More

    ಮಂಕಿ ಪಾರ್ಕ್‌ಗಿಲ್ಲ ಅವಕಾಶ, ಅಡ್ಡಿಯಾದ ವನ್ಯಜೀವಿ ಸಂರಕ್ಷಣೆ ಕಾಯ್ದೆ

    ವೀರಾಪುರ ಕೃಷ್ಣ ಗಂಗಾವತಿ

    ತಾಲೂಕಿನ ಆನೆಗೊಂದಿ ಭಾಗದಲ್ಲಿರುವ ಕೋತಿಗಳ ಸಂರಕ್ಷಣೆಗೆ ರೂಪಿಸಿದ್ದ ಮಂಕಿ (ಕೋತಿ) ಪಾರ್ಕ್‌ಗೆ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡ್ಡಿಯಾಗಿದ್ದು, ಅರಣ್ಯಇಲಾಖೆಯು ಪ್ರಸ್ತಾವನೆ ಬಿಟ್ಟಿದೆ.

    ಆನೆಗೊಂದಿ, ಪಂಪಾಸರೋವರ, ಹನುಮನಹಳ್ಳಿ, ವಿರುಪಾಪುರಗಡ್ಡಿ, ಅಂಜನಾದ್ರಿ ಬೆಟ್ಟದಲ್ಲಿ ಕೆಂಪು ಮತ್ತು ಕಪ್ಪು ಕೋತಿಗಳಿದ್ದು(ಲಂಗೂರ್), ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆ. ಅಂಜನಾದ್ರಿಬೆಟ್ಟ ಮತ್ತು ಪಂಪಾಸರೋವರದ ಬಳಿ ಕೋತಿಗಳಿಗೆ ಆಹಾರ ನೀಡುವುದು ಇತ್ತೀಚಿನ ದಿನಗಳಲ್ಲಿ ್ಯಾಷನ್. ಸಚಿವ, ಜನಪ್ರತಿನಿಧಿಗಳಿಂದ, ಅಧಿಕಾರಿ ವರ್ಗದವರೂ ಕೋತಿಗಳಿಗೆ ಆಹಾರ ನೀಡುತ್ತಿದ್ದು, ವನ್ಯಜೀವಿ ರಕ್ಷಣೆ ಕಾಯ್ದೆಯಡಿ ಅಪರಾಧ. ನದಿ ತೀರದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ನೇರಳೆ, ಆಲ, ಬಸರಿ ಇತರೆ ಹಣ್ಣುಗಳೇ ಕೋತಿಗಳಿಗೆ ಆಧಾರವಾಗಿದ್ದು, ಬಾಳೆ ವಾಣಿಜ್ಯ ಬೆಳೆ ಹಿನ್ನೆಲೆಯಲ್ಲಿ ತಿನ್ನಲು ಅವಕಾಶವಿಲ್ಲ. ಕೋತಿಗಳ ರಕ್ಷಣೆಗೆ ಮಂಕಿ ಪಾರ್ಕ್ ಯೋಜನೆ ಜನಪ್ರತಿನಿಧಿಗಳ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ಒಪ್ಪುತ್ತಿಲ್ಲ.

    ಐತಿಹಾಸಿಕ ಹಿನ್ನೆಲೆ: ಆನೆಗೊಂದಿ ಭಾಗ ಕಿಷ್ಕಿಂದಾ ಕ್ಷೇತ್ರದ ಹಿನ್ನೆಲೆಯಲ್ಲಿದ್ದು, ರಾಮಾಯಣದ ಕೆಲಭಾಗ ಉಲ್ಲೇಖಿಸುವ ಕುರುಹಗಳಿವೆ. ವಾನರಗಳೇ ಹೆಚ್ಚಿದ್ದ ಪ್ರದೇಶದಲ್ಲಿ ಮಧುವನ ಇದ್ದ ಬಗ್ಗೆ ಇತಿಹಾಸದಲ್ಲಿದ್ದು, ಅಂಜನಾದ್ರಿ ಬೆಟ್ಟದ ಮುಂಭಾಗದಲ್ಲಿ ಮಧುವನಕ್ಕೆ ಮೀಸಲು ಜಾಗವಿದೆ. ಏಳು ಗುಡ್ಡದ ಸಾಲಿನಲ್ಲಿ ಹಣ್ಣುಗಳನ್ನು ತಿಂದು ಬದುಕುತ್ತಿದ್ದ ಕೋತಿಗಳು ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರಗಳತ್ತ ಸುಳಿಯುತ್ತಿದ್ದು, ಭಕ್ತರು ನೀಡುವ ಆಹಾರವೇ ಆಧಾರ. ಬಾಳೆ, ಶೇಂಗಾ, ಮಾವುಗಳಿಗೆ ಕೋತಿಗಳು ಒಗ್ಗಿಕೊಂಡಿದ್ದು, ಬೆಟ್ಟಗಳತ್ತ ತೆರಳುತ್ತಿಲ್ಲ. ಆಹಾರಕ್ಕಾಗಿ ಧಾರ್ಮಿಕ ಕ್ಷೇತ್ರಗಳಿಗೆ ಲಗ್ಗೆಯಿಡುವ ಕೋತಿಗಳು ಕೆಲವೊಮ್ಮೆ ಜನ ಮೇಲೆ ದಾಳಿ ನಡೆಸಿದ ಉದಾಹರಣೆಗಳಿವೆ. ಇದೇ ಕಾರಣಕ್ಕೆ ಮಂಕಿ ಪಾರ್ಕ್ ನಿರ್ಮಿಸುವ ಒತ್ತಾಯಕ್ಕೆ ಅರಣ್ಯ ಕಾಯ್ದೆಯಿಂದ ಬ್ರೇಕ್ ಬಿದ್ದಿದೆ.

    ಬಾಳೆ, ಗದ್ದೆಗಳು ರಕ್ಷಣೆಗೆ ಅವಶ್ಯಕ: ಆನೆಗೊಂದಿ ತುಂಗಭದ್ರಾ ನದಿ ತೀರದಲ್ಲಿ ನೀರ್‌ನಾಯಿ ಸಂರಕ್ಷಣೆ ಪ್ರದೇಶ ಗುರುತಿಸಿದ್ದರೂ, ಸೂಕ್ತ ವ್ಯವಸ್ಥೆಯಾಗುತ್ತಿಲ್ಲ. ಅಳಿವಿನ ಅಂಚಿನ ಪ್ರಾಣಿಗಳ ರಕ್ಷಣೆಗೆ ಇಲಾಖೆ ಗಮನಹರಿಸುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಚಿರತೆ ಮತ್ತು ಕರಡಿ ಹಾವಳಿ ಹೆಚ್ಚುತ್ತಿದ್ದು, ಧಾಮ ನಿರ್ಮಾಣದ ಪ್ರಸ್ತಾವನೆಗೆ ವೇಗ ದೊರೆಯುತ್ತಿಲ್ಲ. ಕೊಪ್ಪಳ, ಗಂಗಾವತಿ, ಕನಕಗಿರಿ ತಾಲೂಕು ವ್ಯಾಪ್ತಿಯಲ್ಲಿ ಧಾಮಕ್ಕೆ ಸೂಕ್ತ ಭೂಮಿಯಿದ್ದರೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನನೆಗುದಿಗೆ ಬಿದ್ದಿದೆ. ಬಾಳೆ ಗದ್ದೆಗಳಿಗೆ ಲಗ್ಗೆಯಿಡುವ ಕೋತಿಗಳ ನಿಯಂತ್ರಣಕ್ಕೆ ಮಂಕಿ ಪಾರ್ಕ್ ನಿರ್ಮಿಸಬೇಕಿದೆ.

    ಕೆಂಪು ಮತ್ತು ಕಪ್ಪು ಕೋತಿಗಳು ಆನೆಗೊಂದಿ ಭಾಗದಲ್ಲಿ ಹೆಚ್ಚಿದ್ದು, ಭಕ್ತರು ನೀಡುವ ಆಹಾರವೇ ಆಧಾರವಾಗಿದೆ. ಕೋತಿಗಳ ಸ್ವಚ್ಛಂದಕ್ಕಾಗಿ ಮಂಕಿ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಆಸಕ್ತಿ ವಹಿಸಬೇಕಿದೆ.
    | ಡಿ.ಎಂ.ಸುರೇಶ ಆನೆಗೊಂದಿ ಗ್ರಾಮಸ್ಥ

    ಜನವಸತಿ ಪ್ರದೇಶದಲ್ಲಿ ವಾಸಿಸುವ ಆನೆಗೊಂದಿ ಭಾಗದ ಕೋತಿಗಳಿಗಾಗಿ ಪ್ರತ್ಯೇಕ ಪಾರ್ಕ್ ನಿರ್ಮಿಸುವ ಪ್ರಸ್ತಾವನೆ ಇಲಾಖೆ ಒಪ್ಪಲ್ಲ. ಅಳಿವಿನ ಅಂಚಿನಲ್ಲಿರುವ ಇತರ ಜಾತಿಗಳ ಕೋತಿಗಳು ಈ ಭಾಗದಲ್ಲಿಲ್ಲ. ಗಂಗಾವತಿ, ಕೊಪ್ಪಳ ಭಾಗದ ನದಿ ತೀರದಲ್ಲಿ ಕೋತಿಗಳ ಆಹಾರಕ್ಕೆ ಹಲವು ಜಾತಿಯ ಹಣ್ಣಿನ ಮರಗಳಿದ್ದು,ಆಹಾರದ ಕೊರತೆಯಿಲ್ಲ. ಧಾರ್ಮಿಕ ಸ್ಥಳದಲ್ಲಿ ಕೋತಿಗಳಿಗೆ ಆಹಾರ ನೀಡುವುದು ಅಪರಾಧವಾಗಿದ್ದು, ನಮ್ಮ ನಿಯಂತ್ರಣದಲ್ಲಿಟ್ಟು ಕೊಂಡಂತೆ ಆಗುತ್ತದೆ. ಸರ್ಕಾರಕ್ಕೆ ಮಂಕಿ ಪಾರ್ಕ್ ಪ್ರಸ್ತಾವನೆ ಸಲ್ಲಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ. ವನ್ಯ ಜೀವಿಗಳ ರಕ್ಷಣೆಗೆ 10ಸಾವಿರ ಹೆಕ್ಟೇರ್ ಪ್ರದೇಶದ ಭೂಮಿಯಿದ್ದು, ಚಿರತೆ, ಕರಡಿ, ತೋಳ, ನರಿಗಳನ್ನೊಳಗೊಂಡ ವನ್ಯಧಾಮ ನಿರ್ಮಿಸುವ ಪ್ರಸ್ತಾವನೆಯಿದೆ.
    | ಶಿವರಾಜ ಮೇಟಿ ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts