನೆಗೆ ಹೊಸ ಸೇತುವೆಯಲ್ಲಿ ಸಾಮಾನ್ಯ ವಾಹನ ಸಂಚಾರಕ್ಕೆ ಅಗತ್ಯವಿರುವ ಎಲ್ಲ ಕಾಮಗಾರಿ ಮುಗಿಯುವ ಸಾಧ್ಯತೆ ಇದೆ.
    ದಾಮೋದರ್ ಎಂ.ಕೆ., ಸೇತುವೆ ನಿರ್ಮಾಣ ಕಾಮಗಾರಿ ಕಂಪನಿ ಮುಖ್ಯ ಇಂಜಿನಿಯರ್

    ಸೇತುವೆ ಮುರಿದು ಬಿದ್ದ ಬಳಿಕ ಈ ಭಾಗದ ಜನರು ಅನುಭವಿಸುತ್ತಿರುವ ಕಷ್ಟದ ಬಗ್ಗೆ ವ್ಯಾಪ್ತಿ ಪ್ರದೇಶದ ಎರಡು ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಭರತ್ ಶೆಟ್ಟಿ ಮತ್ತು ರಾಜೇಶ್ ನಾಯ್ಕ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಸರ್ಕಾರದ ಗಮನಹರಿಸಲಾಗಿತ್ತು. ಎರಡು ಮಳೆಗಾಲ ಕಳೆದರೂ ಸೇತುವೆ ನಿರ್ಮಾಣಗೊಂಡಿಲ್ಲ. ಮುಂದಿನ ಮಳೆಗಾಲದ ಹೊತ್ತಿಗಾದರೂ ಇಲ್ಲೊಂದು ಹೊಸ ಸೇತುವೆ ನಿರ್ಮಾಣವಾಗಹುದೆಂಬ ನಿರೀಕ್ಷೆ ನಮ್ಮದು.
    ಪ್ರವೀಣ್ ಬಂಗೇರ, ಮೂಲರಪಟ್ಣ ನಿವಾಸಿ

    ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಮೂಲರಪಟ್ಣ ಸೇತುವೆ ನಿರ್ಮಾಣ ಕಾಮಗಾರಿ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಒಟ್ಟು 178 ಮೀಟರ್ ಉದ್ದ 10 ಮೀಟರ್ ಅಗಲದ ಈ ಸೇತುವೆ ನಿರ್ಮಾಣ ಕಾರ್ಯ ಈ ವರ್ಷದ ಮೇ ತಿಂಗಳಲ್ಲಿ ಮುಗಿಯಬೇಕಿತ್ತಾದರೂ, ಜುಲೈಯೊಳಗೆ ಪೂರ್ಣಗೊಳ್ಳಲಿದೆ. ಈ ಭಾಗದ ಜನರ ಸಾರಿಗೆ ಸಂಚಾರಕ್ಕೆ ಸಂಬಂಧಿಸಿದ ಸಂಕಷ್ಟಗಳಿಗೆ ತೆರೆ ಬೀಳಲಿದೆ.
    ಸಂಜೀವ ಕುಮಾರ್, ಪಿಡಬ್ಲುೃಡಿ ಮಂಗಳೂರು ವಿಭಾಗದ ಸಹಾಯಕ ಇಂಜಿನಿಯರ್ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts