More

    ಪಶ್ಚಿಮ ಘಟ್ಟದಲ್ಲಿ ಮಂಕಿ ಪಾರ್ಕ್

    – ಅವಿನ್ ಶೆಟ್ಟಿ, ಉಡುಪಿ
    ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಂಗಗಳ ಉಪಟಳ ಮಿತಿ ಮೀರಿದ್ದು, ಕೃಷಿಕರ ನಿದ್ದೆಗೆಡಿಸಿದೆ. ಈ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ಚಿಂತನೆಯಲ್ಲಿದ್ದ ಮಂಕಿ ಪಾರ್ಕ್ ಯೋಜನೆ ಜಾರಿಗೆ ಮತ್ತೆ ಕಾಲ ಕೂಡಿ ಬಂದಿದೆ. ಪಶ್ಚಿಮ ಘಟ್ಟದಲ್ಲಿ ವ್ಯವಸ್ಥಿತವಾಗಿ ಮಂಕಿ ಪಾರ್ಕ್ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ.
    ಈ ಹಿಂದೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಮಂಕಿ ಪಾಕ್ ನಿರ್ಮಿಸಲು ಯೋಜನೆ ಸಿದ್ಧವಾಗಿತ್ತಾದರೂ, ಈ ಸಣ್ಣ ವ್ಯಾಪ್ತಿಗಿಂತ ವಿಶಾಲ ಅರಣ್ಯ ಪ್ರದೇಶದಲ್ಲಿ ಮಂಕಿ ಪಾಕ್ ನಿರ್ಮಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಆಗುಂಬೆ ಅಥವಾ ಕುದುರೆಮುಖ ವ್ಯಾಪ್ತಿ ವನ್ಯಜೀವಿ ಅರಣ್ಯದಲ್ಲಿ 300 ಎಕರೆ ಅರಣ್ಯ ಜಾಗವನ್ನು ಗುರುತಿಸಲಾಗುವುದು.

    ಜಿಲ್ಲೆಯಲ್ಲಿ ಎರಡು ದಶಕಗಳಿಂದ ಕೃಷಿ ಚಟುವಟಿಕೆಗಳಿಗೆ ಕೋತಿಗಳಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ದಿನೇದಿನೆ ಸಮಸ್ಯೆ ಉಲ್ಬಣವಾಗುತ್ತಿದೆ. ಇನ್ನೊಂದೆಡೆ ಹೆಬ್ರಿ, ಆಗುಂಬೆ, ಕಾರ್ಕಳ ಭಾಗದಲ್ಲಿ ಮಂಗಗಳ ಮಾರಣ ಹೋಮವೂ ನಡೆಯುತ್ತಿದೆ. ಅರಣ್ಯ ಭಾಗ ದಲ್ಲಿ ಆಹಾರ ಸಿಗದೆ ಮಂಗಗಳು ಕೃಷಿಕರ ತೋಟಗಳಿಗೆ ಲಗ್ಗೆ ಇಡುತ್ತಿವೆ. ರೈತರು ಸರ್ಕಾರಕ್ಕೆ ಎಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ ಸಮಸ್ಯೆಯಿಂದ ಮುಕ್ತಿ ಹಾಗೂ ಪರಿಹಾರ ಸಿಗಲಿಲ್ಲ. ಇದೀಗ ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಂಕಿ ಪಾರ್ಕ್ ನಿರ್ಮಾಣ ಪ್ರಸ್ತಾವನೆ ಯನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.

    ನೆನೆಗುದಿಗೆ ಬಿದ್ದ ಅಧ್ಯಯನ ವರದಿ: ಮಂಕಿ ಪಾರ್ಕ್ ಸಾಧಕ-ಬಾಧಕ ತಿಳಿದುಕೊಳ್ಳುವ ನಿಟ್ಟಿನಲ್ಲಿ 2008ರಲ್ಲಿ ಮೂಡುಬಿದಿರೆ ಎಸಿಎಫ್ ಸದಾಶಿವ ಭಟ್ ನೇತೃತ್ವದಲ್ಲಿ ನಾಲ್ವರು ಅರಣ್ಯ ಇಲಾಖೆ ಅಧಿಕಾರಿಗಳು, ನಾಲ್ವರು ರೈತರ ಜಂಟಿ ಸಮಿತಿಯನ್ನು ಹಿಮಾಚಲ ಪ್ರದೇಶಕ್ಕೆ ಅಧ್ಯಯನಕ್ಕಾಗಿ ಕಳುಹಿಸಲಾಗಿತ್ತು. 10 ಎಕರೆ ಜಾಗದಲ್ಲಿ ನಿರ್ಮಿಸಿದ ಮಂಕಿ ಪಾರ್ಕ್‌ನಲ್ಲಿ ಮಂಗಗಳು ಹೊಡೆದಾಡಿ, ಕಚ್ಚಾಡಿಕೊಂಡು ಸಾಯುತ್ತಿದ್ದವು. ಅವುಗಳಿಗೆ ಆಹಾರ, ನೀರನ್ನು ವ್ಯವಸ್ಥಿತವಾಗಿ ನೀಡುತ್ತಿದ್ದರೂ, ಸಮೂಹ, ಸ್ವತಂತ್ರವಾಗಿ ಜೀವಿಸುವ ಮಂಗಗಳಿಗೆ ಬಂಧಿಖಾನೆಯಂತಹ ಪರಿಸ್ಥಿತಿ ಸಹ್ಯವಾಗುತ್ತಿರಲಿಲ್ಲ. ಹಾಗಾಗಿ ಯೋಜನೆ ವಿಫಲವಾಗಿತ್ತು. ಮಂಗಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮತ್ತು ಇತರೆ ಅಭಯಾರಣ್ಯಗಳಿಗೆ ಸ್ಥಳಾಂತರ ಮೊದಲಾದ ಕಾರಣಗಳಿಗಾಗಿ ಅಧ್ಯಯನ ವರದಿ ಸಹಿತ 27 ಕೋಟಿ ರೂ. ಮೊತ್ತದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು ಎಂದು ಅಂದಿನ ಸಮಿತಿಯಲ್ಲಿದ್ದ ಸತ್ಯನಾರಾಯಣ ಉಡುಪ ತಿಳಿಸಿದ್ದಾರೆ. ಸದ್ಯ ಅಧ್ಯಯನ ವರದಿ ನನೆಗುದಿಗೆ ಬಿದ್ದಿದೆ.

    ರೈತರಿಗೆ ಅನುಕೂಲವಾಗುವಂತೆ ಆಗುಂಬೆ ಅಥವಾ ಕುದುರೆಮುಖದ 300 ಎಕರೆ ಪ್ರದೇಶದಲ್ಲಿ ಮಂಕಿ ಪಾರ್ಕ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಹಿಂದಿನ ಅಧ್ಯಯನ ಸಮಿತಿ ನೀಡಿದ ವರದಿಯನ್ನು ಮರುಪರಿಶೀಲಿಸಿ ತಜ್ಞರು, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಂಗಗಳ ಉಪಟಳ ತಡೆ ಬಗ್ಗೆ ಶೀಘ್ರ ಕ್ರಮಕೈಗೊಳ್ಳಲಾಗುವುದು.
    – ಸುನೀಲ್ ಕುಮಾರ್, ಶಾಸಕ, ಕಾರ್ಕಳ

    ಪಶ್ಚಿಮ ಘಟ್ಟದಲ್ಲಿ ಮಂಕಿ ಪಾರ್ಕ್ ನಿರ್ಮಿಸುವುದಾದರೆ ವಿಶಾಲ ವ್ಯಾಪ್ತಿ ಅರಣ್ಯದಲ್ಲಿ ಹಣ್ಣು, ಹೂ ಬಿಡುವ ಮರಗಳಿರಬೇಕು. ಹಿಮಾಚಲ ಪ್ರದೇಶದಲ್ಲಿ ಸಂತಾನಶಕ್ತಿ ಹರಣ ಚಿಕಿತ್ಸೆ ಯಶಸ್ವಿಯಾಗಿದೆ. ರಾಜ್ಯದ ಬಂಡೀಪುರ, ಕಾವೇರಿ ಅಭಯಾರಣ್ಯದಲ್ಲಿ ಮಂಗಗಳ ಸಂತತಿ ಕಡಿಮೆ. ಮಂಗಗಳನ್ನು ಅಲ್ಲಿಗೆ ಸ್ಥಳಾಂತರಿಸಬಹುದು. ವನ್ಯಜೀವಿ ಮೀಸಲು ಅರಣ್ಯದ ಗಡಿಯಲ್ಲಿ ಎಲಿಫೆಂಟ್ ಪ್ರೊಟಕ್ಷನ್ ಟ್ರಂಚ್ ನಿರ್ಮಿಸಿದರೆ ಪ್ರಾಣಿಗಳು ನಾಡಿಗೆ, ಕಾಡಿಗೆ ಮನುಷ್ಯರು ಹೋಗುವುದು ತಪ್ಪುತ್ತದೆ.
    – ಸತ್ಯನಾರಾಯಣ ಉಡುಪ, ಪ್ರಧಾನ ಕಾರ್ಯದರ್ಶಿ, ಭಾರತೀಯ ಕಿಸಾನ್ ಸಂಘ, ಉಡುಪಿ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts